ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪೇಸಿಎಂ (PayCM) ಅಭಿಯಾನವು ಕಾಂಗ್ರೆಸ್ ಪಕ್ಷದ ನೈತಿಕ ಅದಃಪತನವನ್ನು ತೋರಿಸುತ್ತದೆ ಎಂದು ಸಿರಿಗೆರೆ ಗ್ರಾಮದಲ್ಲಿ ಹೇಳಿದರು. ಕಾಂಗ್ರೆಸ್ ಕೊಳಕು ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಈ ಅಭಿಯಾನದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಕ್ರಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಪಿಎಫ್ಐ ನಾಯಕರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ದಾಳಿ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪಿಎಫ್ಐ, ಎಸ್‌ಡಿಪಿಐ ಕಚೇರಿ, ಮುಖಂಡರ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಕಾಂಗ್ರೆಸ್ ಲಿಂಗಾಯತ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಇದರ ಭಾಗವಲ್ಲ ಮತ್ತು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲಎಂದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ 95 ರಿಂದ 100 ಸ್ಥಾನಗಳು ದೊರಕಬಹುದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಸಮೀಕ್ಷೆಗಳು ಒಂದೊಂದು ರೀತಿಯಲ್ಲಿ ಬರುತ್ತವೆ. ಅದಕ್ಕಿಂತ ಜನರ ನಾಡಿ ಮಿಡಿತ ನಮಗೆ ಗೊತ್ತಿದೆ. ನಾವೂ 30-35 ವರ್ಷ ಗಳ ಕಾಲ ರಾಜಕಾರಣದಲ್ಲಿದ್ದೇವೆ. ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಇದೇ ವೇಳೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟವನ್ನು ಯಾವಾಗ ವಿಸ್ತರಿಸಬೇಕು ಕುರಿತು ದಿಲ್ಲಿ ಭೇಟಿ ಬಳಿಕ ನಿರ್ಧರಿಸಲಾಗುವುದು. ಆಗಲೇ ಈ ಮಾಹಿತಿ ನೀಡುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ | PayCm | ಪೇಸಿಎಂ ಚುರುಕುಗೊಳಿಸಿದ ಕಾಂಗ್ರೆಸ್, ಬೂತ್ ಮಟ್ಟದಲ್ಲೂ ಅಭಿಯಾನ!