ಬೆಂಗಳೂರು: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Actor Duniya Vijay) ಪುತ್ರನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಕೋರ್ಟ್ ಮರುಜೀವ ಸಿಕ್ಕಿದೆ. ಹಲ್ಲೆ ಸಂಬಂಧ ಹೈಗ್ರೌಂಡ್ ಪೊಲೀಸ್ ಸ್ಟೇಶನ್‌ನಲ್ಲಿ ನಟ ವಿಜಯ್ ದಾಖಲಿಸಿದ್ದ ದೂರಿನ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪಾನಿಪುರಿ ಕಿಟ್ಟಿ ಎಸಿಪಿ ಕಚೇರಿಗೆ ಬಂದು ವಿಚಾರಣೆಯನ್ನು ಎದುರಿಸಿದ್ದಾರೆ.
ವಿಜಯ್ ಹಾಗೂ ಅವರ ಮಗನಿಗೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಹಾಗೂ ಅವರ ಅಣ್ಣನ ಮಗ ಮಾರುತಿ ಗೌಡ ಮೇಲೆ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದು, ಅಂಬೇಡ್ಕರ್ ಭವನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಕೌಂಟರ್ ಕೇಸ್ ಇದಾಗಿದೆ. ಒಂದು ಕೇಸ್‌ನಲ್ಲಿ ತನಿಖೆ ಮಾಡಿ ಚಾರ್ಜ್‌ಶೀಟ್ ಮಾಡಲಾಗಿದೆ. ಮತ್ತೊಂದು ಕೇಸ್ ನ್ಯಾಯಾಲಯದ ಅನುಮತಿಯಂತೆ ಪಾನಿಪುರಿ ಕಿಟ್ಟಿ ಮೇಲೆ ಎಫ್ಆರ್‌ಐ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಪಾನಿಪುರಿ ಕಿಟ್ಟಿಗೆ ನೋಟಿಸ್ ಕೊಟ್ಟು ಕರೆಸಲಾಗಿದೆ. ಪಾನಿಪುರಿ ಕಿಟ್ಟಿಯನ್ನು ಶೇಷಾದ್ರಿಪುರ ಎಸಿಪಿ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ಗಲಾಟೆ ಪ್ರಕರಣ?
2018ರ ಸೆಪ್ಟೆಂಬರ್ 23ರಂದು ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಗ್ಯಾಂಗ್ ನಡುವೆ ಗಲಾಟೆ ನಡೆದಿತ್ತು.
ನಟ ವಿಜಯ್ ಹಾಗೂ ಮಗ ಸಾಮ್ರಾಟ್ ವಿಜಯ್ ಆ ದಿನ ಸಂಜೆ 6.30ರ ಸುಮಾರಿಗೆ ಕಾರ್ಯಕ್ರಮ ಮುಗಿಸಿಕೊಂಡು ಹೊರಗೆ ಹೋಗುವಾಗ, ಪಾನಿಪುರಿ ಕಿಟ್ಟಿ ಸಹೋದರನ ಮಗ ಮಾರುತಿ ಗೌಡ ಎಂಬಾತ ದುನಿಯಾ ವಿಜಯ್ ಮಗನಿಗೆ ʻಏನೋ ನಿನ್ನದು ಜಾಸ್ತಿ ಆಯಿತು, ಈ ವಯಸ್ಸಿಗೆ ಫಿಲ್ಮನರಿ ಡೈಲಾಗ್ ಹೊಡೆದುಕೊಂಡು ತುಂಬಾ ಮೆರೆಯುತ್ತಿದ್ದೀಯಾ? ನಿನ್ನ ಮತ್ತು ನಿಮ್ಮ ಅಪ್ಪನನ್ನು ಕೊಂದು ಬಿಡುತ್ತೆನೆ” ಎಂದು ಬೆದರಿಕೆ ಹಾಕಿದ್ದನೆಂದು ಆರೋಪ ಮಾಡಲಾಗಿದೆ. ಇದನ್ನು ಕೇಳಿಸಿಕೊಂಡ ದುನಿಯಾ ವಿಜಯ್ ಅಭಿಮಾನಿಗಳು ಮಾರುತಿ ಜತೆಗೆ ಗಲಾಟೆ ಮಾಡಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆಗ ದುನಿಯಾ ವಿಜಯ್ ಮಧ್ಯಪ್ರವೇಶ ಮಾಡಿ ಮಾರುತಿಗೌಡನನ್ನು ರಕ್ಷಿಸಿ, ತಮ್ಮದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಹೋಗುವಾಗ ಮಾರುತಿ ಗೌಡ ತನ್ನ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ಕರೆ ಮಾಡಿದ್ದಾರೆ. ಆಗ ಜತೆಗಿದ್ದ ನಟ ವಿಜಯ್ ಮೊಬೈಲ್ ಕಿತ್ತುಕೊಂಡು ಮಾತನಾಡಿದ್ದಾರೆ. ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ಮಧ್ಯೆ ಪಾನಿಪುರಿ ಕಿಟ್ಟಿ ಅಂಬೇಡ್ಕರ್ ಭವನಕ್ಕೆ ಬಾ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಕುವಿನಿಂದ ತಿವಿಯಲು ಮುಂದಾದ ಕಿಟ್ಟಿ ಗ್ಯಾಂಗ್
ಈ ಮಧ್ಯೆ ಗಲಾಟೆಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ನಟ ವಿಜಯ್‌ಗೆ ಮಾರುತಿ ಗೌಡನನ್ನು ಠಾಣೆಗೆ ಕರೆ ತರುವಂತೆ ತಾಕೀತು ಮಾಡಿದ್ದಾರೆ. ಮಾರುತಿಯನ್ನು ಠಾಣೆ ಮುಂಭಾಗ ಕರೆತರುತ್ತಿದ್ದಂತೆ ಪಾನಿಪುರಿ ಕಿಟ್ಟಿ ಸಹಚರರು ಗುಂಪುಗೂಡಿ ಅಲ್ಲಿಯೇ ಕೊಲೆ ಮಾಡುವುದಾಗಿ, ವಿಜಯ್ ಮಗನನ್ನು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಗುಂಪಿನಲ್ಲಿದ್ದ ಒಬ್ಬ, ಚಾಕುವನ್ನು ಹಿಡಿದುಕೊಂಡು ತಿವಿಯಲು ಬಂದಾಗ, ವಿಜಯ್ ತಪ್ಪಿಸಿಕೊಂಡು ಠಾಣೆಗೆ ಓಡಿ ಬಂದಿದ್ದರು. ವಿಜಯ್ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಲಾಗಿತ್ತು. ಅಲ್ಲದೆ, ತನಗೆ ಮತ್ತು ತನ್ನ ಮಗನಿಗೆ ಜೀವ ಬೆದರಿಕೆ ಹಾಕಿರುವ ಪಾನಿಪರಿ ಕಿಟ್ಟಿ, ಮಾರುತಿಗೌಡ ಹಾಗೂ ಅವರ ಸಹಚರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದುನಿಯಾ ವಿಜಯ್ ದೂರು ನೀಡಿದ್ದರು.
ಕೌಂಟರ್ ಕಂಪ್ಲೇಂಟ್ ದಾಖಲು
ಕಾರಿನಲ್ಲಿ ಮಾರುತಿ ಗೌಡಗೆ ವಿಜಯ್ ಗ್ಯಾಂಗ್ ಹಿಗ್ಗಾಮುಗ್ಗ ಥಳಿಸಿದೆ ಎಂದು ಹೇಳಲಾಗಿದ್ದು, ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಇದಾದ ಬಳಿಕ ಎರಡೂ ಕಡೆಯವರು ಕೌಂಟರ್ ಕಂಪ್ಲೇಂಟ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು.
ಸದ್ಯ ವಿಜಯ್ ಮೇಲಿರುವ ದೂರು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ದೂರು ಸಾಕ್ಷ್ಯ ಕೊರತೆಯಿಂದಾಗಿ ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. ಈಗ ಇನ್ನೊಮ್ಮೆ ಕೇಸ್ ದಾಖಲಿಸಿದ್ದರಿಂದ ವಿಚಾರಣೆ ನಡೆಸಿದ್ದ ಹೈಕೋರ್ಟ್ ತನಿಖೆ ನಡೆಸಲು ಸೂಚನೆ ನೀಡಿದೆ. ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ | Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ, ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಬೇಲಾ ತ್ರಿವೇದಿ