Site icon Vistara News

Actor Chetan Ahimsa: ಸ್ವಂತ ಮನೆಯಿಲ್ಲ ಎಂದ ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಅಹಿಂಸಾ ಕಿಡಿ

Actor Chetan Ahimsa

ಬೆಂಗಳೂರು: 4 ದಶಕಗಳಿಂದ ರಾಜಕೀಯದಲ್ಲಿದ್ದರೂ ನನಗೆ ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಟ ಚೇತನ್‌ ಅಹಿಂಸಾ ಕಿಡಿಕಾರಿದ್ದಾರೆ. ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅವರಂತಹವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ನಟ ಚೇತನ್‌ ಅಹಿಂಸಾ (Actor Chetan Ahimsa) ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಲ್ಲಿ ಪ್ರತಿಕ್ರಿಯಿಸಿರುವ ಅವರು, 52 ಕೋಟಿ ಆಸ್ತಿ ಘೋಷಿಸಿದ್ದರೂ, ಸ್ವಂತ ಮನೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿನ ಅವರ ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅವರಂಥವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ. ನಮ್ಮ ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ನ್ಯಾಯದ ಪರಿಕಲ್ಪನೆ ಇಲ್ಲ, ಎಸ್‌ಸಿಎಸ್‌ಪಿ, ಟಿ.ಎಸ್.ಪಿ. ಯೋಜನೆಯ ಮೀಸಲು ಹಣವನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಕುಂಠಿತವಾಗಿದೆ. ಈ ಅಸಮಾನತೆಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಮನುವಾದಿ, ಅಸಮಾನತಾವಾದಿ, ಶ್ರೀಮಂತರ ಪರವಾಗಿರುವ ಪಕ್ಷವಾಗಿದೆ. ಈ ಪಕ್ಷದಲ್ಲಿ ಬೆಳೆದಿರುವ ಸಚಿವ ಎಚ್‌.ಸಿ.ಮಹದೇವಪ್ಪ ಸೇರಿ ಹಲವರು, ದಲಿತರು, ಆದಿವಾಸಿಗಳಿಗೆ ಉದ್ದೇಶಪೂರ್ವಕವಾಗಿಯೇ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಎಸ್‌ಸಿಎಸ್‌ಸಿ, ಟಿಎಸ್‌ಪಿ ಅನುದಾನ ಇರುವುದು ಗುಡಿಸಿನಲ್ಲಿರುವವರಿಗೆ ಮನೆ, ಶಿಕ್ಷಣ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ. ಆದರೆ ಕಳೆದ ವರ್ಷ 12,500 ಕೋಟಿ, ಈ ವರ್ಷ 14,500 ಸಾವಿರ ಕೋಟಿ ದಲಿತರು, ಆದಿವಾಸಿಗಳ ಹಣ ಕಿತ್ತುಕೊಂಡು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ, ಸಿಎಂಗೆ ನ್ಯಾಯದ ಪರಿಕಲ್ಪನೆ ಗೊತ್ತೇ ಇಲ್ಲ. ಪರಿವರ್ತನೆ ಮನಸ್ಥಿತಿ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

ಪ್ರಕಾಶ್‌ ರೈ ವಿರುದ್ಧ ಅಹಿಂಸಾ ಚೇತನ್‌ ಕಿಡಿ; ಮೋದಿ ಪರ ಬ್ಯಾಟಿಂಗ್ ಮಾಡಿ ʼರೈ ಅಜ್ಞಾನಿʼ ಎಂದ ನಟ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಯಾವಾಗಲೂ ಕಿಡಿ ಕಾರುತ್ತಿದ್ದ ನಟ ಚೇತನ್‌ ಅಹಿಂಸಾ (Chetan Ahimsa), ಇದೀಗ ಮೋದಿಯವರ ಪರ ಸೋಶಿಯಲ್‌ ಮೀಡಿಯಾ (Social Media) ಪೋಸ್ಟ್‌ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಜೊತೆಗೆ, ವಿನೇಶ್‌ ಫೋಗಟ್‌ (Vinesh Phogat) ಪ್ರಕರಣದಲ್ಲಿ ಸಹನಟ ಪ್ರಕಾಶ್‌ ರೈ (Prakash raj) ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ.

50 ಕಿಲೋಗಿಂತ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆ ಪ್ಯಾರಿಸ್ ಒಲಿಂಪಿಕ್ಸ್‌-2024ರ ಫೈನಲ್‌ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್‌ ಫೋಗಟ್ ಪರ, ಮೋದಿ ವಿರುದ್ಧ ಪೋಸ್ಟ್‌ ಹಾಕಿದ್ದ ಪ್ರಕಾಶ್‌ ರೈ ನಡೆಯನ್ನು ಚೇತನ್‌ ಟೀಕಿಸಿದ್ದಾರೆ. ಅದರಲ್ಲೂ ಮೋದಿ ಪರ ನಿಂತ ಅಹಿಂಸಾ ಚೇತನ್​ ನಿಲುವು ನೋಡಿ ತುಂಬಾ ಮಂದಿ ಅಚ್ಚರಿಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪ್ರಕಾಶ್​ ರಾಜ್​ ಕಾರ್ಟೂನ್​ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಕುಸ್ತಿಪಟು ವಿನೇಶ್​ ಫೋಗಟ್ ಅವರು ನಿಂತಿರುವ ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿದೆ. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂದು ಅರ್ಥ ಬರುವಂತೆ ಈ ಟ್ವೀಟ್ ಶೇರ್ ಮಾಡಿದ್ದರು.

ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್​ ಕಿಡಿಕಾರಿದ್ದಾರೆ. ʼವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್‌ನಲ್ಲಿ ಚೇತನ್ ಬರೆದಿದ್ದಾರೆ.

ಇಬ್ಬರು ನಟರ ಈ ಟ್ವೀಟ್ಟ್‌ಗಳು ಇದೀಗ ವೈರಲ್ ಆಗುತ್ತಿವೆ. ನೆಟ್ಟಿಗರು ಚೇತನ್ ಕಮೆಂಟ್​ಗೂ ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್​ ಕೆಟ್ಟ ಹೋರಾಟಗಾರ ಎನ್ನುವುದು ಸರಿಯಲ್ಲ ಎಂದಿದ್ದಾರೆ. ವಿನೇಶ್ ಫೋಗಟ್ ಅನರ್ಹತೆಗೆ ಪ್ರಕಾಶ್ ರಾಜ್ ಎಲ್ಲಿಯೂ ಮೋದಿ ಹೆಸರನ್ನು ಮೆನ್ಷನ್ ಮಾಡಿಲ್ಲ. ಆದರೆ ನೀವೇ ಮೋದಿ ಎಳೆದು ತಂದಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕುಸ್ತಿ ಪಂದ್ಯಾಟದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ 100 ಗ್ರಾಮ್‌ಗಳ ಹೆಚ್ಚುವರಿ ತೂಕದಿಂದಾಗಿ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್‌ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ತಮ್ಮ ಅರ್ಧ ವರ್ಷದ ತರಬೇತಿಯನ್ನು ಕಳೆದುಕೊಂಡಿದ್ದ ವಿನೇಶ್, ತಮಗೆ ದೊರಕಿದ್ದ ಅತ್ಯಲ್ಪ ಸಮಯದಲ್ಲಿಯೇ ತರಬೇತಿ ಪಡೆದುಕೊಂಡು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಜೊತೆಗೆ ದೇಶಕ್ಕಾಗಿ ಪದಕ ಗೆಲ್ಲುವ ಮಹದಾಸೆ ಇರಿಸಿಕೊಂಡಿದ್ದರು.

ಇದನ್ನೂ ಓದಿ: Prakash Raj:‌ ವಿನೇಶ್‌ ಫೋಗಟ್‌ ಅನರ್ಹತೆಗೆ ಮೋದಿ ಕಾರಣ ಎಂಬಂತೆ ಪ್ರಕಾಶ್ ರಾಜ್‌ ಪೋಸ್ಟ್;‌ ಜನರಿಂದ ರೋಸ್ಟ್!

Exit mobile version