ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ಕೆ.ಆರ್.ಪೇಟೆಯಲ್ಲಿ ಆ ಪಕ್ಷದ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವದಂತಿ ಬಗ್ಗೆ ಸ್ಪಷ್ಟನೆ ನೀಡಬೇಕು. ಜತೆಗೆ ಕ್ಷೇತ್ರದಲ್ಲಿ ಮೊದಲು ಪಕ್ಷದ ಅಭ್ಯರ್ಥಿ ಯಾರು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಕಾರಿಗೆ ಮೊಟ್ಟೆ ಎಸೆದು, ಕೈಗೆ ಬಳೆ ನೀಡಿ ಕಾರ್ಯಕರ್ತರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಸೋಮವಾರ (ಮಾ.6) ನಡೆದ ಪ್ರಜಾಧ್ವನಿ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಘಟನೆ ನಡೆದಿದೆ. ಕ್ಷೇತ್ರದಲ್ಲಿ ಈ ಬಾರಿ ಆರು ಮಂದಿ ಆಕಾಂಕ್ಷಿಗಳಿದ್ದು, ಅವರೆಲ್ಲರೂ ನಾರಾಯಣಗೌಡ ಪರ ಕೆಲಸ ಮಾಡುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕೂಡಲೇ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಕು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿ ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸಚಿವ ನಾರಾಯಣಗೌಡ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಾಂಗ್ರೆಸ್ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ | Coffee-Tea Scam: ಸಿದ್ದರಾಮಯ್ಯ ಮನೆಯಲ್ಲಿ ಕಾಫಿ-ಟೀ-ತಿಂಡಿಗೆ 200 ಕೋಟಿ ರೂ. ವೆಚ್ಚ: ಬಿಜೆಪಿ ನಾಯಕ ಎನ್.ಆರ್. ರಮೇಶ್ ಆರೋಪ
ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಮುಂದೂಡಿದ್ದಾರೆ. ಸಭೆ ಆರಂಭಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ. ಎಲ್ಲವನ್ನೂ ಪಕ್ಷ ನಿರ್ಧಾರ ಮಾಡಲಿದೆ ಎಂದು ಗಂಗಾಧರ್ ತಿಳಿಸಿದ್ದಾರೆ.
ಕೆ.ಸಿ. ನಾರಾಯಣಗೌಡರು ನಮ್ಮ ಜತೆ ಮಾತನಾಡಿಲ್ಲ: ಡಿ.ಕೆ.ಶಿವಕುಮಾರ್
ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸ್ಥಳೀಯ ನಾಯಕರ ವಿರೋಧ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಕೆ.ಸಿ. ನಾರಾಯಣಗೌಡರು ನಮ್ಮ ಜತೆ ಮಾತನಾಡಿಲ್ಲ. ಬೇರೆಯವರು ಯಾರೂ ಮಾತನಾಡಿಲ್ಲ, ಯಾರಿಗೆ ಏನು ತೊಂದರೆ ಆಗಿದೆ ಎಂಬುದು ಗೊತ್ತಿಲ್ಲ. ಅವೆಲ್ಲವನ್ನೂ ನಾವು ಡೀಲ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | V. Somanna: ಅಶೋಕ್ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?
ಯಾರು ಯಾವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದು ಗೊತ್ತು. ವಿ.ಸೋಮಣ್ಣ ಸಹ ಯಾವತ್ತೂ ನನ್ನ ಜತೆ ಚರ್ಚೆ ಮಾಡಿಲ್ಲ. ಕನಕಪುರದಲ್ಲಿ ಹೌಸಿಂಗ್ ಬೋರ್ಡ್ ಕಾರ್ಯಕ್ರಮ ಇದೆ ಬನ್ನಿ ಎಂದು ಕಾಗದ ಬರೆದಿದ್ದಾರೆ. ಯಾರಾದರೂ ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿದರೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.