ಚಿಕ್ಕಮಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ ಬಳಕೆ, ಅರಣ್ಯ ಸಿಬ್ಬಂದಿ ಜತೆ ಬಾಡೂಟ, ಎಣ್ಣೆ ಪಾರ್ಟಿ ಮಾಡುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದು, ಜಿಲ್ಲೆಯ ಮುತ್ತೋಡಿ, ಭದ್ರ ವನ್ಯಜೀವಿ ತಾಣದಲ್ಲಿ ಖಾಸಗಿ ವಾಹನ ಬಳಕೆ ಮಾಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಜತೆ ಬಾಡೂಟ, ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ವನ್ಯಜೀವಿ ಧಾಮಗಳಿಗೆ ದರ್ಶನ್ ಭೇಟಿ ನೀಡಿದ ಫೋಟೋಗಳು ಸದ್ಯ ವೈರಲ್ ಆಗಿವೆ.
ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ಕಾರುಗಳ ಬಳಕೆ ನಿಷಿದ್ಧ. ಆದರೂ ದರ್ಶನ್ ಅವರಿಗೆ ಖಾಸಗಿ ವಾಹನ ಬಳಸಲು ಅನುಮತಿ ನೀಡಲಾಗಿದೆ ಎಂದು ಚಿಕ್ಕಮಗಳೂರಿನ ಅರಣ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಮಾತ್ರ ಕಠಿಣ ನಿಯಮಗಳು, ಸೆಲೆಬ್ರಿಟಿಗಳಿಗಾದರೆ ನಿಯಮ ಅನ್ವಯಿಸಲ್ಲವೇ ಎಂದು ಜನರು ಪ್ರಶ್ನಿಸಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಎಫ್‌ಐಆರ್
ಮೈಸೂರಿನ ಟಿ. ನರಸೀಪುರದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ನಾಲ್ಕು ಬಾರ್ ಹೆಡೆಡ್ ಗೂಸ್ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ಸಾಕಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ | Actor Darshan Arrested: ರೇಣುಕಾಸ್ವಾಮಿಗೆ ದರ್ಶನ್ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್
ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಐದು ನೋಟಿಸ್ ನೀಡಿದ್ದು, ಇದುವರೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದರ್ಶನ್ ಹೀರೋ ಅಲ್ಲ ಖಳನಾಯಕ, ಆತನಿಗೆ ಶಿಕ್ಷೆ ಆಗಲೇಬೇಕು: ರೇಣುಕಾ ಸ್ವಾಮಿ ತಂದೆ ಕಿಡಿ
ಚಿತ್ರದುರ್ಗ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಅವನಿಗೆ ಇಂತಹ ಶಿಕ್ಷೆಯಾ? ಏನು ಮಾಡದ ತಪ್ಪಿಗೆ ನನ್ನ ಮಗ ಬಲಿ ಆದ. ಅವನ ಪಾಡಿಗೆ ಅವನು ಇದ್ದ, ಏನೂ ಮಾಡಿಲ್ಲ. ಯಾವುದೇ ಗಲಾಟೆ ಗೋಜಿಗೆ ಹೋಗಿರಲಿಲ್ಲ. ನಟ ದರ್ಶನ್‌ಗೆ ಶಿಕ್ಷೆ ಆಗಲೇಬೇಕು, ಅವನು ಹೀರೋ ಅಲ್ಲ ಖಳನಾಯಕ. ಬರೀ ತೆರೆ ಮೇಲೆ ಮಾತ್ರ ಹೀರೋ ತರ ನಾಟಕವಾಡುತ್ತಾನೆ. ಅವನಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ, ಮನಷ್ಯ ಅಲ್ಲ, ಆತ ಪಶು ಎಂದು ರೇಣುಕಾ ಸ್ವಾಮಿ ತಂದೆ ಕಾಶಿನಾಥ ಶಿವನಗೌಡ ಕಿಡಿಕಾರಿದ್ದಾರೆ.
ನಗರದಲ್ಲಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಅವರು, ಏನು ಮಾಡದ ತಪ್ಪಿಗೆ ನನ್ನ ಮಗ ಬಲಿಯಾಗಿದ್ದಾನೆ, ನಟ ದರ್ಶನ್ ಸೇರಿ ಇತರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನ ಮಗ ಹಾಗೂ ಪವಿತ್ರ ಗೌಡ ನಡುವೆ ಚಾಟಿಂಗ್ ನಡೆದಿತ್ತು
ನನ್ನ ಮಗ ಹಾಗೂ ಪವಿತ್ರಾ ಗೌಡ ನಡುವೆ ಚಾಟಿಂಗ್ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ನಿರಂತರ ಚಾಟಿಂಗ್ ಮಾಡುತ್ತಿದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ ಎಂದು ರೇಣುಕಾ ಸ್ವಾಮಿ ತಾಯಿ ಹೇಳಿದ್ದಾರೆ. ಹಾಗಾದರೆ ಮೊದಲಿನಿಂದಲೂ ಪವಿತ್ರಾ ಹಾಗೂ ರೇಣುಕಾ ಮಧ್ಯೆ ಪರಿಚಯ ಇತ್ತೇ? ಕುಟುಂಬಕ್ಕೆ ಹೇಳದೆ ರೇಣುಕಾ ಸ್ವಾಮಿ ವಿಷಯ ಮುಚ್ಚಿಟ್ಟಿದ್ದರಾ? ಹಾಗಾದರೆ ಇಬ್ಬರ ಮಧ್ಯೆ ಏನು ಚಾಟಿಂಗ್ ನಡೆದಿತ್ತು ಎಂಬುವುದು ಕುತೂಹಲ ಮೂಡಿಸಿದ್ದು, ರೇಣುಕಾಸ್ವಾಮಿ ತಾಯಿ ಹೇಳಿಕೆ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.