Site icon Vistara News

ಕೊರಗರನ್ನು ಶೋಷಿಸಿದ ಬಂಟ ಸಮುದಾಯ: ಕಾಂತಾರ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿದ ಚೇತನ್‌

actor chetan

ಬೆಂಗಳೂರು: ಪಂಜುರ್ಲಿ, ಪಿಲಿಚಾಮುಂಡಿ, ಕೊರಗಜ್ಜ ಮುಂತಾದ ದೈವಗಳನ್ನು ಆರಾಧಿಸುವ ಪಂಬದ, ಪರವ, ನಲಿಕೆ ಮುಂತಾದ ಬುಡಕಟ್ಟು, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು ಹಿಂದೂ ಧರ್ಮದವರೇ ಅಲ್ಲ. ಅವರನ್ನು ಹಿಂದೂ ಧರ್ಮದ ವಿಸ್ತರಣೆಗಾಗಿ ಅವರನ್ನು ಅದರೊಳಗೆ ಸೇರಿಸಿಕೊಳ್ಳುವ ಯತ್ನ ಮಾಡಲಾಗುತ್ತಿದೆ ಎಂದು ನಟ ಚೇತನ್‌ ಹೇಳಿದ್ದಾರೆ.

ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂದು ತಾವು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಹುಟ್ಟಿಕೊಂಡ ವಿವಾದ ಹಾಗೂ ಪ್ರತಿರೋಧಕ್ಕೆ ಅವರು ಪತ್ರಿಕಾಗೋಷ್ಠಿ ನಡೆಸಿ ಸಮರ್ಥನೆ ನೀಡಿದರು. ಈ ಸಂದರ್ಭದಲ್ಲಿ, ಬಂಟ ಮುಂತಾದ ಪ್ರಬಲ ಸಮುದಾಯಗಳು ಆದಿವಾಸಿಗಳಾದ ಕೊರಗ ಜನಾಂಗದವರನ್ನು ತಮ್ಮ ಉಗುರು ತಿನ್ನಿಸಿ ಶೋಷಿಸಿದ್ದರು ಎಂದೂ ವಾದಿಸಿದರು.

ರಿಷಬ್ ಶೆಟ್ಟಿ ಭೂತಕೋಲ ಹಿಂದೂ ಸಂಪ್ರದಾಯ ಅಂತ ಹೇಳಿದ್ದಾರೆ. ಆದರೆ ನಾನು ʼಪಂಬದʼ ಅನ್ನುವ ಪುಸ್ತಕ ಓದಿದ್ದೇನೆ. ಕೊರಗರಲ್ಲಿರುವ ಅಜಲು ಸಂಸ್ಕೃತಿಯ ನಿವಾರಣೆಗೆ ಹೋರಾಟವನ್ನೂ ಮಾಡಿದ್ದೆ. ಪಂಬದ, ಪರವ, ನಲಿಕೆ ಇತ್ಯಾದಿಯವರು 75,000 ವರ್ಷಗಳ ಹಿಂದಿನ ಆದಿವಾಸಿ ಪರಂಪರೆಯವರು. ಪ್ರಕೃತಿಯ ಹಾಗೂ ಪ್ರಾಣಿಗಳ ಆರಾಧನೆಯ ಮೂಲನಿವಾಸಿ ಪರಂಪರೆಯಿಂದ ಬಂದಿದ್ದಾರೆ. ಪಂಜುರ್ಲಿ, ಪಿಲಿಚಾಮುಂಡಿ ಮುಂತಾದ ದೈವಗಳು ಮೂಲವಾಸಿ ಸಂಸ್ಕೃತಿಗೆ ಸೇರಿವೆ. ಇವು ಹಿಂದೂ ಸಂಪ್ರದಾಯ ಅನ್ನುವುದು ತಪ್ಪು. ಯಾಕೆಂದರೆ ವೇದ, ಶಾಸ್ತ್ರ, ಉಪನಿಷತ್ತುಗಳೆಲ್ಲವೂ 3 ಸಾವಿರ ವರ್ಷಗಳ ಈಚಿ ವೈದಿಕ ಪರಂಪರೆಯವು ಎಂದು ಚೇತನ್‌ ಸಮರ್ಥಿಸಿಕೊಂಡರು.

ಹಿಂದೂ ಅನ್ನುವ ಪದ ಬರುವುದು 6ನೇ ಶತಮಾನದಲ್ಲಿ. ಹಿಂದುತ್ವ ಅನ್ನೋದು ಕೋಮುವಾದಿ ಪರಿಕಲ್ಪನೆ. ಹಿಂದೂ ಧರ್ಮದ ಒಳಗೆ ಪರವ, ಪಂಬದ, ನಲಿಕೆಯವರೆಲ್ಲ ಬರುವುದಿಲ್ಲ. ಇವರೊಂದಿಗೇ ಮಲೆ ಮಾದಪ್ಪ, ಜುಂಜಪ್ಪ ಇವೆಲ್ಲಾ ಬಹುಜನ ಸಂಸ್ಕೃತಿಗೆ ಸೇರಿವೆ. ಜಾರ್ಖಂಡ್‌ನಲ್ಲಿ ‌ಆದಿವಾಸಿ ಜನತೆ ತಮ್ಮದು ಬೇರೆ ಧರ್ಮ ಎಂದು ಹೋರಾಟ ಮಾಡುತ್ತಿದ್ದಾರೆ. ಇಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ನಡೆದಿದೆ. ಹೀಗಾಗಿ ಅವೈದಿಕ ಮತ್ತು ವೈದಿಕ ಪರಂಪರೆಗಳು ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.‌

ಇದನ್ನೂ ಓದಿ | Kantara controversy | ಭೂತ ಕೋಲ ಯಾವುದೇ ಸಮುದಾಯಕ್ಕೆ ಸೀಮಿತವಾದುದಲ್ಲ, ನಟ ಚೇತನ್‌ಗೆ ತಿಳಿವಳಿಕೆ ಇಲ್ಲ!

ಭಾರತ ದೇಶ ಹೇಗೆ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲವೋ ಅದೇ ರೀತಿ ಹಿಂಗುತ್ವವನ್ನೂ ಒಪ್ಪಿಕೋಳ್ಳಲು ಆಗದು. ವರಾಹ ಅನ್ನುವುದು ಸಂಸ್ಕೃತ ಪದ. ಅದು ವಿಷ್ಣುವಿನ ಅವತಾರ ಎಂದು ಬ್ರಾಹ್ಮಣೀಕರಣ ಮಾಡಲಾಗಿದೆ. ಬುದ್ಧನನ್ನೂ ಹೀಗೇ ದಶಾವತಾರದೊಳಗೆ ಸೇರಿಸಿ ಹಿಂದುಧರ್ಮಕ್ಕೆ ಸೇರಿಸಲು ಯತ್ನಿಸಲಾಗಿದೆ. ಆದರೆ ಕೊರಗ ಸಮುದಾಯ ಮೂಲನಿವಾಸಿ ಸಮುದಾಯವಾಗಿದ್ದು, ಬಂಟರು ಸೇರಿ ಪ್ರಬಲ ಸಮುದಾಯದವರು ತಮ್ಮ ಉಗುರು ಮತ್ತು ಕೂದಲನ್ನು ಅನ್ನದಲ್ಲಿ ಸೇರಿಸಿ ಕೊರಗ ಸಮುದಾಯದ ಗರ್ಭಿಣಿಗೆ ಊಟದಲ್ಲಿ ತಿನ್ನಿಸುತ್ತಿದ್ದರು. ಕೊರಗರನ್ನು ಇವತ್ತಿಗೂ ಅಸ್ಪೃಶ್ಯರಾಗಿ ತೋರಿಸುತ್ತಾರೆ. ಕಂಬಳದಲ್ಲೂ ಜಾತಿ ತಾರತಮ್ಯವಿದ್ದು, ಕೋಣಗಳ ಮಾಲಿಕರು ಮೇಲ್ವರ್ಗದವರು ಹಾಗೂ ಓಡಿಸುವವರು ಕೆಳವರ್ಗದವರು ಎಂದು ಚೇತನ್‌ ಹೇಳಿದರು.

ಹಿಂದು ಧರ್ಮವನ್ನು ಆಚರಿಸುವವರು ಆಚರಿಸಲಿ. ಅದಕ್ಕೆ ಸಂವಿಧಾನ ಅವಕಾಶ ನೀಡಿದೆ. ಆದರೆ ಪಂಬದ, ಪರವ ಮುಂತಾದ ಆದಿವಾಸಿಗಳಿಗೆ ಅವರದೇ ಭಾಷೆ, ಸಂಸ್ಕೃತಿಗಳಿದ್ದು, ಪ್ರತ್ಯೇಕತೆ ಇದೆ. ಹೀಗಾಗಿ ಭೂತಕೋಲ ಮೂಲನಿವಾಸಿಗಳ ಆಚರಣೆ ಹೊರತು ಹಿಂದೂ ಧರ್ಮದ ಆಚರಣೆಯಲ್ಲ ಎಂದವರು ಒತ್ತಿ ಹೇಳಿದರು.

ಇದನ್ನೂ ಓದಿ | ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ | ಕಾಂತಾರ ಅಭಿಮಾನಿಗಳ ಕಿಡಿ

Exit mobile version