Site icon Vistara News

Actor Darshan: ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ; ಪೊಲೀಸರಿಗೆ ನಟ ಪ್ರಥಮ್‌ ದೂರು

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಬಂಧನದ ಬಗ್ಗೆ ಮಾತನಾಡಿದ್ದಕ್ಕೆ ನಟ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಥಮ್ ಜೀವ ಬೆದರಿಕೆ ಹಾಕಿರುವುದು ಕಂಡುಬಂದಿದೆ. ದರ್ಶನ್‌ ಅಭಿಮಾನಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ಪ್ರಥಮ್‌ (Actor Pratham) ದೂರು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಬಂಧನವಾಗಿದ್ದರೂ ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ನಟ ಪ್ರಥಮ್‌ ಕಿಡಿಕಾರಿದ್ದರು. ನನಗೆ ಒಂದು ವಾರ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಲು ಅವಕಾಶ ಕೊಟ್ಟರೆ, ದರ್ಶನ್‌ ಅಂಧ ಅಭಿಮಾನಿಗಳಿಗೆ ನಾಯಿಗೆ ಹೊಡೆದಂಗೆ ಹೊಡೆಯುತ್ತೇನೆ. ಆ ಪೊಲೀಸ್‌ ಸ್ಟೇಷನ್‌ ಬಳಿ ಇದ್ದವರಲ್ಲಿ ಒಬ್ಬನಾದರೂ ಅವರ ತಾಯಿಗೆ ಒಂದು ಹೊತ್ತು ಊಟ ಕೊಡಿಸಲು ಯೋಗ್ಯತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಪ್ರಥಮ್‌ಗೆ ನಟ ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ.

ದೂರು ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಪ್ರಥಮ್‌ ಅವರು, ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ #ಕರ್ನಾಟಕದ_ಅಳಿಯ ತಂಡದ office no ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಿ. ಇನ್ಮೇಲೆ ನನಗೆ ಬರೋ ಕಾಲ್ msg ಅಥವಾ social media warning ಎಲ್ಲವೂ ಪೋಲೀಸರು ನೋಡಿಕೊಳ್ತಾರೆ. ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ; ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ…; ಯಾರಿಗೋಸ್ಕರವೋ ಲೈಫ಼್ ಹಾಳುಮಾಡಿಕೊಳ್ಳಬೇಡಿ ಎಂದು ತಮಗೆ ಬೆದರಿಕೆ ಹಾಕಿರುವ ದರ್ಶನ್‌ ಅಭಿಮಾನಿಗಳಿಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಮೃತದೇಹ ಮೊದಲು ಹಾಕಿದ್ದು ಎಲ್ಲಿ? ಬೆಳಕಿಗೆ ಬಂತು ಸ್ಫೋಟಕ ಅಂಶ!

ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

actor Darshan and Sumalatha Ambareesh

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ (Actor Darshan) ಕುರಿತು ರಮ್ಯ, ರಚಿತಾ, ಸುದೀಪ್‌, ಉಪೇಂದ್ರ ಸೇರಿದಂತೆ ಚಿತ್ರರಂಗದ ಹಲವಾರು ಸ್ಟಾರ್‌ಗಳು ಹಾಗೂ ರಾಜಕಾರಣಿಗಳು ಹೇಳಿಕೆ ನೀಡಿದ್ದಾರೆ. ಆದರೆ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್‌ (Sumalatha Ambareesh) ಮಾತ್ರ ತುಟಿ ಪಿಟಕ್‌ ಎಂದಿಲ್ಲ. ಒಂದು ಕಾಲದಲ್ಲಿ ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ, ಈ ಪ್ರಕರಣದಲ್ಲಿ ಮೌನ ಕಾಪಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ನಟ ಅಂಬರೀಶ್ ಇದ್ದ ಕಾಲದಿಂದಲೂ, ʼದರ್ಶನ್‌ ನಮ್ಮ ದೊಡ್ಡ ಮಗʼ ಅನ್ನುತ್ತಿದ್ದ ಸುಮಲತಾ, 2019ರಲ್ಲಿ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ನಿಂತಾಗ ಪ್ರಚಾರಕ್ಕೆ ದರ್ಶನ್‌ ಬೆಂಬಲ ಪಡೆದಿದ್ದರು. ಇಪ್ಪತ್ತು ದಿನಗಳ ಕಾಲ ಸುಮಲತಾ ಜತೆ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವಲ್ಲಿ ದರ್ಶನ್ ಪ್ರಮುಖ ಪಾತ್ರ ವಹಿಸಿದ್ದ.

ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಯ ಕಾರಣದಿಂದಾಗಿ ಸುಮಲತಾ ಹಿಂದೆ ಸರಿದಾಗಲೂ ತಾಯಿಯ ಜತೆ ಇರ್ತೀನಿ ಎಂದು ದರ್ಶನ್ ಹೇಳಿದ್ದ. ಮಂಡ್ಯದಲ್ಲಿ ಸಭೆ ನಡೆಸಿ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎಂದಿದ್ದ ದರ್ಶನ್‌. ಅಮ್ಮನ ನಿರ್ಧಾರವೇ ನನ್ನ ನಿರ್ಧಾರ ಎಂದಿದ್ದ.

ʼಇವನು ನಮ್ಮ ದತ್ತು ಮಗ ಅಲ್ಲ ಸ್ವಂತ ಮಗ. ಮಗನ ಜತೆ ಸದಾ ಇರ್ತೀನಿʼ ಎಂದಿದ್ದ ಸುಮಲತಾ, ಇದೀಗ ಕೊಲೆ ಪ್ರಕರಣದಲ್ಲಿ ಆತ ಜೈಲುಪಾಲಾದ ಮೇಲೆ ಫುಲ್ ಸೈಲೆಂಟ್ ಆಗಿದ್ದಾರೆ. ಅವರು ಅತ್ತ ಮಾಧ್ಯಮಗಳಿಗೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಗಾಢ ಮೌನಕ್ಕೆ ಜಾರಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ. ಯಾವುದಕ್ಕೂ ಅಭಿಷೇಕ್‌ ಪ್ರತಿಕ್ರಿಯೆ ನೀಡಿಲ್ಲ.

ಸುಮಲತಾ ಮೌನದ ಹಿಂದೆ ಹಲವು ಕಾರಣಗಳನ್ನು ಊಹಿಸಲಾಗಿದೆ. ದರ್ಶನ್‌ ಅಪರಾಧಿ ಅಥವಾ ನಿರಪರಾಧಿ ಎಂದು ಸಾಬೀತಾಗುವವರೆಗೆ ಏನೇ ಆಡಿದರೂ ಆಮೇಲೆ ನಾಲಿಗೆ ಕಚ್ಚಿಕೊಳ್ಳಬೇಕಾಗಬಹುದು ಎಂಬ ಎಚ್ಚರಿಕೆ ಇದರ ಹಿಂದಿದೆ. ಈ ಸಮಯದಲ್ಲಿ ಆರೋಪಿಯನ್ನು ಬೆಂಬಲಿಸಿದರೆ ಅದು ತಮ್ಮ ತಲೆಗೂ ಬರಬಹುದು ಎಂದು ಆತಂಕವೂ ಇದೆ. ಮಂಡ್ಯದಲ್ಲೂ ಕೂಡ ದರ್ಶನ್‌ ರೌಡಿಸಂ ಚಾಳಿಯ ಬಗ್ಗೆ ಜನರಲ್ಲಿ ಸಿಟ್ಟೂ ಇದೆ.

ದರ್ಶನ್‌ ಈ ಪ್ರಕರಣದಿಂದ ತನ್ನನ್ನು ಪಾರು ಮಾಡುವಂತೆ ಹಲವು ಪ್ರಭಾವಿ ರಾಜಕಾರಣಿಗಳ ಬೆನ್ನಿಗೆ ಬಿದ್ದಿದ್ದರು ಎನ್ನಲಾಗಿದೆ. ಆದರೆ ಪ್ರಕರಣದ ಗಂಭೀರತೆ ಅರಿತ ಅವರ್ಯಾರೂ ದರ್ಶನ್‌ ಸಪೋರ್ಟ್‌ಗೆ ಬಂದಿಲ್ಲ. ಸಿಎಂ ಕೂಡ ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವ ಬಳಸಿದರೂ ಅದಕ್ಕೆ ಒಳಗಾಗಬೇಡಿ, ಯಾರನ್ನೂ ಬಿಡಬೇಡಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Actor Darshan: ದರ್ಶನ್ ಕುಡಿಯದೇ ಇದ್ದಾಗ ಒಳ್ಳೆಯವ, ಪವಿತ್ರಾ ಬಗ್ಗೆ ಮಾತಾಡೋಕೆ ಅಸಹ್ಯ ಎಂದ ಚಿಂಗಾರಿ ಮಹದೇವ್!

ಈ ಹಿನ್ನೆಲೆಯಲ್ಲಿ, ಈಗ ದರ್ಶನ್‌ ಕುರಿತ ಆಪ್ತತೆ ಪ್ರದರ್ಶನ ಮಾಡುವುದು ಸರಿಯಲ್ಲ. ಇದು ರಾಜಕೀಯವಾಗಿಯೂ ತಮಗೆ ಮುಳುವಾಗಬಹುದು ಎಂದು ಸುಮಲತಾಗೆ ಅನಿಸಿದ್ದು, ಇದೇ ಅಮ್ಮ- ಮಗನ ಬಾಂಧವ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನಲಾಗಿದೆ.

Exit mobile version