ಚಿತ್ರದುರ್ಗ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಅವನಿಗೆ ಇಂತಹ ಶಿಕ್ಷೆಯಾ? ಏನು ಮಾಡದ ತಪ್ಪಿಗೆ ನನ್ನ ಮಗ ಬಲಿ ಆದ. ಅವನ ಪಾಡಿಗೆ ಅವನು ಇದ್ದ, ಏನೂ ಮಾಡಿಲ್ಲ. ಯಾವುದೇ ಗಲಾಟೆ ಗೋಜಿಗೆ ಹೋಗಿರಲಿಲ್ಲ. ನಟ ದರ್ಶನ್‌ಗೆ ಶಿಕ್ಷೆ ಆಗಲೇಬೇಕು, ಅವನು ಹೀರೋ ಅಲ್ಲ ಖಳನಾಯಕ. ಬರೀ ತೆರೆ ಮೇಲೆ ಮಾತ್ರ ಹೀರೋ ತರ ನಾಟಕವಾಡುತ್ತಾನೆ. ಅವನಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ, ಮನಷ್ಯ ಅಲ್ಲ, ಆತ ಪಶು ಎಂದು ರೇಣುಕಾ ಸ್ವಾಮಿ ತಂದೆ ಕಾಶಿನಾಥ ಶಿವನಗೌಡ ಕಿಡಿಕಾರಿದ್ದಾರೆ.
ನಗರದಲ್ಲಿ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಅವರು, ಏನು ಮಾಡದ ತಪ್ಪಿಗೆ ನನ್ನ ಮಗ ಬಲಿಯಾಗಿದ್ದಾನೆ, ನಟ ದರ್ಶನ್ ಸೇರಿ ಇತರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ನನ್ನ ಮಗ ಹಾಗೂ ಪವಿತ್ರ ಗೌಡ ನಡುವೆ ಚಾಟಿಂಗ್ ನಡೆದಿತ್ತು
ನನ್ನ ಮಗ ಹಾಗೂ ಪವಿತ್ರಾ ಗೌಡ ನಡುವೆ ಚಾಟಿಂಗ್ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ನಿರಂತರ ಚಾಟಿಂಗ್ ಮಾಡುತ್ತಿದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ ಎಂದು ರೇಣುಕಾ ಸ್ವಾಮಿ ತಾಯಿ ಹೇಳಿದ್ದಾರೆ. ಹಾಗಾದರೆ ಮೊದಲಿನಿಂದಲೂ ಪವಿತ್ರಾ ಹಾಗೂ ರೇಣುಕಾ ಮಧ್ಯೆ ಪರಿಚಯ ಇತ್ತೇ? ಕುಟುಂಬಕ್ಕೆ ಹೇಳದೆ ರೇಣುಕಾ ಸ್ವಾಮಿ ವಿಷಯ ಮುಚ್ಚಿಟ್ಟಿದ್ದರಾ? ಹಾಗಾದರೆ ಇಬ್ಬರ ಮಧ್ಯೆ ಏನು ಚಾಟಿಂಗ್ ನಡೆದಿತ್ತು ಎಂಬುವುದು ಕುತೂಹಲ ಮೂಡಿಸಿದ್ದು, ರೇಣುಕಾಸ್ವಾಮಿ ತಾಯಿ ಹೇಳಿಕೆ ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್!
ಬೆಂಗಳೂರು: ದರ್ಶನ್ ಗ್ಯಾಂಗ್ನ (Actor Darshan) ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿ ಪ್ರಕರಣ ಥೇಟ್ ಸಿನಿಮಾ ಮಾದರಿಯಲ್ಲಿಯೇ ನಡೆದಿದೆ. ಪೊಲೀಸರ ಮುಂದೆ ಆರೋಪಿಗಳು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ವಿವರಸಿದ್ದಾರೆ. ಪೊಲೀಸರು ಸತತ ಪ್ರಶ್ನೆಗಳು ಹಾಗೂ ಕೆಂಗಣ್ಣನ್ನು ಎದುರಿಸಲಾಗದ ಆರೋಪಿಗಳು ಕೊಲೆ ಮಾಡಿರುವ ಪ್ರತಿ ಕ್ಷಣವನ್ನೂ ವಿವರಿಸಿದ್ದಾರೆ.
ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಹೇಳಿಕೆ ನೀಡಿದ್ದು ಹೀಗೆ. ʻʻಮೊದಲಿಗೆ ದರ್ಶನ್ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ದರ್ಶನ್ ಹಾಗೂ ಪವಿತ್ರಾ ಇಬ್ಬರೂ ಅಲ್ಲಿದ್ದರು. ಆ ಬಳಿಕ ದರ್ಶನ್ ಮತ್ತು ಪವಿತ್ರಾ ಮನೆಗೆ ಹೋಗಿದ್ದರು. ನಾವು ಮತ್ತೆ ರೇಣುಕಾ ಸ್ವಾಮಿಗೆ ಹೊಡೆದೆವು. ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.