Site icon Vistara News

ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸಲಾಗದು; ನಟ ಪ್ರಕಾಶ್‌ ರೈ

Prakash Raj

ಮೈಸೂರು: ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ನಟ ಪ್ರಕಾಶ್ ರೈ, ತಿರಂಗ ಯಾತ್ರೆ ಮೂಲಕ ದೇಶ ಪ್ರೇಮ ಮೂಡಿಸುವುದು ನಿಜವಾದ ದೇಶ ಪ್ರೇಮವಲ್ಲ‌. ಇದರ ಬದಲು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಬಡತನ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಸರಿಪಡಿಸಲು ಯಾವೊಬ್ಬ ನಾಯಕನಿಗೂ ಸಾಧ್ಯವಿಲ್ಲ. ಜನರೇ ಮುಂದೆ ಬರಬೇಕು ಎಂದು ಕರೆ ನೀಡಿದರು.

ಪ್ರಧಾನ ಮಂತ್ರಿಗಳು ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ? ನಮ್ಮ ದುಡ್ಡು, ನಾನು ವರ್ಷಕ್ಕೆ 38 ಲಕ್ಷ ಟ್ಯಾಕ್ಸ್ ಕಟ್ಟುತ್ತೇನೆ. ಪ್ರಶ್ನಿಸುವುದು ನಮ್ಮ ಹಕ್ಕು. ಒಳ್ಳೆಯ ರಸ್ತೆಯಲ್ಲಿ ನಮ್ಮ ಮಕ್ಕಳು ಓಡಾಡಬಾರದಾ? ನಮ್ಮ ದುಡ್ಡಿನಲ್ಲಿ ಅವರು ಬದುಕೋದು. ಸಾರ್ವಜನಿಕರ ಹಣದಲ್ಲಿ ಬದುಕುವ ರಾಜಕಾರಣಿಗಳು ಬಂದಾಗ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೀರಾ? ನಮಗಾಗಿ ಯಾಕೆ ಮಾಡಲ್ಲ? ಸಮಾಜದಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರಕಾಶ್ ರೈ ಪ್ರತಿಪಾದಿಸಿದರು.

ನಾನೆಂದೂ ಪ್ರಗತಿಪರ
ನಾನು ಎಂದೂ ಯಾವತ್ತೂ ಪ್ರಗತಿಪರರ, ಚಿಂತಕರ ಪರವಾಗಿರುತ್ತೇನೆ. ನಾನು ಕಣ್ಣಿಗೆ ಕಾಣದೇ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಮೀಡಿಯಾ ಮುಂದೆ ಬಂದು ಹೇಳಬೇಕೆಂದೇನಿಲ್ಲ. ನಾನು ಬೇರೆ ಬೇರೆ ರಾಜ್ಯಗಳಲ್ಲಿ ಇರುತ್ತೇನೆ, ನನ್ನ ವೃತ್ತಿಯ ಜೊತೆಗೆ ಪ್ರಗತಿಪರ ಹೋರಾಟದಲ್ಲಿ ಸದಾ ಸಕ್ರಿಯವಾಗಿರುತ್ತೇನೆ. ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಕಾಶ್‌ ರೈ ಇತ್ತೀಚೆಗೆ ಅವರು ʼಕಾಣೆಯಾಗಿದ್ದಾರೆʼ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರೆ ಇಡಿ ದಾಳಿ ಆಗುತ್ತೆ. ನಾನು ಬ್ಲಾಕ್ ಮನಿ ಹೊಂದಿಲ್ಲ, ಸ್ವಚ್ಛವಾಗಿದ್ದೇನೆ. ಯಾವ ದಾಳಿ ಆದ್ರೂ ಹೆದರಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಮಾತನಾಡುವ ಧೈರ್ಯ ತೋರಿಸುತ್ತಿದ್ದೇನೆ ಎಂದು ಹೇಳಿದ ಪ್ರಕಾಶ್‌ ರೈ, ನಾನು ಧ್ವನಿ ಎತ್ತದಿದ್ದರೆ ಸತ್ತೇ ಹೋಗುತ್ತೇನೆ ಎಂದರು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ‌. ಹಾಗೆಂದು ಹೇಳೋರು ನಿಜವಾಗಿ ಹೇಳ್ತಾ ಇದ್ದಾರಾ ಅಥವಾ ಹಿಂದೆ ಯಾರೋ ಕತ್ತಿ ಇಟ್ಟು ಹೇಳಿಸ್ತಾರೋ ಗೊತ್ತಿಲ್ಲ. ಒಟ್ಟಾರೆಯಾಗಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಪ್ರಕಾಶ್‌ ರೈ ಹೇಳಿದರು.

ಅನುದಾನ ಕೊಡದಿರುವುದು ಸಂಚು
ರಂಗಾಯಣದಂತಹ ರಂಗಸಂಸ್ಥೆಗಳಿಗೂ ಇತ್ತೀಚಿನ ದಿನಗಳಲ್ಲಿ ಸರ್ಕಾರ ಅನುದಾನ ಸರಿಯಾಗಿ ಕೊಡುತ್ತಿಲ್ಲ. ಇದು ಒಂದು ಸಂಚು, ಹುನ್ನಾರ ಈ ಮೂಲಕ ರಂಗಾಯಣ, ಅಕಾಡೆಮಿಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ.
ಸರ್ಕಾರದ ಈ ನಡೆಯನ್ನು ಖಂಡಿಸುತ್ತೇನೆ ಎಂದು ಅವರು ರಂಗಾಯಣ ಸೇರಿದಂತೆ ವಿವಿಧ ಅಕಾಡೆಮಿಗಳಿಗೆ ನೀಡುತ್ತಿದ್ದ ಅನುದಾನ ಗಣನೀಯ ಇಳಿಕೆಯಾಗಿರುವ ಕುರಿತು ಪ್ರತಿಕ್ರಿಯಿಸಿದರು.

ಇದನ್ನೂ ಓದಿ| ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೊಡಗಿನಿಂದ ಗಜಪಯಣ ಆರಂಭ

Exit mobile version