ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿ ಮಾಡಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಚಾರ್ಜ್ ಶೀಟ್ ಸಲ್ಲಿಕೆಗೆ ಪ್ರಮುಖ ಸಾಕ್ಷಿದಾರ ಪೊಲೀಸರಿಗೆ ಸಿಕ್ಕಂತಾಗಿದೆ. ಆದರೆ, ಜೈಲಿನಿಂದಲೇ ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ದರ್ಶನ್ ಗ್ಯಾಂಗ್ (Actor Darshan) ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೈಲಿನಲ್ಲಿದ್ದುಕೊಂಡೇ ದರ್ಶನ್ ಅಂಡ್ ಗ್ಯಾಂಗ್ ಬೆದರಿಕೆ ಹಾಕಿರೋದು ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರೋ ವ್ಯಕ್ತಿಗೆ ಸಾಕ್ಷಿ ನುಡಿಯದಂತೆ ಡಿ ಗ್ಯಾಂಗ್ ಬೆದರಿಕೆ ಹಾಕಿದೆ ಎನ್ನಲಾಗಿದೆ. ಸದ್ಯ ಬೆದರಿಕೆ ಸಂಬಂಧ ಸಾಕ್ಷಿದಾರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರೆಂಟ್ ಶಾಕ್ ಕೊಡಲು ಆನ್‌ಲೈನ್‌ನಲ್ಲಿ ಮೆಗ್ಗರ್ ಡಿವೈಸ್ ಖರೀದಿ
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖವಾಗಿ ಬಳಸಿರೋ ಸಾಧನ ಮೆಗ್ಗರ್ ಬಗ್ಗೆ ಮಹತ್ವದ ಮಾಹಿತಿ ತಿಳಿಸದುಬಂದಿದೆ. ಕರೆಂಟ್ ಶಾಕ್ ನೀಡಲೆಂದೇ ಮೆಗ್ಗರ್ ಅನ್ನು ಖರೀದಿ ಮಾಡಿರೋದು ತನಿಖೆ ವೇಳೆ ಬೆಳಕಿಗೆ. ಪ್ರಕರಣದ ಆರೋಪಿ ಧನರಾಜ್ ಅಮೆಜಾನ್‌ನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ್ದು, ಅದರ ಬೆಲೆ 699 ರೂಪಾಯಿಗಳಾಗಿದೆ. ಇನ್ನು ಬುಕ್ ಮಾಡಿದ ಮೆಗ್ಗರ್ ಅನ್ನು ಸ್ವೀಕರಿಸುವ ವೇಳೆ ಸ್ಕ್ಯಾನರ್ ಮೂಲಕ ಹಣ ಪೇ ಮಾಡಲು ಧನರಾಜ್ ಯತ್ನಿಸಿದ್ದ. ಆದರೆ ಅಮೆಜಾನ್ ಪೇ ಕೋಡ್ ಸ್ಕ್ಯಾನ್ ಮಾಡಿದ ವೇಳೆ ಹಣ ಸೆಂಡ್ ಆಗದ ಕಾರಣ ಆನ್ ಲೈನ್ ಮೂಲಕ ಹಣವನ್ನು ಕಳುಹಿಸಿದ್ದ ಧನರಾಜ್. ಆ ಹಣವನ್ನು ಡೆಲಿವರಿ ಬಾಯ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದು ಕಂಪನಿಗೆ ನೀಡಿದ್ದ. ಸದ್ಯ ಆ ಮಾಹಿತಿ ಕಲೆ ಹಾಕಿರೋ ಪೊಲೀಸರು ಮೆಗ್ಗರ್ ಡಿವೈಸ್ ಧನರಾಜ್‌ಗೆ ತಂದುಕೊಟ್ಟ ಡೆಲಿವರಿ ಬಾಯ್‌ನ ವಿಚಾರಣೆ ಮಾಡಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಅಲ್ಲದೇ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಡೇಟಾ ರಿಟ್ರೀವ್ ಆಗಿದೆ. ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ವಾಟ್ಸ್ ಆ್ಯಪ್ ಡೇಟಾವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ರಿಟ್ರೀವ್ ಆಗಿದ್ದು, ಪೆನ್ ಡ್ರೈವ್‌ನಲ್ಲಿ ಡೇಟಾ ಸಂಗ್ರಹಿಸಿ ಪಂಚನಾಮೆ ಮಾಡಲಾಗಿದೆ. ಈ ಮಧ್ಯೆ ಮೃತ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳ ಪರಿಶೀಲನೆ ಮಾಡಲಾಗಿದ್ದು, ಇದು ಕೂಡ ಪ್ರಮುಖ ಸಾಕ್ಷ್ಯವಾಗಿದ್ದು, ರೇಣುಕಾಸ್ವಾಮಿ ಮಾಡಿದ್ದ ಚಾಟಿಂಗ್‌ನಿಂದಲೇ ಕೊಲೆಗೆ ಪ್ರಮುಖ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ | Actor Darshan: ನಟ ದರ್ಶನ್‌ಗೆ ಆ. 20ರವರೆಗೆ ಜೈಲೂಟವೇ ಫಿಕ್ಸ್; ವಿಚಾರಣೆ ಮುಂದೂಡಿದ ಹೈಕೋರ್ಟ್
ದರ್ಶನ್ & ಗ್ಯಾಂಗ್‌ಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಮತ್ತು ಗ್ಯಾಂಗ್‌ಗೆ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ನಟ ದರ್ಶನ್ ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆ.20ಕ್ಕೆ ಮುಂದೂಡಿದ ಬೆನ್ನಲ್ಲೇ ಗುರುವಾರ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿತ್ತು.
ಆಗಸ್ಟ್ 1ರಂದು ಕೇಸ್ನ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದ್ದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪರಪ್ಪನ ಆಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.