ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ (Tiger nail Pendent) ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ (Forest department) ನಡೆದುಕೊಂಡಿರುವ ರೀತಿಯ ಬಗ್ಗೆ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್ (Actor Jaggesh) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಇಲಾಖೆ ನೀಡಿರುವ ನೋಟಿಸನ್ನು ವಜಾ ಮಾಡುವಂತೆ ಕೋರಿ ರಾಜ್ಯ ಹೈಕೋರ್ಟ್ (Karnataka High court) ಮೊರೆ ಹೊಕ್ಕಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರ್ ಸಂತೋಷ್ (Varthur Santhosh) ಅವರನ್ನು ಹುಲಿ ಉಗುರಿನ ಆಭರಣ ಧರಿಸಿದ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಿಂದಲೇ ಬಂಧಿಸಿದ ಬೆನ್ನಿಗೇ ಹಲವಾರು ಸೆಲೆಬ್ರಿಟಿಗಳ ಮೇಲೆ ಕಣ್ಣು ಬಿದ್ದಿತ್ತು. ಅದರಲ್ಲಿ ಚಿತ್ರ ಹಾಗೂ ಸಂಸದ ಜಗ್ಗೇಶ್ ಅವರು ಕೂಡಾ ಒಬ್ಬರು ಅರಣ್ಯ ಇಲಾಖೆಯು 2023ರ ಅಕ್ಟೋಬರ್ 25ರಂದು ಜಗ್ಗೇಶ್ ಅವರಿಗೆ ನೋಟಿಸ್ ನೀಡಿತ್ತು.
ಮೊದಲು ನಿಮ್ಮಲ್ಲಿರುವ ಆಭರವನ್ನು ತಂದೊಪ್ಪಿಸಿ ಎಂದು ನೋಟಿಸ್ ನೀಡಿತ್ತು. ಆದರೆ, ಬೆನ್ನಿಗೇ 14 ಸದಸ್ಯರ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಈ ಧೋರಣೆಯನ್ನು ಜಗ್ಗೇಶ್ ಅವರು ಪ್ರಶ್ನಿಸಿದ್ದಾರೆ. ಇದು ಅಕ್ರಮವಾಗಿದ್ದು, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ಶೋಧನಾ ವಾರೆಂಟ್‌ನಿಂದ ಉದ್ಭವಿಸುವ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಕೋರಿಕೆ ಮಾಡಲಾಗಿದೆ.
ಇದನ್ನೂ ಓದಿ: Tiger Nail : ದರ್ಶನ್, ಜಗ್ಗೇಶ್, ನಿಖಿಲ್ ಪೆಂಡೆಂಟ್ ವಶಕ್ಕೆ; ರಾಕ್‌ಲೈನ್ ಮನೆಯಿಂದ ಬರಿಗೈಲಿ ವಾಪಸ್
ಜಗ್ಗೇಶ್ ಅವರ ವಾದವೇನು?
- ಪ್ರತಿವಾದಿ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗಲು ಸಾಕಷ್ಟು ಕಾಲಾವಕಾಶ ನೀಡಿಲ್ಲ.
- ಮಾನವ ಕಣ್ತಪ್ಪಿನಿಂದ ಆಗುವ ನ್ಯಾಯಯುತ ಮತ್ತು ಉದ್ದೇಶಪೂರ್ವಕವಲ್ಲದ ತಪ್ಪನ್ನು ಸರಿಪಡಿಸಲು ಅವಕಾಶ ಮಾಡಿಕೊಟ್ಟಿಲ್ಲ.
- ಆಡಳಿತಾತ್ಮಕ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ಪಕ್ಷಕಾರರನ್ನು ನ್ಯಾಯಯುತವಾಗಿ ಆಲಿಸಿ, ಪರಿಗಣಿಸಬೇಕು.
- ಹುಲಿಯ ಉಗುರನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನೋಟಿಸ್‌ಗೆ ಉತ್ತರಿಸುವ ಮೊದಲೇ 14 ಅಧಿಕಾರಿಗಳ ತಂಡ ಮನೆಗೆ ದಾಳಿ ಮಾಡಿದೆ.
- ಸಂಸದನಾಗಿ ತನ್ನ ಕಸ್ಟಡಿಯಲ್ಲಿರುವ ದಾಖಲೆಗಳನ್ನು ಚೆಲ್ಲಾಡಿರುವುದೂ ಸೇರಿದಂತೆ ಇಡೀ ಮನೆಯಲ್ಲಿ ದಾಂಧಲೆ ಸೃಷ್ಟಿಸಿದೆ.
- ಶೋಧ ಮತ್ತು ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಬಲವಂತಾಗಿ ಹೇಳಿಕೆ ದಾಖಲಿಸಿಕೊಂಡಿದ್ದು, ಪೆಂಡೆಂಟ್ ಪಡೆದು ಹೋಗಿದ್ದಾರೆ. ಇಡೀ ಪ್ರಕ್ರಿಯೆಯು ದುರುದ್ದೇಶಪೂರ್ವಕವಾಗಿದ್ದು, ಸಂವಿಧಾನದ 21ನೇ ವಿಧಿಗೆ ವಿರುದ್ಧ.
ಇದನ್ನೂ ಓದಿ : Tiger Nail: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ: ತಾಯಿಯ ಕಾಣಿಕೆ ಕೈತಪ್ಪಿದ್ದಕ್ಕೆ ನಟ ಜಗ್ಗೇಶ್ ಬೇಸರ
ನೋಟಿಸ್ ಕೊಟ್ಟ ಮೇಲೆ ದಾಳಿಯ ಅವಶ್ಯಕತೆ ಏನಿತ್ತು?
ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಅರ್ಜಿದಾರರಿಗೆ ಪ್ರಾಣಿಯ ವಸ್ತುಗಳನ್ನು ಸಲ್ಲಿಸಲು ಸೂಚಿಸಿದ ಮೇಲೆ ಶೋಧ ಮತ್ತು ವಶಪಡಿಸಿಕೊಳ್ಳುವಂತಿಲ್ಲ. ಇದು ಅಧಿಕಾರ ಮೀರಿದ ಕ್ರಮವಾಗಿದ್ದು, ಅಕ್ರಮವಾಗಿದೆ. ಅರ್ಜಿದಾರರ ಹೇಳಿಕೆ ದಾಖಲಿಸಿಕೊಂಡಿರುವ ಪ್ರತಿವಾದಿಗಳ ನಡೆಯು ಸ್ವಯಂ ದೋಷಾರೋಪಣೆ ಹೊರಿಸುವ ಕ್ರಮವಾಗಿದ್ದು, ಸಂವಿಧಾನದ 20ನೇ ವಿಧಿಗೆ ವಿರುದ್ಧ ಎಂದು ಜಗ್ಗೇಶ್ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ. ವಕೀಲ ಬಸವರಾಜ ಪಾಟೀಲ್ ಅವರ ಮೂಲಕ ವಕಾಲತ್ತು ಹಾಕಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಜಗ್ಗೇಶ್ ಅವರಿಗೆ ನೀಡಿದ ದೂರಿನಲ್ಲಿ ಏನಿತ್ತು?
1. ವನ್ಯಜೀವಿ ಅಂಗಾಂಗಗಳನ್ನು ತಮ್ಮ ಸ್ವಾಧೀನದಲ್ಲಿ ಹೊಂದಿರುವುದಾಗಿ ಸಾಮಾಜಿಕ ಜಾಲತಾಣ ಹಾಗೂ ನಿರ್ದಿಷ್ಟವಾಗಿ ಕೆಲವು ಸಂಘ ಸಂಸ್ಥೆಗಳು ಹುಲಿಯ ಉಗುರಿನ ಪೆಂಡೆಂಟ್ ಅನ್ನು ಧರಿಸಿರುವ ತಮ್ಮ ಛಾಯಾಚಿತ್ರಗಳೊಂದಿಗೆ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ.
2. ವನ್ಯಜೀವಿ ಅಂಗಾಂಗಳನ್ನು ಹೊಂದುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್‌ಗಳಾದ 9, 39, 40, 42, 44, 48ಎ, 49ಎ, 49ಬಿ, 51, 52 & 58ರ ಪ್ರಕಾರ ಅಪರಾಧವಾಗಿದ್ದು, ಈ ನೋಟಿಸ್ ತಲುಪಿದ ತಕ್ಷಣ ತಮ್ಮ ಸ್ವಾಧೀನದಲ್ಲಿರುವ ವನ್ಯಜೀವಿ ಅಂಗ ಎಂದು ಹೇಳಲಾದ ವಸ್ತುವನ್ನು ಬೆಂಗಳೂರಿನ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ಅವರ ಮುಂದೆ ಹಾಜರುಪಡಿಸಬೇಕು.
3. ತಪ್ಪಿದಲ್ಲಿ ತಮ್ಮ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.