ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್ (81) (Actor Dwarakish) ಅವರು ಮಂಗಳವಾರ (ಏಪ್ರಿಲ್ 16) ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆ, ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ದ್ವಾರಕೀಶ್ ಅವರು ಸ್ನೇಹಜೀವಿಯೂ ಆಗಿದ್ದರು. ಅದರಲ್ಲೂ, ಡಾ.ರಾಜಕುಮಾರ್ (Dr Rajkumar), ಡಾ.ವಿಷ್ಣುವರ್ಧನ್ (Dr Vishnuvardhan) ಅವರೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. ಅದರಲ್ಲೂ, ವಿಷ್ಣುವರ್ಧನ್ ಅವರ ಜತೆ ಹೆಚ್ಚು ಆತ್ಮೀಯತೆ ಹೊಂದಿದ್ದರು.
ವಿಷ್ಣುವರ್ಧನ್-ದ್ವಾರಕೀಶ್ ಜೋಡಿ ಮೋಡಿ
ಕನ್ನಡ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಜೋಡಿಯು ಮೋಡಿ ಮಾಡಿತ್ತು. ಕಳ್ಳ-ಕುಳ್ಳ, ಕಿಟ್ಟು-ಪುಟ್ಟು, ಸಿಂಗಾಪೂರ್‌ನಲ್ಲಿ ರಾಜ-ಕುಳ್ಳ, ಗುರು-ಶಿಷ್ಯರು, ಕಿಲಾಡಿಗಳು ಸೇರಿ ಹಲವು ಸೂಪರ್ ಡೂಪರ್ ಹಿಟ್ ಆದ ಸಿನಿಮಾಗಳಲ್ಲಿ ಇವರ ಜೋಡಿಯು ಮೋಡಿ ಮಾಡಿತ್ತು. ದ್ವಾರಕೀಶ್ ನಿರ್ದೇಶನದ ಮೊದಲ ಚಿತ್ರ ನೀ ಬರೆದ ಕಾದಂಬರಿಯು ಕೂಡ ಭಾರಿ ಹಿಟ್ ಆಯಿತು. “ಒಂದು ದಿನವೂ ವಿಷ್ಣುವರ್ಧನ್ ಕಾಲ್‌ಶೀಟ್ ಇಲ್ಲ ಎಂದಿರಲಿಲ್ಲ” ಎಂಬುದಾಗಿ ಆಗಾಗ ದ್ವಾರಕೀಶ್ ಅವರು ಹೇಳುತ್ತಲೇ ಇದ್ದರು.
ಗೆಳೆಯನಿಗಾಗಿ ಸಿನಿಮಾ ಮಾಡಿದ ವಿಷ್ಣು
ಆಪ್ತಮಿತ್ರ ಸಿನಿಮಾ ಬಿಡುಗಡೆಗೂ ಮೊದಲು ದ್ವಾರಕೀಶ್ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು. ಅವರು ಮನೆ ಕೂಡ ಮಾರಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದರು. ಆಗ, ದ್ವಾರಕೀಶ್ ನೆರವಿಗೆ ಧಾವಿಸಿದ ವಿಷ್ಣುವರ್ಧನ್ ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ದ್ವಾರಕೀಶ್ ನಿರ್ಮಾಣದ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದರು. ಆಪ್ತ ಮಿತ್ರ ಸಿನಿಮಾವು ಹಿಟ್ ಆಗಿ, ಕಾಲವನ್ನು ತಡೆಯೋರು ಯಾರೂ ಇಲ್ಲ ಎಂದು ವಿಷ್ಣು-ದ್ವಾರಕೀಶ್ ಜೋಡಿ ಹಾಡು ಮನೆಮಾತಾಗಿದ್ದಲ್ಲದೆ, ದ್ವಾರಕೀಶ್ ಅವರು ಮತ್ತೆ ಸ್ವಂತ ಮನೆಗೆ ಯಜಮಾನರಾದರು. ಅಷ್ಟರಮಟ್ಟಿಗೆ, ಇವರ ಜೋಡಿ, ಸ್ನೇಹವು ಗಟ್ಟಿಯಾಗಿತ್ತು.
ಸ್ನೇಹದ ಸೊಗಸಿನ ಮಧ್ಯೆ ಮುನಿಸು
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಮಧ್ಯೆ ಆಗಾಗ ಮುನಿಸು, ರಾಜಿ ನಡೆಯುತ್ತಲೇ ಇದ್ದವು. ನಾನು ಯಾವಾಗ ವಿಷ್ಣುವರ್ಧನ್ ಜತೆ ಮುನಿಸಿಕೊಂಡು, ನಂತರ ಒಂದಾಗಿ ಸಿನಿಮಾ ಮಾಡಿದ್ದೇನೆಯೋ, ಆ ಸಿನಿಮಾಗಳೆಲ್ಲ ಹಿಟ್ ಆಗಿವೆ ಎಂದು ದ್ವಾರಕೀಶ್ ಅವರೇ ಹೇಳುತ್ತಿದ್ದರು. ಆದರೆ, ಆಪ್ತಮಿತ್ರ ಸಿನಿಮಾ ಬಳಿಕ ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರ ಬಗ್ಗೆ ನೀಡಿದ ಹೇಳಿಕೆಯು ಇಬ್ಬರ ಮಧ್ಯೆ ಮತ್ತೆ ಬಿರುಕು ಮೂಡಿಸಿತು.
ಇನ್ನು, ವಿಷ್ಣುವರ್ಧನ್ ಅವರ ಅಗಲಿಕೆಯ ಬಳಿಕ ಯಾವಾಗ ಮಾತನಾಡಿದರೂ ದ್ವಾರಕೀಶ್ ಅವರು ವಿಷ್ಣುವರ್ಧನ್ ಹೆಸರು ಪ್ರಸ್ತಾಪಿಸದೆ ಇರುತ್ತಿರಲಿಲ್ಲ. “ಸೂಪರ್ ಸ್ಟಾರ್ ಆಗಿದ್ದ ವಿಷ್ಣುವರ್ಧನ್ ಇಲ್ಲದೆ ನಾನಿಲ್ಲ. ಆದರೂ, ಆತನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ” ಎಂದು ದ್ವಾರಕೀಶ್ ಅವರು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು.
ಅಣ್ಣಾವ್ರಿಗೂ ಆಪ್ತರಾಗಿದ್ದ ದ್ವಾರಕೀಶ್
ಡಾ.ರಾಜಕುಮಾರ್ ಅವರಿಗೆ ದ್ವಾರಕೀಶ್ ಅವರು ಅತ್ಯಾಪ್ತರಾಗಿದ್ದರು. ಇವರಿಗೆ ಎರಡು ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಅದರಲ್ಲೂ, ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ರಾಜಕುಮಾರ್ ಹಾಗೂ ದ್ವಾರಕೀಶ್ ಅವರು ಒಟ್ಟಿಗೆ ನಟಿಸಿದ್ದರು. ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ರಾಜಕುಮಾರ್ ಅವರೊಂದಿಗೆ ನಟಿಸಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. “ಡಾ.ರಾಜಕುಮಾರ್ ಅವರು ಯಾವಾಗ ಸಿಕ್ಕರೂ ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಲು ಆಸೆ ಇತ್ತು. ಆದರೆ, ಅವರು ತುಂಬ ಬ್ಯುಸಿ ಇರುತ್ತಿದ್ದರು. ಆತ್ಮೀಯತೆ ಮಾತ್ರ ಚೆನ್ನಾಗಿತ್ತು” ಎಂದು ದ್ವಾರಕೀಶ್ ಹೇಳಿದ್ದರು.
ಮುನಿಸು, ಸಿಟ್ಟು, ಸೆಡವಿನ ಮಧ್ಯೆಯೂ ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹ ಸಂಪಾದಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ಸೂಪರ್ ಸ್ಟಾರ್ ರಜನಿಕಾಂತ್, ಶಂಕರ್‌ನಾಗ್ ಅವರ ಜತೆಯೂ ದ್ವಾರಕೀಶ್ ಅವರು ಉತ್ತಮ ಬಾಂಧವ್ಯ ಹೊಂದಿದ್ದರು.
ಇದನ್ನೂ ಓದಿ: Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ