Site icon Vistara News

Kiccha Sudeep : ವಾಲ್ಮೀಕಿ ಜಾತ್ರೆಗೆ ಬಾರದ ನಟ ಕಿಚ್ಚ ಸುದೀಪ್‌, ಸಿಟ್ಟಿಗೆದ್ದ ಅಭಿಮಾನಿಗಳಿಂದ ಭಾರಿ ದಾಂಧಲೆ, ಲಾಠಿಚಾರ್ಜ್‌

Valmeeki jatre

#image_title

ದಾವಣಗೆರೆ: ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯ ಸಭಾ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್‌ (Kiccha Sudeep) ಬಾರದೆ ಇರುವುದರಿಂದ ಹತಾಶರಾದ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಅವರನ್ನು ನಿಯಂತ್ರಿಸಲು ಲಾಠಿಚಾರ್ಜ್‌ ನಡೆಸಬೇಕಾಯಿತು.

ಸಂಜೆ ೪.೩೦ಕ್ಕೆ ಸುದೀಪ್‌ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಸಂಜೆ ೫ ಗಂಟೆಯಾದರೂ ಬಂದಿರಲಿಲ್ಲ. ಈ ಹಂತದಲ್ಲಿ ಮಠದ ಶ್ರೀಗಳಾದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಅನಿವಾರ್ಯ ಕಾರಣಗಳಿಂದ ನಟ ಸುದೀಪ್‌ ಅವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಘೋಷಿಸಿದರು. ಆಗ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದು ದಾಂಧಲೆಗೆ ಇಳಿದರು. ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್‌ ನಡೆಸಬೇಕಾಯಿತು.

ಬೆಳಗ್ಗಿನಿಂದಲೇ ಸುದೀಪ್‌ ಮಂತ್ರ
ಹರಿಹರದ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ವರ್ಷಂಪ್ರತಿ ವಾಲ್ಮೀಕಿ ಜಾತ್ರೆ ನಡೆಯುತ್ತಿದೆ. ಇದರಲ್ಲಿ ನಡೆಯುವ ಜನಜಾಗೃತಿ ಸಮಾವೇಶಕ್ಕೆ ಎಲ್ಲ ಪಕ್ಷದವರನ್ನು ಕರೆಯುವುದು ವಾಡಿಕೆ. ಅಂತೆಯೇ ಮಧ್ಯಾಹ್ನ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.

ಸಿದ್ದರಾಮಯ್ಯ ಮಾತನಾಡುತ್ತಿದ್ದ ಮಧ್ಯೆ ನಟ ಸುದೀಪ್ ಬಂದಿದ್ದಾರೆ ಎಂದು ಜನ ಕೂಗಾಡಿದರು. ಭಾಷಣಕ್ಕೆ ಅಡ್ಡಿಯಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಮಾತು ನಿಲ್ಲಿಸಿದರು. ʻʻಸುದೀಪ್ ಬಂದಿಲ್ಲ ಎಲ್ಲರೂ ಸುಮ್ಮನೆ ಕುಳಿತುಕೊಳ್ಳಿʼʼ ಎಂದು ಸಿದ್ದರಾಮಯ್ಯ ಹೇಳಿದರು

ಆದರೆ, ಸಿದ್ದರಾಮಯ್ಯ ಮಾತನಾಡುತ್ತಿರುವಾಗ ಪದೇಪದೆ ಸುದೀಪ್ ಬಂದಿದ್ದಾರೆ ಎಂದು ಅಭಿಮಾನಿಗಳು ಕೂಗಾಡಿದರು. ಪ್ರೇಕ್ಷಕರು ಕೂಗಾಡುತ್ತಿದ್ದರಿಂದ ಗರಂ ಆದ ವಾಲ್ಮೀಕಿ ಶ್ರೀಗಳು, ಸಂಜೆ ಐದು ಗಂಟೆಯವರೆಗೂ ಸುದೀಪ್ ಬರೋದಿಲ್ಲ ಎಂದರು. ʻʻಧೀಮಂತ ನಾಯಕರು ಮಾತನಾಡುವಾಗ ಹೀಗೆ ಅಡ್ಡಿ ಮಾಡೋದು ಸರಿಯಲ್ಲʼʼ ಎಂದರು. ಮಾತ್ರವಲ್ಲ, ಪದೇಪದೆ ಹೀಗೆ ಮಾಡಿದರೆ ಸುದೀಪ್ ಬರೋದೇ ಬೇಡಾ ಎಂದು ಫೋನ್‌ ಮಾಡಿ ಹೇಳ್ತೀನಿ ಎಂದರು ಶ್ರೀಗಳು. ವಾಲ್ಮೀಕಿ ಶ್ರೀಗಳು ಗರಂ ಆಗುತ್ತಿದ್ದಂತೆಯೇ ಅಭಿಮಾನಿಗಳು ಸ್ವಲ್ಪ ಸುಮ್ಮನಾದರು.

ಇದಾಗಿ ಸಂಜೆ ೪.೩೦ ಕಳೆದರೂ ಸುದೀಪ್‌ ಬರುವುದು ಕಾಣದೆ ಅಭಿಮಾನಿಗಳು ಕೆರಳಿದರು. ಈ ನಡುವೆ, ʻʻವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರೋದಿಲ್ಲʼʼ ಎಂದು ವಾಲ್ಮೀಕಿ ಶ್ರೀಗಳು ಘೋಷಣೆ ಮಾಡಿದರು.

ಶ್ರೀಗಳು ಘೋಷಣೆ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು ಕಾರ್ಯಕ್ರಮದಲ್ಲಿದ್ದ ಚೇರುಗಳನ್ನು ಪುಡಿ ಪುಡಿ ಮಾಡಿದರು. ಸಿಟ್ಟಿಗೆದ್ದ ಕೆಲವರು ವಾಲ್ಮೀಕಿ ಜಾತ್ರೆಯ ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಲಾಠಿ ರುಚಿ ತೋರಿಸಿ ಚದುರಿಸಿದರು. ಅಭಿಮಾನಿಗಳು ಪೊಲೀಸರ ಮೇಲೂ ಚೆಯರ್‌ಗಳನ್ನು ತೂರಿದರು.

ಇದನ್ನೂ ಓದಿ : Kiccha Sudeep: ಸುದೀಪ್‌ಗೆ ಪಕ್ಷ ಸೇರುವಂತೆ, ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿಲ್ಲ: ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

Exit mobile version