ಶಿವಮೊಗ್ಗ: ವಿಧಾನಸಭಾ ಚುನಾವಣೆ ಮುಗಿಯುವವರೆಗೆ ನಟ ಕಿಚ್ಚ ಸುದೀಪ್ ಅವರ (Kiccha Sudeep) ಚಲನಚಿತ್ರ, ಟಿವಿ ಶೋ ಹಾಗೂ ಜಾಹೀರಾತು ತಡೆ ಹಿಡಿಯುವಂತೆ ಚುನಾವಣಾ ಆಯೋಗಕ್ಕೆ ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ ಎಂಬುವವರು ಮನವಿ ಸಲ್ಲಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಒಂದು ರಾಜಕೀಯ ಪಕ್ಷದ ಪರವಾಗಿ ಅವರು ಪ್ರಚಾರ ಮಾಡುವುದಾಗಿ ಘೋಷಿಸಿರುವುದರಿಂದ ಚುನಾವಣೆ ನೀತಿ ಸಂಹಿತೆ ಇರುವವರೆಗೂ ಸುದೀಪ್ ಚಲನಚಿತ್ರಗಳನ್ನು ಬ್ಯಾನ್ ಮಾಡಬೇಕು. ಹಾಗೆಯೇ ಅವರ ಟಿವಿ ಶೋಗಳು ಮತ್ತು ಜಾಹೀರಾತುಗಳು ಪ್ರಸಾರವಾಗದಂತೆ ತಡೆ ನೀಡಬೇಕು ಎಂದು ವಕೀಲರು ಚುನಾವಣಾ ಆಯೋಗವನ್ನು ಕೋರಿದ್ದಾರೆ.
ಇದನ್ನೂ ಓದಿ | BJP Karnataka: ನನಗೆ ಸಹಾಯ ಮಾಡಿದವರ ಜತೆಗೆ ಇರುತ್ತೇನೆ; ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಕಿಚ್ಚ ಸುದೀಪ್
ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ತಾವು ಬಿಜೆಪಿ ಸೇರ್ಪಡೆಯಾಗುತ್ತಿಲ್ಲ. ಆದರೆ, ಪಕ್ಷದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಚಾರಕ್ಕೆ ಆಹ್ವಾನಿಸಿದರೆ ಹೋಗುವೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದರು.
ಮುಖ್ಯಮಂತ್ರಿಗಳನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಮಾತ್ರ ನನ್ನೊಟ್ಟಿಗೆ ನಿಂತಿದ್ದರು, ಅವರಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರೂ ಒಬ್ಬರು. ನಾವು ಬೆಳೆದು ಬಂದ ಹಾದಿಯಲ್ಲಿ ಪ್ರತಿ ವಿಷಯದಲ್ಲೂ ಗಾಡ್ ಫಾದರ್ ಯಾರೂ ಇರಲಿಲ್ಲ. ಮಾಮ ಆಗ ತಾನೆ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದರು. ಅವರು ಇಂದು ಸಿಎಂ ಆಗಿದ್ದಾರೆ. ಆ ವ್ಯಕ್ತಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ನಟ ಹೇಳಿದ್ದರು.
ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಬೊಮ್ಮಾಯಿ ಅವರು ಹೇಳಿದರೆ ಅದನ್ನು ಮಾಡುತ್ತೇನೆ. ಬೇರೆ ಪಕ್ಷದಿಂದ ಆಹ್ವಾನಿಸಿದರೂ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ, ನನ್ನ ಜೀವನದಲ್ಲಿ ಬೆಂಬಲವಾಗಿ ನಿಂತವರಾರಾದರೂ ಇದ್ದರೆ ಅವರ ಜತೆಗೆ ನಿಲ್ಲುತ್ತೇನೆ. ನಾನು ಈ ಪಕ್ಷ, ಆ ಪಕ್ಷ ಎಂಬುದಕ್ಕೆ ಬರಲಿಲ್ಲ. ಬೊಮ್ಮಾಯಿ ಅವರು ಈ ಪಕ್ಷ ಅಲ್ಲದೆ ಬೇರೆ ಯಾವ ಪಕ್ಷದಲ್ಲಿ ಇದ್ದಿದ್ದರೂ ನಿಲ್ಲುತ್ತಿದ್ದೆ ಎಂದು ಸುದೀಪ್ ತಿಳಿಸಿದ್ದರು.