ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್ (Actor Darshan) ಸೇರಿ ಇತರ ಆರೋಪಿಗಳನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ಆದೇಶ ನೀಡಿದರು.
ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಕೇಸ್‌ನ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಮತ್ತೊಂದೆಡೆ ಪೊಲೀಸರು ಸ್ಥಳ ಮಹಜರು, ಸಾಕ್ಷ್ಯಗಳ ಕುರಿತ ವರದಿಯನ್ನು ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿದರು. ಬೆಂಗಳೂರು, ಚಿತ್ರದುರ್ಗದಲ್ಲಿ ಮಹಜರು ನಡೆದಿದೆ, ಆದರೆ, ಮೈಸೂರಿನಲ್ಲಿ ಮಹಜರು ಬಾಕಿ ಇದೆ. ಹೀಗಾಗಿ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ದರ್ಶನ್ ಪರ ವಕೀಲ ಅನಿಲ್ ಬಾಬು ವಾದ ಮಂಡಿಸಿ, ಆರೋಪಿಗಳಿಗೆ ವಿಚಾರಣೆ ವೇಳೆ ಹಿಂಸೆ ಕೊಟ್ಟಿದ್ದಾರೆ. ಮಹಿಳಾ ಆರೋಪಿ ಪವಿತ್ರಾ ಗೌಡಳನ್ನೂ 6 ದಿನ ವಿಚಾರಣೆ ನಡೆಸಲಾಗಿದೆ. ಎಲ್ಲದಕ್ಕೂ ದರ್ಶನ್ ಕಾರಣ ಎಂದರೆ ಹೇಗೆ? ವಿಚಾರಣೆ ಹಂತದಲ್ಲಿದ್ದಾಗಲೇ ದರ್ಶನ್ ಮೇಲೆ ಎಲ್ಲಾ ಅರೋಪಗಳನ್ನು ಮಾಡುವುದು ಎಷ್ಟು ಸರಿ? ಪವಿತ್ರಾ ಗೌಡ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಆರೋಪಿಗಳ ಹೇಳಿಕೆಗಳೂ ಸೋರಿಕೆಯಾಗುತ್ತಿವೆ. ಹೀಗಾಗಿ ಮತ್ತೆ ಕಸ್ಟಡಿಗೆ ನೀಡುವುದು ಬೇಡ ಹೇಳಿದರು.
ಮತ್ತೊಂದೆಡೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮುಂದುವರಿಸಿ, ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿ ಹಿಂಸೆ ನೀಡಲಾಗಿದೆ. ಆರೋಪಿಗಳು ಯಾವೆಲ್ಲಾ ಡಿವೈಸ್ ಬಳಿಸಿದ್ದಾರೋ, ಅವುಗಳನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಸಮಯಾವಕಾಶ ಬೇಕು. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಪವಿತ್ರಾ ಗೌಡ ಪರ ವಕೀಲ ನಾರಾಯಾಣಸ್ವಾಮಿ ಎಂಟ್ರಿಯಾಗಿ, ನನ್ನ ಕಕ್ಷಿದಾರರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದರು. ವಾದ-ಪ್ರತಿವಾದ ಅಲಿಸಿದ ಬಳಿಕ ನ್ಯಾಯಾಧೀಶರು, 10 ಆರೋಪಿಗಳನ್ನು ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ಸೂಚಿಸಿದರು. ಹೀಗಾಗಿ ಅನ್ನಪೂರ್ಣೆಶ್ವರಿ ಠಾಣೆಗೆ ಆರೋಪಿಗಳಿಗೆ ಕರೆದುಕೊಂಡು ಹೋಗಲಾಯಿತು.
ಇದಕ್ಕೂ ಮುನ್ನ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಹಿಂದೆ ಕಸ್ಟಡಿಗೆ ನೀಡುವಾಗ ದರ್ಶನ್ ಕಣ್ಣೀರು ಹಾಕಿದ್ದರು. ಇದೀಗ ಕೋರ್ಟ್‌ಗೆ ಹಾಜರಾಗುತ್ತಿದ್ದಂತೆ ಎ 1 ಪವಿತ್ರಾ ಗೌಡ ಗಳಗಳನೆ ಅತ್ತಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಎರಡು ಜೀಪ್ ಹಾಗೂ ಎರಡು ಕೆಎಸ್‌ಆರ್‌ಪಿ ಮಿನಿ ವ್ಯಾನ್‌ನಲ್ಲಿ ಆರೋಪಿಗಳನ್ನು ಕರೆದುಕೊಂಡು ಬರಲಾಗಿತ್ತು. ಆರೋಪಿಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಠಾಣೆ ಮುಂಭಾಗ ಹಾಗೂ ಕೋರ್ಟ್ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಏನಿದು ಪ್ರಕರಣ?
ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಆಪ್ತರು ಜೂನ್ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಜೂನ್ 9ರಂದು ಸುಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್ ದೋರ್ ಎಂಬ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.
ಇದನ್ನೂ ಓದಿ | Actor Darshan : ಬಾಸ್ ಅಂತ ಯಾಕ್ ಬಕೆಟ್ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!
ಅಪರಿಚಿತ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಇದರ ಮಧ್ಯೆಯೇ, ಗಿರಿನಗರದ ಮೂವರು ಆರೋಪಿಗಳು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದರು. ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ನಟ ದರ್ಶನ್ ಕೈವಾಡ ಇರುವುದು ಬಯಲಾಗಿದೆ. ಆರೋಪಿಗಳೇ ದರ್ಶನ್ ಹೆಸರು ಹೇಳಿದ ಕಾರಣ ನಟ ದರ್ಶನ್ ಸೇರಿ 16 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2 ಆಗಿದ್ದಾರೆ.