ಶಿವಮೊಗ್ಗ: ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Result) ಫಲಿತಾಂಶ ಪ್ರಕಟವಾಗಿದೆ. ಇನ್ನೇನು ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪೋಷಕರು ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಒಳ್ಳೆಯದು? ಎಲ್ಲಿ ಎಷ್ಟು ಫೀ ಇದೆ? ಯಾವ ಶಾಲೆಗೆ ಸೇರಿಸಬೇಕು ಎಂದರೆ ಎಷ್ಟು ಡೊನೇಷನ್ ಕೊಡಬೇಕು ಎಂಬುದು ಸೇರಿ ಹಲವು ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಪ್ರಾಥಮಿಕ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಖಾಸಗಿ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಖಾಸಗಿ ಶಾಲೆಗಳಿಗೆ ಒಂದು ಸಲಹೆ ಕೊಡುತ್ತೇನೆ. ಕಾನೂನಿನ ಪ್ರಕಾರವೇ ಶಾಲೆಯಲ್ಲಿ ಫೀಸ್ ತೆಗೆದುಕೊಳ್ಳಬೇಕು. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಶಾಲೆಗಳು ಸಹಾಯ ಮಾಡಬೇಕು. ಅಕ್ರಮವಾಗಿ ಫೀಸ್ ತೆಗೆದುಕೊಂಡರೆ, ಹೆಚ್ಚಿನ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂಬುದಾಗಿ ಅವರು ಶಿವಮೊಗ್ಗದಲ್ಲಿ ಎಚ್ಚರಿಕೆ ನೀಡಿದರು.
ಅಂಕಿತಾಗೆ ವೈಯಕ್ತಿಕ ಸಹಾಯ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೇ ಮೊದಲ ರ‍್ಯಾಂಕ್ ಬಂದ ಬಾಗಲಕೋಟೆ ಜಿಲ್ಲೆಯ ಅಂಕಿತಾ ಕೊನ್ನೂರ್‌ಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಮಧು ಬಂಗಾರಪ್ಪ ಘೋಷಿಸಿದರು. “ಏನಾದರೂ ಸಹಾಯ ಬೇಕು ಎಂದರೆ ಕೇಳು ಎಂಬುದಾಗಿ ಅಂಕಿತಾಗೆ ಹೇಳಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಆಕೆಗೆ ಸಿಗುತ್ತವೆ. ಉನ್ನತ ಶಿಕ್ಷಣಕ್ಕೆ ಬೇಕಾದರೆ ಆಕೆಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ” ಎಂಬುದಾಗಿ ಮಧು ಬಂಗಾರಪ್ಪ ಹೇಳಿದರು.
“ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ನಾನೂ ಗಮನಿಸಿದ್ದೇನೆ. ಸರ್ಕಾರಿ ಶಾಲೆಗಳ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇನೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಪುಣ್ಯದ ಕೆಲಸವಾಗಿದ್ದು, ಹಂತ ಹಂತವಾಗಿ ಎಲ್ಲ ಕೆಲಸವನ್ನೂ ಮಾಡುತ್ತೇವೆ. ಮಳೆಗಾಲ ಸಮೀಪಿಸುತ್ತಿದ್ದು, ಸರ್ಕಾರಿ ಶಾಲೆಗಳ ದುರಸ್ತಿಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದರು. ಹಾಸನ ಪೆನ್‌ಡ್ರೈ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕಾನೂನು ಇದೆ, ಅದರ ಅನ್ವಯ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಷ್ಟೇ ಹೇಳಿದರು.
ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ