ಬೆಂಗಳೂರು: ಸುಂಕದಕಟ್ಟೆ ಬಳಿ ಆ್ಯಸಿಡ್ ದಾಳಿಗೆ ಒಳಗಾಗಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ಶನಿವಾರ ದಾಖಲಿಸಿಕೊಂಡಿದ್ದಾರೆ.
ಸದ್ಯ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಂರಸ್ತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಸಿಡ್ ದಾಳಿ ಕೋರ ಯಾರು..? ಎಷ್ಟೊತ್ತಿಗೆ ಘಟನೆ ನಡೆಯಿತು..? ಹೇಗೆ ಅಟ್ಯಾಕ್ ಮಾಡಿದ್ದ…? ಆ್ಯಸಿಡ್ ಯಾವುದರಲ್ಲಿ ತಂದಿದ್ದ..? ಆ್ಯಸಿಡ್ ದಾಳಿಗೊಳಗಾದ ಬಳಿಕ ಏನಾಯ್ತು..? ದೇಹದ ಯಾವ ಭಾಗಗಳು ಆ್ಯಸಿಡ್‌ನಿಂದ ಗಾಯಕ್ಕೊಳಗಾಗಿವೆ.? ಹೀಗೆ ಎಲ್ಲಾ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಯುವತಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದ, ಪೊಲೀಸರು ದಾಖಲಿಸಿಕೊಂಡಿದ್ದಾರೆ. ಯುವತಿಯ ಉತ್ತರಗಳನ್ನು ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪಡೆಯಲಾಗಿದ್ದು, ಆರೋಪಿಯನ್ನು ಕಾನೂನು ಕುಣಿಕೆಗೆ ಸಿಕ್ಕಿಸಲು ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯ ಆರೋಗ್ಯ ವಿಚಾರಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ತಜ್ಞರ ಜತೆ ಸಮಾಲೋಚನೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ ಸುಧಾಕರ್, ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರನ್ನು ಮಾತುಕತೆ ನಡೆಸಲಾಗಿದೆ. ಆರೋಪಿಗೆ, ಆತನ ಕ್ರೌರ್ಯಕ್ಕೆ ತಕ್ಕಂತೆ ಶಿಕ್ಷೆ ಆಗಲಿದೆ. ಸರ್ಕಾರ ನಿಮ್ಮ ಜತೆ ಇದೆ, ನೀವು ಧೈರ್ಯವಾಗಿರಬೇಕು ಎಂದು ಹೇಳಿದ್ದೇನೆ. ಈ ಘಟನೆಯಿಂದ ಯುವತಿಗೆ 30% ಸುಟ್ಟ ಗಾಯಗಳಾಗಿವೆ. ಶಕ್ತಿ ಮೀರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆಗೆ ಬೇಕಾದ ಎಲ್ಲ ವೆಚ್ಚವನ್ನೂ ಸರ್ಕಾರದಿಂದ ಭರಿಸಲಾಗುವುದು. ವೈಯಕ್ತಿಕವಾಗಿ ₹5 ಲಕ್ಷ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ಘಟನೆಯ ಹಿನ್ನೆಲೆ
ಗುರುವಾರ ಬೆಳಗ್ಗೆ 8-30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದಾಗಿ ಗಮನಿಸಿದ ಯುವತಿ ಕೆಳಗೆ ಓಡಲು ಪ್ರಯತ್ನಿಸಿದ ಕೂಡಲೆ ನಾಗೇಶ ಹಿಂಬಾಲಿಸಿಕೊಂಡು ಬಂದು ಆಸಿಡ್ ಅನ್ನು ಯುವತಿಯ ಮೈ ಮೇಲೆ ಹಾಕಿ ಓಡಿ ಹೋಗಿದ್ದ.
ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್ ಬಿದ್ದು ಗಾಯಗಳಾಗಿದ್ದು, ಯುವತಿ ಕೂಡಲೆ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ನಂತರ ಆ್ಯಂಬುಲೆನ್ಸ್ ಮೂಲಕ ಯುವತಿಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದ. ತನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಸುಮ್ಮನಾಗಿದ್ದ. ಆದರೆ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಆ್ಯಸಿಡ್ ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಥಿಕ್ ಗ್ಲೌಸ್‌ನಲ್ಲಿ ಆ್ಯಸಿಡ್
ಯುವತಿಯ ಕೆಲಸದ ಜಾಗಕ್ಕೆ ಆಟೋದಲ್ಲಿ ಬಂದಿದ್ದ ದಾಳಿಕೋರ, ಥಿಕ್ ಗ್ಲೌಸ್ ಒಳಗೆ ಆಸಿಡ್ ತುಂಬಿಕೊಂಡು ಅಡಗಿಸಿಟ್ಟುಕೊಂಡಿದ್ದ. ಪಿಂಕ್ ಬಣ್ಣದ ಪೂರ್ಣ ತೋಳಿನ ಶರ್ಟ್ ಹಾಗು ಬ್ಲೂ ಜೀನ್ಸ್ ಧರಿಸಿದ್ದ ಆರೋಪಿ, ಕೃತ್ಯ ಎಸಗಿದ ಬಳಿಕ ಪುನಃ ಆಟೋದಲ್ಲೆ ಪರಾರಿ ಆಗಿದ್ದಾನೆ. ಇದೆಲ್ಲವೂ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ | ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ; ಉಡುಪಿಯಲ್ಲಿ ಸಂತೋಷ್ ಸಾವು
ಶಾಸಕರಿಂದ ₹1 ಲಕ್ಷ
ಆ್ಯಸಿಡ್ ದಾಳಿ ಕುರಿತು ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ, ಇಂತಹ ಘಟನೆ ನಡೆಯಬಾರದಿತ್ತು. ಎಲ್ಲರೂ ಕನಿಕರ ಪಡಬೇಕಿದೆ. ವೈಯಕ್ತಿಕವಾಗಿ ₹1 ಲಕ್ಷ ನೀಡಿದ್ದೇನೆ. ಇಂತಹ ಘಟನೆಗಳನ್ನು ತಡೆಗಟ್ಟಲು ಸರ್ಕಾರ ಕಾನೂನಿನಲ್ಲಿ ಬದಲಾವಣೆ ತರಬೇಕು. ಶೀಘ್ರವಾಗಿ ಕಠಿಣವಾದ ಶಿಕ್ಷೆಯನ್ನು ಕೊಡುವ ಕಾನೂನು ತರಬೇಕು ಎಂದು ಹೇಳಿದ್ದಾರೆ..