ಮಂಡ್ಯ: ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಎಚ್‌ಡಿಕೆಯನ್ನು ಕೆಟ್ಟ ಪದಗಳಿಂದ ಬೈದ ಹಿನ್ನೆಲೆಯಲ್ಲಿ ದರ್ಶನ್ ಮಹಿಳಾ ಅಭಿಮಾನಿ (Actor Darshan) ವಿರುದ್ಧ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮತ್ತು ಮಂಡ್ಯದ ಸೈಬರ್ ಕ್ರೈಂ ಸೆಂಟ್ರಲ್ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿರುವ ಮಂಗಳ ಎಂಬಾಕೆ ಎಚ್‌ಡಿಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ನಟ ದರ್ಶನ್ ಕೃತ್ಯ ಖಂಡಿಸಲು ಮಂಡ್ಯದಲ್ಲಿ ತಲಾ 150 ರೂ. ಕೊಟ್ಟು ಪ್ರತಿಭಟನೆ ಮಾಡಿಸಿದ್ದಾನೆ ಎಂದು ತಮ್ಮ ನಾಯಕನ ವಿರುದ್ಧ ಮಹಿಳೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಪೇಟೆ ಜೆಡಿಎಸ್ ಮುಖಂಡ ವಕೀಲ ಧನಂಜಯ್ ಕುಮಾರ್ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಹಿಳೆಯನ್ನು ಬಂಧಿಸಲು ಆಗ್ರಹ
ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಮಂಡ್ಯದ ಸೈಬರ್ ಕ್ರೈಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮಂಗಳ ಎಂಬಾಕೆ ವಿರುದ್ಧ ದೂರು ನೀಡಲಾಗಿದ್ದು, ಆಕೆಯನ್ನು ಬಂಧಿಸಲು ಜೆಡಿಎಸ್ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.
ಜೆಡಿಎಸ್ ಜಿಲ್ಲಾ ವಕ್ತಾರ ರಘುನಂದನ್ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸ್ತೀಯಾ?, ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕ್ತೀಯಾ? ಸುಮಲತಾರಿಂದ ಭಿಕ್ಷೆ ಹಾಕಿಸಿಕೊಂಡ ಮಗ ಎಂದು ಮಹಿಳಾ ಆವಾಜ್ ಹಾಕಿದ್ದಾಳೆ.
ಇದನ್ನೂ ಓದಿ | Actor Darshan: ಗಂಟೆಗಟ್ಟಲೆ ವಿಚಾರಣೆ ನಡೆಸಿದ್ರೂ ಕೆಲವು ಸಾಕ್ಷ್ಯಗಳ ಬಗ್ಗೆ ಬಾಯ್ಬಿಡದ ಆರೋಪಿಗಳು!
ಏಕವಚನದಲ್ಲಿ ಎಚ್‌ಡಿಕೆಯನ್ನು ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೊ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.