ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳ್ಳಿ ಹಬ್ಬದಲ್ಲಿ ಚಿತ್ರರಂಗದ ಗಣ್ಯರು ಸೇರಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು.
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿನಯ್ ಗುರೂಜಿ, ನಟ ವಿನೋದ್ ರಾಜ್ ಕುಮಾರ್, ನಟಿ, ಸಂಸದೆ, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಧನ್ವೀರ್, ನೀನಾಸಂ ಸತೀಶ್, ಶರಣ್, ಚಿಕ್ಕಣ್ಣ, ನೆನಪಿರಲಿ ಪ್ರೇಮ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುತ್ತೂರು ಶ್ರೀಗಳು ಮಾತನಾಡಿ, ನಟ ದರ್ಶನ್ ಅವರು ಕಲಾ ಕ್ಷೇತ್ರಕ್ಕೆ ಪ್ರವೇಶ ಮಾಡಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಅಚರಿಸಲಾಗುತ್ತಿದೆ. ಈ ದಿನಗಳಲ್ಲಿ ಜನರ ಅಪಾರ ಅಭಿಮಾನ, ಪ್ರೀತಿ ಗಳಿಸಿದ ಮೇರು ಕಲಾವಿದರಲ್ಲಿ ದರ್ಶನ್ ಕೂಡ ಒಬ್ಬರು. ಕಲಾಕ್ಷೇತ್ರದಲ್ಲಿ ರಜತ ಮಹೋತ್ಸವ ಅಚರಿಸಿಕೊಂಡ ಹಾಗೆ ಅವರು ಸುವರ್ಣ ಸಂಭ್ರಮ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ಆದಿಚುಂಚನಗಿರಿ ಶ್ರೀಗಳು ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮ. ಬದುಕು ಮಂಗಳಕರವಾಗಿ ಇರಬೇಕು ಎಂದರೆ, ನಮ್ಮ ಬದುಕಿಗೆ ಕಲೆ ತುಂಬಾ ಮುಖ್ಯ. ಕನ್ನಡ ಚಿತ್ರರಂಗವನ್ನು ಡಾ.ರಾಜಕುಮಾರ್, ಅಂಬರೀಶ್ ಸೇರಿ ಹಲವರು ಬೆಳಗಿದ್ದಾರೆ. ಇವರ ಜತೆಗೆ ಕಲೆಗೆ ಮತ್ತಷ್ಟು ಮೆರುಗು ತಂದುಕೊಟ್ಟವರು ತೂಗುದೀಪ್ ಶ್ರೀನಿವಾಸ್. ಅಂತಹವರ ಪುತ್ರನಾಗಿರುವ ದರ್ಶನ್ ಅವರು, ತಂದೆಯವರನ್ನೂ ಮೀರಿ ಬೆಳೆದಿದ್ದಾರೆ. ಯಶಸ್ಸಿನ ತುತ್ತತುದಿಯಲ್ಲಿದ್ದರೂ ವಿನೀತರಾಗಿರುವ ದರ್ಶನ್, ಎಲ್ಲರಿಗೂ ಬೆರಗು ಮೂಡಿಸುವ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | Emraan Hashmi: ‘ಗೂಢಚಾರಿ-2’ ಟೀಂ ಸೇರಿದ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ!
ಸಾಧನೆಯ ಮುಖಾಂತರ ವ್ಯಕ್ತಿ ಎತ್ತರಕ್ಕೆ ಹೋಗಬಹುದು. ಆದರೆ, ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟ. ಯಾವ ರೀತಿ ಯಶಸ್ಸಿನ ತುತ್ತತುದಿಗೆ ಹೋಗಲು ಶಿಸ್ತು ಬೇಕೋ, ಅದಕ್ಕಿಂತ ಹೆಚ್ಚಿನ ಶಿಸ್ತು, ಪರಿಶ್ರಮ ಆ ಯಶಸ್ಸನ್ನು ಉಳಿಸಿಕೊಳ್ಳಲು ಬೇಕು. ಅಂತಹ ರೀತಿಯಲ್ಲಿ ಹಲವು ಸದ್ಗುಣಗಳನ್ನು ದರ್ಶನ್ ಹೊಂದಿದ್ದಾರೆ. ಕಲೆಗಾರ ಸದಾ ಕಲೆಯನ್ನು ಆರಾಧಿಸುವ ಜನರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾನೆ. ಆದರೆ ಕಲಾವಿದನಿಗೂ ಸಾಕಷ್ಟು ಸಮಸ್ಯೆ, ನೋವುಗಳು ಇರುತ್ತವೆ. ಅವೆಲ್ಲವನ್ನು ಬಿಟ್ಟು ಅಭಿಮಾನಿಗಳನ್ನು ಸಂತೋಷಪಡಿಸುವುದು ತ್ಯಾಗದ ಭಾವದಿಂದ ಬರುತ್ತದೆ. ಅಂತಹ ರೀತಿಯಲ್ಲಿ ಕಲೆಗೆ ತಮ್ಮ ಬದುಕು ಅರ್ಪಿಸಿರುವ ದರ್ಶನ್ ಅವರು ಮತ್ತಷ್ಟು ಯಶಸ್ಸು ಗಳಿಸಲಿ ಎಂದು ಆದಿಚುಂಚನಗಿರಿ ಶ್ರೀಗಳು ಶುಭ ಹಾರೈಸಿದರು.
ಇದನ್ನೂ ಓದಿ | Challenging Star Darshan: `ಸಿಂಧೂರ ಲಕ್ಷ್ಮಣ’ನಾಗಿ ಮಿಂಚಲಿದ್ದಾರೆ ದರ್ಶನ್; ಸಾಲು ಸಾಲು ಸಿನಿಮಾಗಳು ಅನೌನ್ಸ್!
ವಿನಯ್ ಗುರೂಜಿ ಮಾತನಾಡಿ, ಕಲೆಗೆ ಒಂದು ಸಮುದ್ರ ಅಂದ್ರೆ ಡಿ ಬಾಸ್. ಮಂಡ್ಯಕ್ಕೆ 8 ಬಾರಿ ಬಂದಿದ್ದೇನೆ. ಮಂಡ್ಯ ಜನರಲ್ಲಿ ಮೋಸ ಇಲ್ಲ. ಅಭಿಮಾನಿಗಳನ್ನು ದೇವರು ಅಂತ ದರ್ಶನ್ ಸಂಭ್ರಮಿಸುತ್ತಾರೆ. ಅವರ ಮನಸ್ಸಿನ ಒಳಗೆ ಹೆಚ್ಚು ಪ್ರೀತಿ ಇದೆ. ಇನ್ನೊಬ್ಬ ಕಲಾವಿದ ಬೆಳೆಯಬೇಕು ಅಂತ ಅವರು ಆಶಿಸುತ್ತಾರೆ. ಕನ್ನಡ ಭಾಷೆಯನ್ನು ಉಸಿರಾಗಿಟ್ಟುಕೊಂಡಿದ್ದಾರೆ. ದರ್ಶನ್ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ದರ್ಶನ್‌ಗೆ ಸಿನಿಮಾ ರಂಗದಲ್ಲಿ 25 ವರ್ಷ ತುಂಬಿದೆ. ಕಾಟೇರ ಸಿನಿಮಾ 50ನೇ ದಿನದ ಸಂಭ್ರಮಾಚರಣೆಯಲ್ಲಿದೆ. ಕಾಟೇರ ಸಿನಿಮಾ ಫ್ರೀ ರೀಲಿಸ್ ಕಾರ್ಯಕ್ರಮದಲ್ಲಿ ಸಕ್ಸಸ್ ಬಗ್ಗೆ ಹೇಳಿದ್ದೆ, ಅದೇ ರೀತಿ ಕಾಟೇರ ಯಶಸ್ವಿಯಾಗಿದೆ. ದರ್ಶನ್‌ರ ಮೊದಲ ಹೆಜ್ಜೆ ಮೆಜೆಸ್ಟಿಕ್ ಸಿನಿಮಾ ಪೂಜೆಗೆ ಹೋಗಿದ್ದೆವು, ಆಗ ದರ್ಶನ್‌ಗೆ 27 ವರ್ಷ, ಈಗಲೂ 47 ವರ್ಷ ಅಲ್ಲ 27 ವರ್ಷದ ತರ ಕಾಣ್ತಿದ್ದಾರೆ ಎಂದರು.
ತಾಯಿಗೆ ಯಾವತ್ತೂ ಮಕ್ಕಳು ಚಿಕ್ಕವರೇ. ಚಾಲೆಂಜಿಂಗ್ ಸ್ಟಾರ್ ಶ್ರಮ ಪಟ್ಟು ಅಭಿಮಾನಿಗಳ ಬಳಿ ಪ್ರೀತಿ ಗಳಿಸಿದ್ದಾರೆ. ಕಷ್ಟ ಪಟ್ಟು ದರ್ಶನ್ ಈ ಎತ್ತರಕ್ಕೆ ಬೆಳೆದಿದ್ದಾರೆ. ಒಬ್ಬ ತಾಯಿಯಾಯಿ ಮಾತನಾಡುತ್ತಿದ್ದೀನಿ ಅಂದ್ರೆ ಅದು ಹೆಮ್ಮೆ. ದರ್ಶನ್ ನನ್ನ ಜೊತೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಭಿಗೆ ಅಣ್ಣನಾಗಿ ಇದ್ದಾರೆ. ಅಂಬರೀಶ್ ಇಲ್ಲದಿದ್ದರೂ ದರ್ಶನ್ ನನ್ನೊಟ್ಟಿಗೆ ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಜೊತೆ ಇದ್ದವರಿಗೆ ಗೊತ್ತಿದೆ. ಅವತ್ತು ಜೊತೆಗೆ ನಿಂತು ದರ್ಶನ್, ಯಶ್ ಧೈರ್ಯ ತುಂಬಿದರು. ನನಗಿಂತ ಹೆಚ್ಚು ಶ್ರಮ ಪಟ್ಟಿದ್ದರು ಎಂದು ಸ್ಮರಿಸಿದರು.
ಅಂಬರೀಶ್ ಅವರ ಬಳಿಕ ದರ್ಶನ್ ಅವರಲ್ಲಿ ಒಳ್ಳೆಯ ಗುಣ ನೋಡ್ತಿದ್ದೇನೆ. ಒಳ್ಳೆಯದನ್ನು ಮಾಡುವವರಿಗೆ ದೇವರು ಒಳ್ಳೆಯದನ್ನೇ ಮಾಡ್ತಾನೆ. ನನ್ನ ಹಿಂದೆ ನನ್ನ ಮಕ್ಕಳು ಇದ್ದಾರೆ. 5 ವರ್ಷ ಹೇಗೆ ಕಳೆಯಿತು ಅಂತ ಗೊತ್ತಿಲ್ಲ. ಯಶ್, ದರ್ಶನ್ ಕಷ್ಟ ಪಟ್ಟು ಹೋರಾಡಿದರು. ಮಣ್ಣಿನ ತಿಲಕ ಹಚ್ಚಿ ಅಂಬರೀಶ್ ಅವರನ್ನು ಬೀಳ್ಕೊಟ್ಟಿದ್ದೆವು, ಈ ಮಂಡ್ಯದ ಮಣ್ಣನ್ನು ನಾನು ಬಿಡಲ್ಲ ಎಂದು ಹೇಳಿದರು.
ವೇದಿಕೆ ಮೇಲೆ ಚಂದನವನದ ನಟ-ನಟಿಯರು ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಖ್ಯಾತ ಗಾಯಕರು ದರ್ಶನ್ ಅವರ ಸಿನಿಮಾಗಳ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.