ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್ ಮಾಡಿದ ಆರೋಪಗಳಿಗೆ ನಟ ಕಿಚ್ಚ ಸುದೀಪ್ (Kichcha Sudeep) ಕೊನೆಗೂ ಮೌನ ಮುರಿದಿದ್ದಾರೆ. “ಕಿಚ್ಚ ಸುದೀಪ್ ಅವರು ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ತೆಗೆದುಕೊಂಡು ಕೈಗೆ ಸಿಗುತ್ತಿಲ್ಲ” ಎಂಬುದು ಸೇರಿ ಹಲವು ಆರೋಪ ಮಾಡಿದ ಕುಮಾರ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ.
ಸುದೀಪ್ ಪರ ವಕೀಲರು ಎಂ.ಎನ್. ಕುಮಾರ್ ಹಾಗೂ ಎಂ.ಎನ್. ಸುರೇಶ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. “ಸುದೀಪ್ ಅವರು ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿರುವ ಪ್ರತಿಭಾನ್ವಿತ ನಟರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸಮಾಜ ಸೇವೆಯ ಮೂಲಕವೂ ಜನರಿಗೆ ಮಾದರಿಯಾಗಿದ್ದಾರೆ. ಅವರ ವಿರುದ್ಧ ನೀವು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿವೆ. ಹಾಗಾಗಿ ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ಕೊಡಬೇಕು” ಎಂದು ಸುದೀಪ್ ಪರ ವಕೀಲರು ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿದೆ ಸುದೀಪ್ ಕಳುಹಿಸಿದ ನೋಟಿಸ್
“ಸುದೀಪ್ ಅವರ ವಿರುದ್ಧ ನೀವು ಮಾಡಿರುವ ಆರೋಪಗಳಿಗೆ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಹಾಗೆಯೇ, ಅವರ ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು. ನೋಟಿಸ್ ಕಳುಹಿಸಲು ತಗುಲಿದ 50 ಸಾವಿರ ರೂಪಾಯಿಯನ್ನೂ ನೀವೇ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ: Kiccha Sudeep: ಸುದೀಪ್ ಅವರ ಕಾಲು ಹಿಡಿದರೂ ಕರುಣೆ ತೋರಿಲ್ಲ; ನಿರ್ಮಾಪಕ ಕುಮಾರ್ ಆರೋಪವೇನು?
ನಿರ್ಮಾಪಕ ಕುಮಾರ್ ಆರೋಪಗಳೇನು?
ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ನಿರ್ಮಾಪಕ ಎಂ ಎನ್ ಕುಮಾರ್, “ಸುದೀಪ್ ಅವರಿಗೆ ಒಂದು ಸಿನಿಮಾದ ಅಡ್ವಾನ್ಸ್ ಕೂಡ ಕೊಟ್ಟಿದ್ದೇವೆ. ಆದರೆ, ಅವರು ಸಿನಿಮಾ ಮಾಡಲು ಒಪ್ಪುತ್ತಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸುದೀಪ್ ಅವರ ಮೇಲಿನ ನಂಬಿಕೆ ಮೇಲೆ ಹಣ ಕೊಟ್ಟಿದ್ದೇನೆ. ನಾನು ಯಾಕೆ ವಾಪಸ್ ಹಣ ಕೇಳಬೇಕು? ಅವರು ಹೇಳಿದಂತೆ ಸಿನಿಮಾ ಮಾಡಿಕೊಡಲಿ. ‘ಮುತ್ತತ್ತಿ ಸತ್ಯರಾಜ್’ ಎಂಬ ಟೈಟಲ್ ಫಿಕ್ಸ್ ಆಗಿತ್ತು. ವಾಣಿಜ್ಯ ಮಂಡಳಿಗೆ ಬರಲಿ. ಸುದೀಪ್ ಅವರು ನನ್ನ ಎದುರಿಗೆ ಬಂದು ಮಾತನಾಡಲಿ. ನಾವೇ ದುಡ್ಡು ಕೊಟ್ಟು ನಾವೇ ಬೇಡಬೇಕು. ಸುದೀಪ್ ಅವರು ಮಾಡಿರುವ ಈ ಕೆಲಸದಿಂದ ನನಗೆ 8 ವರ್ಷ ಹಾಳಾಗಿದೆ. ಹಣಕೊಟ್ಟು ಬೇಡುವಂತಹ ಸ್ಥಿತಿ ಬಂದಿದೆʼʼ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಕುಮಾರ್ ಅವರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೂಡ ಸಲ್ಲಿಸಿದ್ದರು.