ಬೆಂಗಳೂರು: ರಂಗಸಂಪದ ತಂಡದ ಹಿರಿಯ ರಂಗನಟ ಬಿ.ಎಸ್ ರಾಮಮೂರ್ತಿ ವಿಧಿವಶರಾಗಿದ್ದಾರೆ.
ರಂಗಸಂಪದದ ಎಲ್ಲ ನಾಟಕಗಳಲ್ಲಿಯೂ ಅವರು ತಮ್ಮ ಕ್ರಿಯಾಶೀಲ ನಟನೆಯನ್ನು ಹೊರಹೊಮ್ಮಿಸಿದ್ದರು. ರಾಮಮೂರ್ತಿ ಅವರು ಸಿಎಂಟಿಐ ಸಂಸ್ಥೆಯ ನಿವೃತ್ತ ಉದ್ಯೋಗಿ. ರಂಗಸಂಪದದ ತ್ರಿಶಂಕು ನಾಟಕದ ಮೂಲಕ ರಂಗಪ್ರವೇಶ ಮಾಡಿದ್ದರು. ಅಭಿನಯ, ನಿರ್ದೇಶನಗಳೆಂದು ನಲುವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪಾಲುಗೊಂಡಿದ್ದಾರೆ. ಹರಕೆಯ ಕುರಿ, ಮಹಾಚೈತ್ರ, ಒಡಲಾಳ ಮುಂತಾದ ನಾಟಕಗಳಲ್ಲಿ ನಟಿಸಿ, ಜೈಸಿದನಾಯ್ಕ, ಸಂಗ್ಯಾಬಾಳ್ಯ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು. ಕೊಟ್ರೇಶಿ ಕನಸು, ಆರಂಭ, ಅಸಂಭವ ಮುಂತಾದ ಮೂವತ್ತಕ್ಕೂ ಅಧಿಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದರು.
ಗೋವಾ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಬಂದಿದ್ದ ಅವರು ಬಳಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಅವರ ಪುತ್ರ ಅನೂಪ್ ಉದಯೋನ್ಮುಖ ನಟ ಹಾಗೂ ನಿರ್ದೇಶಕ. ರಂಗಸಂಪದದ ಪದಾಧಿಕಾರಿಗಳು ಹಾಗೂ ಅವರ ಆತ್ಮೀಯ ಒಡನಾಡಿಗಳು ರಾಮಮೂರ್ತಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.