Site icon Vistara News

Kishore Kumar Huli: ‘ಇಂಡಿಯಾ’ ಈಗ ‘ಭಾರತ’ ಆಗಲು ನಟ ಕಿಶೋರ್‌ ವಿರೋಧ; ಮೋದಿಗೆ ಚಾಟಿ

Actor Kishore Kumar Huli

Actor Kishore Kumar Huli Opposes Bharat Name Change; Questions Modi Government

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಶೋರ್‌ ಕುಮಾರ್‌ ಹುಲಿ ಅವರು ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಾರಿ ಅವರು ಕೇಂದ್ರ ಸರ್ಕಾರವು ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುತ್ತದೆ ಎಂಬ ಚರ್ಚೆಯ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಹಾಗೆಯೇ, “ಭಾರತ ಎಂಬುದಾಗಿ ಬದಲಿಸಿದರೆ ರೈತರ ಆತ್ಮಹತ್ಯೆ ನಿಲ್ಲುತ್ತವೆಯೇ” ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

“ಹೆಸರು ಬದಲಾದ ಮಾತ್ರಕ್ಕೆ ಮಣಿಪುರದ ಅತ್ಯಾಚಾರಗಳು, ಕೊಲೆಗಳು ಬದಲಾದೀತೇ? ಕಾಶ್ಮೀರ ಶಾಂತವಾದೀತೇ? ರೈತರ ಆತ್ಮಹತ್ಯೆಗಳು ನಿಂತೀತೇ? ನಿರುದ್ಯೋಗ ಸಮಸ್ಯೆ ಸರಿಯಾದೀತೇ? ಪೆಟ್ರೋಲ್ ಕಮ್ಮಿ ಬೆಲೆಗೆ ಸಿಕ್ಕೀತೇ? ದಿನಬಳಕೆಯ ವಸ್ತುಗಳ ಬೆಲೆ ಇಳಿದೀತೇ” ಎಂದು ಸುದೀರ್ಘ ಪೋಸ್ಟ್‌ನಲ್ಲಿ ನಟ ಕಿಶೋರ್‌ ಪ್ರಶ್ನಿಸಿದ್ದಾರೆ.

ಇಲ್ಲಿದೆ ನಟ ಕಿಶೋರ್‌ ಪೋಸ್ಟ್‌

“ನಿರಂಕುಶಮತಿಗಳಾಗಿ- ಕುವೆಂಪು. ದ್ವೇಷದ ಜ್ವಾಲೆ ಹರಡುತ್ತಾ ಹರಡುತ್ತಾ ದೇಶದ ಹೆಸರಿಗೂ ಬಂದು ಮುಟ್ಟಿದ್ದು ದೊಡ್ಡ ದುರಂತ. ಅವರು ಕೀಲಿ ಕೊಟ್ಟಂತೆಲ್ಲ ಆಡುವ, ಈ ಗೊಂಬೆಯಾಟ ಬಿಟ್ಟು ಪ್ರಬುದ್ಧರಂತೆ ವರ್ತಿಸಲು ಸಾಧ್ಯವೇ?
ಇಷ್ಟೂ ದಿನ ಕಾಣಿಸದ ಬ್ರಿಟಿಷ್ ಪ್ರಭಾವ ತನ್ನನ್ನು ವಿಮರ್ಶೆಗೆ ಒಳಪಡಿಸುವ ವಿರೋಧಿ ಪಕ್ಷದ ಮೈತ್ರಿಕೂಟ ಹೆಸರಿಟ್ಟುಕೊಂಡೊಡನೆ ಕಂಡದ್ದೇಕೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

“ಅದಾನಿಯ ಭ್ರಷ್ಟಾಚಾರದ ಸಾಕ್ಷಿಗಳು ಬಯಲಾದೊಡನೆ ಕಂಡದ್ದೇಕೆ?, ಜಿನ್‌ಪಿಂಗ್, ಪುಟಿನ್ ದೆಹಲಿಯ ಜಿ20ಯಿಂದ ಕೈತೊಳೆದುಕೊಂಡು 56 ಇಂಚಿನ ಬಡಾಯಿಯನ್ನು ಠುಸ್ ಮಾಡಿದೊಡನೆ ಕಂಡದ್ದೇಕೆ?
ನೈಜ ಸಮಸ್ಯೆಗಳಿಂದ ಅಥವಾ ಇನ್ನಾವುದೋ ಭಯಂಕರ ಷಡ್ಯಂತ್ರದಿಂದ ಬೇರೆಡೆ ಗಮನ ತಿರುಚುವ ಚರ್ಚೋತ್ಪಾದನೆಯ ರಾಜಕೀಯಕ್ಕೆ ನಾವು ಬಲಿಯಾಗಬೇಕೆ” ಎಂದು ಕಿಶೋರ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Chandrayaana 3 : ಎಲ್ಲಿದೆ ಚಂದ್ರಯಾನ ಸಂಭ್ರಮ; ಮಣಿಪುರ ನೆನೆದು ನಟ ಕಿಶೋರ್‌ ರೋದನ

“ಆಡಳಿತ ಪಕ್ಷದ ಕ್ಷುಲ್ಲಕ ಅಹಮ್ಮಿಗೆ, ಅಪಾಯಕಾರಿ ರಾಜಕಾರಣಕ್ಕೆ ನಮ್ಮ ವಿವೇಚನೆಯನ್ನು ಬಲಿ ಕೊಡಬೇಕೆ?
ನಮ್ಮ ಅಮೂಲ್ಯ ಸಮಯವನ್ನು ಅರ್ಥಹೀನ ಚರ್ಚೆಯಲ್ಲಿ ವ್ಯರ್ಥ ಮಾಡಿಕೊಳ್ಳಬೇಕೆ? ಬ್ರಿಟಿಷರು ಬರುವುದಕ್ಕೆ ಮುನ್ನ ಸುಮಾರು 4 ನೇ ಶತಮಾನದಿಂದಲೇ ಇರುವ ಹೆಸರನ್ನು ಬ್ರಿಟಿಷರ ನೆಪದಲ್ಲಿ ಬದಲಾಯಿಸ ಹೊರಟಿರುವ ಈ ಧೂರ್ತ ಶಿಖಾಮಣಿಗಳು ನಿಜವಾಗಿ ಬ್ರಿಟೀಷರ ಕೊಡುಗೆಯಾದ ಇಂಗ್ಲಿಷ್ ಭಾಷೆಯ ಬಳಕೆಯನ್ನೂ ತೆಗೆದುಬಿಟ್ಟಾರೆ?
ಆಲೋಚಿಸಿ. ಗತಕಾಲದಲ್ಲಿ ಬಾಳುವುದ ಬಿಟ್ಟು ವಿವೇಕಮತಿಗಳಾಗುವ, ನಿರಂಕುಶಮತಿಗಳಾಗುವ” ಎಂದು ಕುವೆಂಪು ಅವರನ್ನು ಉಲ್ಲೇಖಿಸಿ ಕಿಶೋರ್‌ ಅವರು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಚಂದ್ರಯಾನ 3 ಮಿಷನ್‌ ಯಶಸ್ವಿಯಾದಾಗಲೂ ನಟ ಕಿಶೋರ್‌ ಅವರು ಮಣಿಪುರ ಘಟನೆಯನ್ನು ನೆನಪಿಸಿದ್ದರು.

Exit mobile version