ದ್ವಾರಕೀಶ್
ನಿಜ! ಜೀವನದಲ್ಲಿ ಪ್ರತಿಯೊಬ್ಬರಿಗೂ ಹಠವಿರಬೇಕು, ಆದರೆ ಆ ಹಠ ಒಳ್ಳೆಯ ಧೈಯ ಹೊಂದಿರಬೇಕು. ಅಂತಹ ಜೀವನದಲ್ಲಿ ಸತ್ಯದ ಸೇವೆಯ, ಜನಸೇವೆಯ ಪ್ರೀತಿ ಅಭಿಮಾನದ, ದೇಶಾಭಿಮಾನದ, ಭಾಷಾಭಿಮಾನದ, ಸದುದ್ಧೇಯದ ಹಠವನ್ನು ಹೊತ್ತು ಒಂದು ಚಿಕ್ಕ ಹಳ್ಳಿಯಲ್ಲಿ ಬಡ ರೈತನ ಮಗನಾಗಿ ಹುಟ್ಟಿ ಇಂದು ತಾನು ಹುಟ್ಟಿದ ನಾಡಿನ ನಾಯಕರಾಗಿದ್ದಾರೆ ನಮ್ಮ ಯಡಿಯೂರಪ್ಪನವರು. ಅವರ ಹೃದಯದ ಕೆಚ್ಚು ಹಠದ ಬಗ್ಗೆ ನಮಗೆ ಬಹಳ ಅಭಿಮಾನವೆನಿಸುತ್ತದೆ.
ಇಷ್ಟೆಲ್ಲ ನಾನು ಅವರ ಬಗ್ಗೆ ಹೇಳಲಿಕ್ಕೆ ಕಾರಣ, ಅವರಿಗಿದ್ದ ಹಠದ ಜೊತೆಯಲ್ಲಿ ಅವರು ನಡೆದು ಬಂದ ದಾರಿ. ಮನುಷ್ಯನಾಗಿ ಧೈಯ ಹೇಗೆ ಮುಖ್ಯವೋ, ಅಷ್ಟೇ ಮುಖ್ಯ ಅವರು ನಡೆದು ಬರುವ ದಾರಿ. ಮೊದಲಿನಿಂದಲೂ ಒಂದೇ ಪಕ್ಷವನ್ನು ದೃಢವಾಗಿ ನಂಬಿ, ಆ ಪಕ್ಷಕ್ಕಾಗಿ ದುಡಿದು-ದುಡಿದು ಇಂದು ಆ ಪಕ್ಷವನ್ನು, ಅಂದರೆ, ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಹಿಡಿದೆಬ್ಬಿಸಿ ನಿಲ್ಲಿಸಿದ್ದಾರೆ. ಇದು ಅವರ ಬಗ್ಗೆ ನಮಗೆ ಬಹಳ ಹೆಮ್ಮೆಯನ್ನು ತಂದಿದೆ, ಮನಸ್ಸಿಗೆ ಸಂತಸ ತಂದಿದೆ. ನನ್ನ ಹಾಗೂ ಯಡಿಯೂರಪ್ಪನವರ ಪರಿಚಯ ಸ್ನೇಹದ ಬಗ್ಗೆ ಹೇಳುವುದಾದರೆ ಕೆಲವು ತಿಂಗಳುಗಳ ಕಾಲ ಅವರ ಜತೆಯಲ್ಲಿ ಒಡನಾಟ ಆ ಅನುಭವ! ಸಾಮಾನ್ಯವಾಗಿ ಅನ್ನ ಆಗಿದೆಯೋ ಎಂದು ಹೇಗೆ ಒಂದು ಅಗಳು ಅನ್ನ ನೋಡಿ ತಿಳಿದುಕೊಳ್ಳಬಹುದೋ ಹಾಗೆ, ಕೆಲವು ದಿನ ಅವರೊಡನೆ ಕಳೆದ ದಿನಗಳು ಅವರ ಬಗ್ಗೆ ಬರೆಯಲು ನನಗೆ ಧೈರ್ಯ-ಹುಮ್ಮಸ್ಸು ಕೊಡುತ್ತದೆ. 1998ನೇ ಇಸವಿಯಲ್ಲಿ ಅವರ ಜೊತೆಯಲ್ಲಿ ಪಕ್ಷಕ್ಕಾಗಿ ಓಡಾಡುವ ಅವಕಾಶ ನನಗೆ ದೊರಕಿತು. ಶಿವಮೊಗ್ಗ, ಗುಲ್ಬರ್ಗಾ, ಬೆಳಗಾಂ ಮತ್ತು ಕೋಲಾರ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಅವರ ಜೊತೆಯಲ್ಲಿ ಓಡಾಡಿದ್ದೇನೆ.
ಒಬ್ಬ ಸಾಮಾನ್ಯ ಕಲಾವಿದನಾದ ನನಗೆ ಅವರು ತೋರಿಸಿದ ಅತೀ ಹೆಚ್ಚಿನ ಪ್ರೀತಿ ವಿಶ್ವಾಸ, ಆದರ, ಅಭಿಮಾನದಿಂದ ನಾವು ಅವರ ಒಳ್ಳೆಯತನವನ್ನು ನೋಡಿದೆವು. ಅದನ್ನು ಕೇವಲ ನಾಲ್ಕಾರು ಪದಗಳಿಂದ ಹೇಳಲು ಸಾಧ್ಯವಿಲ್ಲ. ಆಗತಾನೇ ನನಗೆ ಹೃದಯ ಚಿಕಿತ್ಸೆಯಾಗಿ ಕೆಲವೇ ದಿನಗಳಾಗಿತ್ತು. ನಾವು ಹೋದ ಪ್ರತಿಯೊಂದು ವೇದಿಕೆಯಲ್ಲೂ ಅವರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯದಲ್ಲಿಯೂ ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ನನಗೆ ಆಗುತ್ತಿದ್ದ ಆ ತೃಪ್ತಿ, ಸಮಾಧಾನ, ಸಂತೋಷ ಓಹ್! ಅನುಭವಿಸಿದವರಿಗೇ ಗೊತ್ತಾಗುವುದು. ಇಂದಲ್ಲ ನಾಳೆ ಭಾರತೀಯ ಜನತಾ ಪಾರ್ಟಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ, ನಂಬಿಕೆ ಅವರಲ್ಲಿದ್ದುದನ್ನು ನಾನು ಕಂಡಿದ್ದೆ. ಸೋಲುಗಳೇ ಯಶಸ್ಸಿನ ಮೆಟ್ಟಿಲು ಎಂದು ಹೇಳುತ್ತಾರೆ. ಯಾವ ಸೋಲುಗಳನ್ನೂ ಲೆಕ್ಕಿಸದೇ ಗೆಲುವನ್ನೇ ಗುರಿಯಾಗಿಟ್ಟುಕೊಂಡು ಗೆದ್ದವರು ನಮ್ಮ ಯಡಿಯೂರಪ್ಪನವರು.
ಸಾಮಾನ್ಯವಾಗಿ ಯಡಿಯೂರಪ್ಪನವರ ಬಗ್ಗೆ ಕೇಳಿ ಬರುವ ಮಾತು ಅವರಿಗೆ ಕೋಪ ಜಾಸ್ತಿ ಅಂತ. ಅವರ ಜೊತೆಯಲ್ಲಿ ಸ್ವಲ್ಪ ಕಾಲ ಕಳೆದ ನಾನೇನೋ ಎಂದೂ ಹಾಗೆ ಕಂಡಿಲ್ಲ. ಕೋಪದ ಮಾತು ಎಂದು ಹೇಳುವುದಕ್ಕಿಂತ ಸತ್ಯದ ಮಾತು ಎಂದರೆ ಸಮಂಜಸವಾಗುತ್ತದೆ. ಕಾರಣ, ಸತ್ಯ ಎಂದೂ ನಿಷ್ಠುರ, ಸತ್ಯ ಎಂದಿದ್ದರೂ ಕಠಿಣ. ಎಷ್ಟೋ ಬಾರಿ ವೇದಿಕೆ ಮೇಲೆ ಅವರ ಜೊತೆಯಲ್ಲಿ ಕುಳಿತು ಅವರ ಭಾಷಣಗಳನ್ನು ಕೇಳಿದ್ದೇನೆ. ಎಂದೂ ಯಡಿಯೂರಪ್ಪನವರು ಭಾಷಣದಲ್ಲಿ ತೊದಲಿದವರಲ್ಲ ಅಥವಾ ಅತಿಯಾದ ಯೋಚನೆ ಮಾಡಿ ಮಾತನಾಡುವವರಲ್ಲ. ಬ್ರೇಕಿಲ್ಲದೇ ಬಿರುಗಾಳಿಯಂತೆ ಮಾತನಾಡುವವರು ಯಡಿಯೂರಪ್ಪನವರು. ಯಾಕಪ್ಪ ಈ ಬಿರಿಸು ಅವರ ಮಾತಿನಲ್ಲಿ ಎಂದರೆ, ಎಲ್ಲವೂ ಸತ್ಯಕ್ಕೆ ಹತ್ತಿರದ ಮಾತುಗಳೇ ಅವು ! ಯಡಿಯೂರಪ್ಪನವರ ಸತ್ಯದ ಮಾತುಗಳೇ ಕರ್ನಾಟಕ ಜನತೆಯಲ್ಲಿ ಬೇರೂರಿ ಇಂದು ಭಾರತೀಯ ಜನತಾ ಪಕ್ಷದ ಬಾವುಟ ಹಾರಾಡಿದೆ.
ಜ್ಞಾಪಕಶಕ್ತಿಯಲ್ಲಿ ಯಡಿಯೂರಪ್ಪನವರು ಯಾರಿಗೂ ಕಡಿಮೆಯಿಲ್ಲ. ಸರ್ಕಾರದಿಂದ ನನಗೆ ಜೀವಮಾನ ಸಾಧನೆಗೆ ಪ್ರಶಸ್ತಿ ಬಂದಾಗ ನನ್ನ ಬಗ್ಗೆ ಅವರು ಆಡಿದ ಮುತ್ತಿನಂತಹ ಮಾತುಗಳು ನನ್ನ ಮನಸ್ಸಿನಾಳದಲ್ಲಿ ಇನ್ನೂ ಧ್ವನಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಅವರ ಜೊತೆಯಲ್ಲಿ ಕಾಲ ಕಳೆದಾಗ ನಾನೊಬ್ಬ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತ, ಆರಾಧಕ ಎಂದು ಅವರಿಗೆ ತಿಳಿದಿತ್ತು. ಅದನ್ನು ಮರೆತಿರದ ಅವರು, ಆ ದಿನ ಪ್ರಶಸ್ತಿ ಪ್ರಧಾನ ಮಾಡುವಾಗ ಇಂದು ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ದಿನ ಈ ದಿವಸ ಅವರ ಭಕ್ತ ಆರಾಧಕ ಶ್ರೀ ದ್ವಾರಕೀಶರವರಿಗೆ ಪ್ರಶಸ್ತಿ ಬಂದಿದೆ, ಅದಕ್ಕಿಂತ ಹೆಚ್ಚಿನ ಸಂತೋಷ ನನಗಿಲ್ಲ ಎಂದು ಹೇಳಿದ್ದರವರು. ಆ ದಿನ ನನಗೆ ಹೃದಯ ತುಂಬಿ ಬಂದು ಕಣ್ಣಲ್ಲಿ ನೀರು ತಂದಿತ್ತು. ಈಗ ಕೂಡ ಅದನ್ನು ನೆನೆಸಿಕೊಳ್ಳುವಾಗ ಒಂದು ತರಹ ಅಪೂರ್ವವಾದ ಆನಂದ, ತೃಪ್ತಿ ಮನಸ್ಸಿಗೆ ಆಗುತ್ತದೆ. ಇದರಿಂದ ಅವರಿಗೆ ನನ್ನ ಮೇಲೆ ಇರುವ ಪ್ರೀತಿ ವಿಶ್ವಾಸವನ್ನು ನಾನು ಹೇಗೆ ತಾನೇ ಮರೆಯಲು ಸಾಧ್ಯ !
ನಾನು ಸಿನಿಮಾ ಜೀವನದಲ್ಲಿದ್ದವನೇ ಹೊರತು ರಾಜಕೀಯದ ಬಗ್ಗೆ ಕನಸಿನಲ್ಲೂ ಯೋಚಿಸಿದವನಲ್ಲ. ಆದರೆ ಎಲ್ಲೋ ಶ್ರೀ ವಾಜಪೇಯಿಯವರ ಮೇಲೆ ಎಲ್ಲೂ ಇಲ್ಲದ ಅಭಿಮಾನ -ಪ್ರೀತಿ-ವಿಶ್ವಾಸ. ಒಬ್ಬ ಭಾರತೀಯ ಪ್ರಜೆಯಾಗಿ, ಅವರ ಮೇಲೆ ನನಗೆ ಮಾತ್ರವಲ್ಲ, ನನ್ನ ಹಿರಿಯ ಮಗ ಸಂತೋಷ್, ಈಗ ಅಮೇರಿಕಾದಲ್ಲಿ ವಿಪ್ರೋ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ, ಅವನಿಗೂ ಸಹ ಶ್ರೀ ವಾಜಪೇಯಿಯವರೆಂದರೆ ಬಹಳ ಅಚ್ಚು ಮೆಚ್ಚು. ಅವರಷ್ಟೇ ಅಲ್ಲ, ಎಲ್ಲಾ ಬಿ.ಜೆ.ಪಿ ಮುಖಂಡರ ಮೇಲೂ ಅತಿಯಾದ ಪ್ರೀತಿ ಅಭಿಮಾನ ಮತ್ತು ವಿಶ್ವಾಸ. ಅಂದ ಹಾಗೆ ಮರೆತಿದ್ದೆ, ನಾನು ಹುಡುಗನಾಗಿದ್ದಾಗ ಅಂದರೆ 1955-56ನೇ ಇಸವಿಯಲ್ಲಿ (ನಮಸ್ತೆ ಸದಾ ವತ್ಸಲೇ ಮಾತೃಭೂಮೆ…ಎಂದು ಹೇಳುತ್ತಿದ್ದರು). ನನ್ನ ಮನ ಭಾರತೀಯ ಜನತಾ ಪಕ್ಷದ ಕಡೆಗೆ ಸೆಳೆಯಿತು, ಅದರ ಪ್ರತಿಫಲವೇ 1998 ರಲ್ಲಿ ಬೆಂಗಳೂರು ವುಡ್‌ಲ್ಯಾಂಡ್ಸ್ ಹೋಟೆಲ್ನಲ್ಲಿ ಪಕ್ಷದ ಅಧಿವೇಶನ ನಡೆದಾಗ ಶ್ರೀ ಆಡ್ವಾನಿಯವರ ನೇತೃತ್ವದಲ್ಲಿ ಮುಖ್ಯ ಮಂತ್ರಿ ಚಂದ್ರು ಜೊತೆ ಪಕ್ಷದ ಧ್ವಜವನ್ನು ಹಿಡಿಯುವಂತಾಯಿತು. ಆದರೆ ನನ್ನ ಸಂಸಾರ ಮದ್ರಾಸಿನಲ್ಲಿದ್ದುದರಿಂದ, ಗಮನವೆಲ್ಲ ಚಿತ್ರರಂಗದಲ್ಲಿಯೇ ಉಳಿಯಬೇಕಾಯಿತು. ನಾನೇನಾದರೂ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ ಆದರೆ, ಅದಕ್ಕೆ ಕಾರಣ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಚುನಾವಣಾ ಪ್ರಚಾರ ಎಂದರೆ ಒಂದು ವಿಚಾರ ನೆನಪಿಗೆ ಬರುತ್ತದೆ. ಅದನ್ನು ಇಲ್ಲಿ ಹೇಳುವುದು ಬಹು ಸಮಂಜಸವಾಗಿದೆ ಎಂದರೆ ತಪ್ಪಾಗುವುದಿಲ್ಲ.
ನಾವು ಚುನಾವಣಾ ಪ್ರಚಾರಕ್ಕೆ ಮೂರು ದಿನ ಬೆಳಗಾವಿಗೆ ಹೊರಡುವುದು ನಿಶ್ಚಿತವಾಗಿತ್ತು. ನನಗೆ ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ, ಭಯ, ಕಾರಣ ನನಗೆ ಸಿನಿಮಾದಲ್ಲಿ ಮಾತನಾಡಿ ಅಭ್ಯಾಸವಿತ್ತೇ ವಿನಃ ಚುನಾವಣಾ ಭಾಷಣದ ವೈಖರಿ ಗೊತ್ತಿರಲಿಲ್ಲ. ಅದಕ್ಕೆ ತಕ್ಕ ಹಾಗೆ ಹಿಂದಿನ ದಿನ ರಾತ್ರಿ ನನಗೊಂದು ಫೋನ್ ಕಾಲ್ ಬಂತು ಅದು ಬೆಳಗಾವಿಯಿಂದ. ಒಬ್ಬ ವ್ಯಕ್ತಿ ಪೋನ್‌ನಲ್ಲಿ ಯಾರೀ ಮಾತನಾಡುತ್ತಿರುವುದು, ದ್ವಾರಕೀಶ್ ಅವರಾ, ರೀ ನೀವು ದಯವಿಟ್ಟು ಬೆಳಗಾವಿಗೆ ಬರಬೇಡಿ. ಬಂದರೆ ನಿಮ್ಮ ಗ್ರಹಚಾರ ಕಡಿಮೆಯಾಗುತ್ತೆ ಅಷ್ಟೇ ತಿಳಿದುಕೊಳ್ಳಿ” ಎಂದು ಸ್ವಲ್ಪ ಉದ್ವೇಗ, ಜೋರಿನಿಂದಲೇ ಹೇಳಿದರು, ಆಗ ನಿಜವಾಗಿಯೂ ನನಗೆ ತುಂಬಾ ಭಯವೇ ಆಯಿತು. ಏನಪ್ಪಾ ಮಾಡುವುದು ಎಂದು ಯೋಚನೆ ಮಾಡಿ ಕೊನೆಗೆ ಬೇರೆ ದಾರಿ ಇಲ್ಲ ಯಡಿಯೂರಪ್ಪ ಅವರನ್ನೇ ಕೇಳಿ ಬಿಡೋಣ ಎಂದುಕೊಂಡು, ಅವರಿಗೆ ಪೋನ್ ಮಾಡಿ ಈ ವಿಚಾರ ತಿಳಿಸಿದೆ, ಆಗ ಅವರು ತಕ್ಷಣ ನಕ್ಕುಬಿಟ್ಟರು.
(ಮೂಲ: ʼದಣಿವರಿಯದ ಧೀಮಂತʼ ಕೃತಿ(2020). ಲೇಖನ: ʼಯಡಿಯೂರಪ್ಪ ಹಠವಾದಿʼ