Site icon Vistara News

Actor Darshan: 2021ರಲ್ಲಿ ದರ್ಶನ್ ನನ್ನ ಮಾತು ಕೇಳಿದ್ದಿದ್ರೆ ಹೀಗಾಗುತ್ತಿರಲಿಲ್ಲ: ಇಂದ್ರಜಿತ್ ಲಂಕೇಶ್

Actor Darshan

ಮಂಡ್ಯ: ನಾನು ಈಗಾಗಲೇ ದರ್ಶನ್‌ (Actor Darshan) ಬಂಧನದ ಬಗ್ಗೆ ಮಾತನಾಡಿದ್ದೇನೆ. 2021ರಲ್ಲೂ ದರ್ಶನ್ ಬಗ್ಗೆ ಮಾತನಾಡಿದ್ದೆ. ಈ ಹಿಂದೆ ನಾನು ಏಕಾಂಗಿಯಾಗಿ ಧ್ವನಿ ಎತ್ತಿದ್ದೆ. ಅವತ್ತು ಸುಧಾರಣೆಯಾಗಿದ್ದರೆ ಈತರಹ ಅನಾಹುತ ಆಗುತ್ತಿರಲಿಲ್ಲ, ನನ್ನ ಮಾತು ಕೇಳಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ವಿಚಾರ ಪ್ರತಿಕ್ರಿಯಿಸಿ, ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಕೊಡಿಸಬೇಕು. ಆಯಮ್ಮ ಗರ್ಭಿಣಿ, ವಿಧವೆ ಆಗುವ ಕನಸನ್ನು ಕಂಡಿರಲಿಲ್ಲ. ಇನ್ನು ಹುಟ್ಟದ ಮಗುವಿಗೆ ಭವಿಷ್ಯ ಇಲ್ಲದಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯದ ಜತೆಗೆ ಆರ್ಥಿಕವಾಗಿ ಸಹಾಯ ಮಾಡಬೇಕು. ಆ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 20 ಸಾವಿರ ಕೊಡುತ್ತಿದ್ದೇನೆ. ಎಲ್ಲರೂ ಮುಂದೆ ಬಂದು ಸಹಾಯ ಮಾಡಿ ಮಗುವಿಗೆ ಭವಿಷ್ಯ ಕಟ್ಟಿಕೊಡಬೇಕು ಎಂದು ಮನವಿ ಮಾಡಿದರು.

ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಈ ಬಗ್ಗೆ ನಾನು ಮಾತನಾಡುವುದಕ್ಕೆ ಇಷ್ಟ ಇಲ್ಲ. 2021ರಲ್ಲಿ ದರ್ಶನ್ ನನ್ನ ಮಾತು ಕೇಳಿದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅವರ ಒಳ್ಳೆಯದಕ್ಕೆ ನಾನು ಹೇಳಿದ್ದೆ, ವೈಯಕ್ತಿಕವಾಗಿ ನನಗೂ ಅವರಿಗೂ ದ್ವೇಷ ಇಲ್ಲ. ಅವರ ಜತೆ ಎರಡು ಸಿನಿಮಾ ಮಾಡಿದ್ದೆ. ಲಂಕೇಶ್ ಪತ್ರಿಕೆ ಸಿನಿಮಾ ಮೂಲಕ ಅಡ್ವಾನ್ಸ್ ಕೊಟ್ಟಾಗ ಕಾರು ತೆಗೆದುಕೊಂಡಿದ್ದರು, ಇವತ್ತಿಗೂ ಅವರತ್ರ ಸ್ಕೋಡಾ 171 ಕಾರು ಇದೆ. ದರ್ಶನ್ ಬೆಳೆದು ಬಂದ ದಾರಿ ಬಹಳ ಕಷ್ಟವಾಗಿತ್ತು. ಈ ತರಹದ ಪರಿಸ್ಥಿತಿ ಆಗಬಾರದಿತ್ತು. 2021ರಲ್ಲಿ ಏಕಾಂಗಿಯಾಗಿ ಧ್ವನಿ ಎತ್ತಿದ್ದೆ. ಅವತ್ತು ಸುಧಾರಣೆಯಾಗಿದ್ರೆ ಈತರಹ ಅನಾಹುತ ಆಗುತ್ತಿರಲಿಲ್ಲ. ನನ್ನ ಮಾತು ಕೇಳಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ರೇಣುಕಾಸ್ವಾಮಿ ಕುಟುಂಬಕ್ಕೆ ಅನ್ಯಾಯ ಆಗಿದೆ, ನ್ಯಾಯ ಕೊಡಿಸಿ. ಈ ಘಟನೆ ನಡೆಯೋದಕ್ಕೆ ಸಾಮಾಜಿಕ ಜಾಲತಾಣವೇ ಕಾರಣ. ಸಾಮಾಜಿಕ ಜಾಲತಾಣ ಇಂದು ಅದ್ಭುತವಾದ ಮಾಧ್ಯಮ. ಆದರೆ ಬಹಳ ದುರ್ಬಳಕೆ ಆಗುತ್ತಿದೆ. ಈ ಘಟನೆ ನಡೆಯೋದಕ್ಕೆ ಸೋಷಿಯಲ್ ಮೀಡಿಯಾವೇ ಕಾರಣ. ಅಶ್ಲೀಲವಾದ ಮೆಸೇಜ್ ಹಾಕದಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಸರ್ಕಾರ ಸಾಮಾಜಿಕ ಜಾಲತಾಣದ ಬಗ್ಗೆ ಹೆಚ್ಚು ಗಮನಹರಿಸಬೇಕು. ಪತ್ರಕರ್ತರ ಮೇ ಹೇಗೆ ಮಾನನಷ್ಟ ಕೇಸ್ ಹಾಕುತ್ತಾರೆ, ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ತಪ್ಪು ಮಾಹಿತಿ ಅಥವಾ ಅಶ್ಲೀಲ ಮೆಸೇಜ್ ಹಾಕುವವರಿಗೂ ಕೇಸ್ ಹಾಕಬೇಕು. ಮಂತ್ರಿ, ಸಿಎಂ ಮನೆಯಲ್ಲಿ ಕ್ರೈಂ ನಡೆದರೆ ಕ್ರಮ ಕೈಗೊಳ್ಳುತ್ತಾರೆ. ಬೇರೆ ಮನೆಯವರ ಮನೆಯಲ್ಲಿ ನಗುತ್ತಾ ಕೂರುತ್ತಾರೆ. ಸಿಎಂ ಸಿದ್ದರಾಮಯ್ಯನವರು ಸೈಬರ್ ಕ್ರೈಮ್ ಪೊಲೀಸರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡಬೇಕೆಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ಬ್ಯಾನ್ ಅನ್ನೋ ಶಬ್ದವನ್ನು ಯಾರೂ ಉಪಯೋಗಿಸಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲೂ ಯಾರನ್ನೂ ಬ್ಯಾನ್ ಮಾಡಬಾರದು. ಈ ಹಿಂದೆ ಮಹಿಳೆಯರನ್ನು ಬ್ಯಾನ್ ಮಾಡಿದ್ದರು, ಆ ರೀತಿ ಮಾಡಬಾರದಿತ್ತು. ಕೋರ್ಟ್ ಕೂಡ ಕೆಲಸ ಇಲ್ಲದೇ ಯಾರೂ ಇರಬಾರದು ಅಂತ ಹೇಳುತ್ತೆ. ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು. ಘಟನೆಯನ್ನು ಈಗಾಗಲೇ ನಾವು ಖಂಡಿಸಿದ್ದೇವೆ. ತನಿಖೆ ನಡೆಯುತ್ತಿದೆ, ಚಾರ್ಜ್ ಶೀಟ್ ಹಾಕುತ್ತಾರೆ. ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Murder Case : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಂದು ನೇಣಿಗೆ ಶರಣಾದ ಪತಿ

ಇಂದ್ರಜಿತ್‌ ಲಂಕೇಶ್‌ಗೆ ಬಂದಿದ್ದವು ಬೆದರಿಕೆ ಕರೆಗಳು

2021ರಲ್ಲಿ ನಟ ದರ್ಶನ್ ಪ್ರಚೋದನೆಯಿಂದ ಅವರ ಹಿಂಬಾಲಕರು, ಬೆಂಬಲಿಗರು ನನಗೆ ಮೊಬೈಲ್ ಕರೆ ಹಾಗೂ ಮೆಸೇಜ್‌ಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಬೆದರಿಕೆ ಕರೆಗಳು ಬಂದಿದ್ದ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್‌ ಕಮಿಷನರ್‌ಗೆ ಇಂದ್ರಜಿತ್‌ ಲಂಕೇಶ್‌ ದೂರು ನೀಡಿದ್ದರು.

Exit mobile version