Site icon Vistara News

Actor Gagan Ram: ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಖ್ಯಾತಿಯ ನಟ ಗಗನ್ ರಾಮ್ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆ

gagan ram actor

ಬೆಂಗಳೂರು: ಪ್ರತಿಭಾವಂತ ಸ್ಯಾಂಡಲ್‌ವುಡ್ ನಟ ಗಗನ್ ರಾಮ್ (Actor Gagan Ram) ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (National drama school) ಸ್ಥಾನ ಪಡೆದುಕೊಂಡಿದ್ದಾರೆ. ಇವರು ಇತ್ತೀಚೆಗೆ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ (Hostel Hudugaru Bekagiddare) ಚಿತ್ರದಲ್ಲಿ ಮಹತ್ವದ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಇದು ಗಗನ್‌ರಾಮ್‌ ಅವರ ವೃತ್ತಿಜೀವನ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕನ್ನಡದ ಇತ್ತೀಚೆನ ಡಾರ್ಕ್ ಕಾಮಿಡಿ ಚಲನಚಿತ್ರ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಅಲ್ಲಿನ ಕ್ಸೇವಿಯರ್ ಪಾತ್ರದಿಂದ ಗುರುತಿಸಲ್ಪಟ್ಟ ಗಗನ್‌ರಾಮ್ ಅವರಿಗೆ ಆ ಚಿತ್ರದಲ್ಲಿ ಹೆಚ್ಚಿನ ಮಾತುಗಳಿರಲಿಲ್ಲ. ಆದರೆ ಅದು ಪ್ರೇಕ್ಷಕರನ್ನು ಆಕರ್ಷಿಸಿದೆ. ಗಗನ್ ರಾಮ್ ಅವರ ಸಾಧನೆ ಬೆಳ್ಳಿ ಪರದೆಯ ಆಚೆಗೂ ಈಗ ವಿಸ್ತರಿಸಿದೆ. ಅವರು ದೆಹಲಿಯ ಗೌರವಾನ್ವಿತ ರಾಷ್ಟ್ರೀಯ ನಾಟಕ ಶಾಲೆಗೆ ಸೇರಲು ಆಯ್ಕೆಯಾಗಿದ್ದು, ಇದು ಕನ್ನಡ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತರುವ ಸಾಧನೆ.

ಹಿರಿಯ ನಟನಟಿಯರಾದ ಜಯಶ್ರೀ, ಓಂ ಪುರಿ, ಅನುಪಮ್ ಖೇರ್, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಿಕಿ ಮತ್ತು ಪಂಕಜ್ ತ್ರಿಪಾಠಿ ಅವರಂತಹ ನಿಪುಣ ನಟರು ಎನ್‌ಎಸ್‌ಡಿಯ ಉತ್ಪನ್ನಗಳಾಗಿದ್ದಾರೆ. ಗಗನ್‌ ರಾಮ್‌ ಇವರ ಸಾಲಿಗೆ ಸೇರುತ್ತಿದ್ದಾರೆ. ಇದು ಅವರ ನಟನಾ ಪಯಣದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದೆ. ಅಕಾಡೆಮಿಯಲ್ಲಿ ಮೂರು ವರ್ಷಗಳ ಅಧ್ಯಯನದಲ್ಲಿ ತಮ್ಮ ಪ್ರತಿಭೆಗೆ ಅವರು ಸಾಣೆ ಹಿಡಿಯಲಿದ್ದಾರೆ.

ಗಗನ್ ರಾಮ್ ಅವರ ಕಲಾ ಪಯಣದಲ್ಲಿ ಯಕ್ಷಗಾನ ನೃತ್ಯ, ನಾಟಕ ಮತ್ತು ರಂಗಭೂಮಿಯ ನಟನೆಗಳು ಇವೆ. ಅವರ ರಂಗಪ್ರಯಾಣ ಪ್ರೌಢಶಾಲೆಯಲ್ಲಿ ಪ್ರಾರಂಭವಾಯಿತು. 18 ವರ್ಷಗಳ ಅವಧಿಯಲ್ಲಿ ಅವರು ಕರ್ನಾಟಕದಾದ್ಯಂತ 75ಕ್ಕೂ ಹೆಚ್ಚು ರಂಗಭೂಮಿ ನಾಟಕಗಳು ಮತ್ತು 600ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಕಲೆಯನ್ನು ಒರೆಗೆ ಹಚ್ಚಿದ್ದಾರೆ. ಕಲೆಯ ಬಗೆಗಿನ ಅವರ ನಿರಂತರ ಉತ್ಸಾಹ ಮತ್ತು ಬದ್ಧತೆ ಅವರನ್ನು ಈ ಗಮನಾರ್ಹ ಸಾಧನೆಗೆ ಪ್ರೇರೇಪಿಸಿದೆ.

2014ರಲ್ಲಿ ʼಹುಚ್ಚುಡುಗರುʼ ಚಿತ್ರದ ಮೂಲಕ ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಛಾಪು ಮೂಡಿಸಿದರು. ಅವರ ಉತ್ಸಾಹ ಅವರನ್ನು ಬಾಲಿವುಡ್ ಉದ್ಯಮಕ್ಕೆ ಕರೆದೊಯ್ದಿದ್ದು, ʼಮಿ.ಜೋ ಬಿ ಕರ್ವಾಲೋʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಚಲನಚಿತ್ರ ಇವರ ನಟನಾ ಕೌಶಲ್ಯವನ್ನು ಪ್ರದರ್ಶಿಸಿತು. ನಿತಿನ್ ಕೃಷ್ಣಮೂರ್ತಿ ನಿರ್ದೇಶನ, ವರುಣ್ ಗೌಡ, ಪ್ರಜ್ವಲ್ ಬಿಪಿ, ಅರವಿಂದ್ ಎಸ್. ಕಶ್ಯಪ್ ಮತ್ತು ನಿತಿನ್ ಕೃಷ್ಣಮೂರ್ತಿ ನಿರ್ಮಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ಬಿಪಿ, ಮಂಜುನಾಥ್ ನಾಯ್ಕ, ರಾಕೇಶ್ ರಾಜ್ ಕುಮಾರ್, ಶ್ರೀವತ್ಸ ಮತ್ತು ತೇಜಸ್ ಜಯಣ್ಣ ಅರಸ್ ಮುಂತಾದ ಗಮನಾರ್ಹ ಪ್ರತಿಭೆಗಳು ಇದ್ದರು. ಚಲನಚಿತ್ರದ ತೆಲುಗು ಡಬ್ಬಿಂಗ್ ಆವೃತ್ತಿ ʼಹಾಸ್ಟೆಲ್ ಬಾಯ್ಸ್ʼ ಆಗಸ್ಟ್ 26ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ: Hostel Hudugaru Bekagiddare: ಕನ್ನಡದಲ್ಲಿ ಗೆದ್ದ ಹಾಸ್ಟೆಲ್‌ ಹುಡುಗ್ರು ಟಾಲಿವುಡ್‌ಗೆ ಎಂಟ್ರಿ!

Exit mobile version