Site icon Vistara News

Actor Lohitashwa | ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ; ಅನಾರೋಗ್ಯದಿಂದ ನಿಧನ

ಬೆಂಗಳೂರು: ಪೋಷಕ ಪಾತ್ರಧಾರಿಯಾಗಿ, ಖಳನಟನಾಗಿ ತಮ್ಮ ವಿಭಿನ್ನ ನಟನೆ, ವಿಶಿಷ್ಟ ಧ್ವನಿಯ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದ ಹಿರಿಯ ನಟ ಲೋಹಿತಾಶ್ವ (80) (Actor Lohitashwa) ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದರು.

ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ನಟ ಲೋಹಿತಾಶ್ವ ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ (ನ. ೮) ನಿಧನರಾದರು.

ಸಂಜೆ 7.30ರ ನಂತರ ಕುಮಾರಸ್ವಾಮಿ ಲೇಔಟ್‌ಗೆ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ನಿವಾಸದಲ್ಲಿ ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಹುಟ್ಟೂರಾದ ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶರತ್ ಲೋಹಿತಾಶ್ವ, ವಿನಯ್ ಸಾಹ, ರಾಹುಲ್ ಲೋಹಿತಾಶ್ವ ಇವರ ಮಕ್ಕಳು. ಸರ್ಕಾರಿ ಶಿಕ್ಷಕರಾಗಿದ್ದ ಲೋಹಿತಾಶ್ವ ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ನಿವೃತ್ತಿ ಹೊಂದಿದ್ದರು. ಬಣ್ಣದ ಲೋಕಕ್ಕೆ ಆಕರ್ಷಿತರಾದ ಅವರು, ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಕಾಲಿಟ್ಟರು. ಇವರು ಮಾಡಿದ ನಾಟಕದ ಪಾತ್ರವೊಂದನ್ನು ನೋಡಿ ಶಂಕರ್ ನಾಗ್ ಅವರು ಗೀತಾ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು. ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಅಮೋಘವಾಗಿ ನಟಿಸಿ ಎಲ್ಲರ ಗಮನ ಸೆಳದಿದ್ದರು. ಬಳಿಕ ಅವರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದರು.

ಇದನ್ನೂ ಓದಿ | Sad demise | ಬಿಜೆಪಿಯ ಹಿರಿಯ ನಾಯಕರಾಗಿದ್ದ ಬಿ.ಬಿ. ಶಿವಪ್ಪ ಅವರ ಪತ್ನಿ ಸುಶೀಲಮ್ಮ ನಿಧನ

Exit mobile version