Site icon Vistara News

Acid attack: ಮನೆ ಬಾಗಿಲು ತೆರೆಯದ ಹಿನ್ನೆಲೆ ವಿವಾಹಿತ ಪ್ರಿಯತಮೆಗೆ ಆ್ಯಸಿಡ್ ಎರಚಿದ ಪ್ರಿಯಕರ!

Acid attack

ಬಾಗಲಕೋಟೆ: ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ವಿವಾಹಿತ ಪ್ರಿಯತಮೆಗೆ ಪ್ರಿಯಕರ ಆ್ಯಸಿಡ್ ಎರಚಿದ ಘಟನೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ. ಆ್ಯಸಿಡ್ ದಾಳಿಯಿಂದ (Acid attack) ಮಹಿಳೆಗೆ ಎಡಗಣ್ಣು, ಮುಖದ ಭಾಗ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.

ಲಕ್ಷ್ಮಿ ಬಡಿಗೇರ (33) ಆ್ಯಸಿಡ್ ದಾಳಿಗೊಳಗಾದ ಮಹಿಳೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ಆರೋಪಿ. ಮೂರ್ತಿ ತಯಾರಿಕೆ ಕೆಲಸ‌ ಮಾಡುವ ಮೌನೇಶ್ ಹಾಗೂ ಲಕ್ಷ್ಮಿ ವಿಜಯಪುರ ನಗರದ ಮೂರನಕೇರಿ ಮೂಲದವರು. ಇಬ್ಬರೂ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಆದರೆ, ಯಾವುದೇ ಡಿವೋರ್ಸ್ ಪಡೆಯದೇ ಸಹಜೀವನ ನಡೆಸುತ್ತಿದ್ದರು. ಹೀಗಿದ್ದರೂ ಲಕ್ಷ್ಮಿ ಬಡಿಗೇರ‌‌ ಮೇಲೆ ಪದೇಪದೆ ಮೌನೇಶ್ ಸಂಶಯಪಡುತ್ತಿದ್ದ. ಇದರಿಂದ‌‌ ಮೇಲಿಂದ ಮೇಲೆ‌ ಜಗಳವಾಗುತ್ತಿತ್ತು.

ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದ ಮೌನೇಶ್ ಸೋಮವಾರ ರಾತ್ರಿ‌ ಮನೆಗೆ ವಾಪಸ್ ಬಂದಿದ್ದ. ಈ ವೇಳೆ ಲಕ್ಷ್ಮಿ ಬಾಗಿಲು ತೆರೆದಿರಲಿಲ್ಲ. ಇದರಿಂದ‌ ಸಿಟ್ಟಿಗೆದ್ದ ಮೌನೇಶ್ ಕಿಟಕಿ ತೆಗೆದು ಆ್ಯಸಿಡ್ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಬಡಿಗೇರ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ಸಿಡಿದಿದೆ. ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಅಪಾಯದಿಂದ ಮಹಿಳೆ ಪಾರಾಗಿದ್ದಾರೆ.

ಯುವತಿಯರ ಫೋಟೊ ಮಾರ್ಫ್ ಮಾಡಿ ಹರಿಬಿಡ್ತಿದ್ದ ಯುವಕನ ಬಂಧನ

ಬೆಂಗಳೂರು: ಯುವತಿಯರ ಫೋಟೋ ಮಾರ್ಫ್ ಮಾಡಿ ಹರಿಬಿಡ್ತಿದ್ದ ಯುವಕನನ್ನು ನಗರದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಫೋಟೊಗಳನ್ನು ಆರೋಪಿ ಮಾರ್ಫ್‌ ಮಾಡುತ್ತಿದ್ದ. ಎಡಿಟ್‌ ಮಾಡಿದ ಫೋಟೊಗಳನ್ನು ಇನ್ಸ್ ಸ್ಟಾಗ್ರಾಮ್ ಮೂಲಕ ಶೇರ್ ಮಾಡುತ್ತಿದ್ದ.

ಇದನ್ನೂ ಓದಿ | Robbery Case: ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ದರೋಡೆ; ಇಬ್ಬರು ಆರೋಪಿಗಳ ಬಂಧನ

ಇತ್ತೀಚೆಗೆ ಹದಿನೈದು ವರ್ಷದ ಬಾಲಕಿಯೊಬ್ಬಳ ಫೋಟೊವನ್ನು ಆರೋಪಿ ಮಾರ್ಫ್ ಮಾಡಿದ್ದ. ಈ ಬಗ್ಗೆ ಪೋಷಕರಿಂದ ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿರುವ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದಾರೆ. ಜತೆಗೆ ಇಬ್ಬರು ಕಾನೂನು ಸಂಘರ್ಷಕ್ಕೆ‌ ಒಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯಿಂದ ಮೂರು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

Exit mobile version