ನವದೆಹಲಿ: ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿರುವ ಬಗ್ಗೆ ನಟ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುದೀಪ್ ʼನನಗೆ ಯಾವುದೇ ಚರ್ಚೆ ಮತ್ತು ಗಲಭೆ ಮಾಡಬೇಕೆಂಬ ಉದ್ದೇಶ ಇರಲಿಲ್ಲ. ನನ್ನ ಅಭಿಪ್ರಾಯದ ಹಿಂದೆ ಯಾವುದೇ ಅಜೆಂಡಾ ಇರಲಿಲ್ಲ. ಭಾಷೆಗಳ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಿರುವುದು ನನಗೆ ಸಂತಸ ತಂದಿದೆʼ ಎಂದು ಹೇಳಿದ್ದಾರೆ.
ತಮ್ಮ ಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಮೋದಿ ಈ ರೀತಿ ಮಾತನಾಡಿದ್ದು ಬಹು ಮುಖ್ಯ ವಿಷಯ ಎಂದು ಸುದೀಪ್ ಹೇಳಿದರು. ಪ್ರಧಾನಿ ಮೋದಿ ಅವರನ್ನು ನಾವು ಕೇವಲ ರಾಜಕಾರಣಿಯಾಗಿ ನೋಡಿಲ್ಲ. ನಾವು ಅವರನ್ನು ನಾಯಕರನ್ನಾಗಿ ನೋಡುತ್ತೇವೆ. ಎಲ್ಲ ಭಾಷೆಗಳಿಗೂ ನಾನು ಪ್ರಾಧ್ಯಾನ್ಯತೆ ನೀಡುತ್ತೇನೆ. ಕೇವಲ ಕನ್ನಡವನ್ನು ಮಾತ್ರ ನಾನು ಪ್ರತಿನಿಧಿಸುತ್ತಿಲ್ಲ. ಅವರ ಮಾತುಗಳು ಮತ್ತು ಮಾತೃಭಾಷೆಯನ್ನು ಗೌರವಿಸುವ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದರು.
ಇದನ್ನೂ ಓದಿ | ನಾವೆಲ್ಲರೂ ಭಾರತೀಯರೇ ಅಲ್ವಾ ಸರ್ !: ಹಿಂದಿಗೇಕೆ ಡಬ್ ಮಾಡುತ್ತೀರ ಎಂದ ಅಜಯ್ ದೇವಗನ್‌ಗೆ ಕಿಚ್ಚ ಉತ್ತರ
ಪ್ರಧಾನಿ ಈ ಬಗ್ಗೆ ಹೇಳಿರುವ ವಿಚಾರ
ಭಾಷಾ ವಿವಾದದ ಬಗ್ಗೆ ಇತ್ತೀಚೆಗೆ ಜೈಪುರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣೀಯನ್ನುದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ್ದ ಮೋದಿ, ʼಭಾರತೀಯರ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ, ಪ್ರತಿ ಭಾಷೆಯನ್ನು ಪೂಜ್ಯನೀಯವಾಗಿ ಗೌರವದಿಂದ ಕಾಣುತ್ತೇವೆʼ ಎಂದು ಹೇಳಿದ್ದರು. ಮತ್ತು ʼಇತ್ತೀಚಿನ ದಿನಗಳಲ್ಲಿ ಭಾಷೆಯ ಆಧಾರದ ಮೇಲೆ ಹೊಸ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಈ ಬಗ್ಗೆ ದೇಶದ ಜನರನ್ನು ಸದಾ ಎಚ್ಚರಿಸುತ್ತಿರಬೇಕುʼ ಎಂದು ಪ್ರಧಾನಿ ಮೋದಿ ಹೇಳಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತಿದೆ. ಬಿಜೆಪಿ ಭಾರತದ ಭಾಷೆಗಳನ್ನು ಭಾರತೀಯತೆಯ ಆತ್ಮ ಮತ್ತು ದೇಶಕ್ಕೆ ಉತ್ತಮ ಭವಿಷ್ಯದ ತಳಹದಿ ಎಂದು ಪರಿಗಣಿಸುತ್ತದೆ ಎಂದು ತಿಳಿಸಿದ್ದರು.
ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರ ಕಮೆಂಟ್‌ಗೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟರ್‌ನಲ್ಲಿ ತಿಂಗಳ ಹಿಂದೆಯಷ್ಟೇ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ ರಿಪ್ಲೈ ಮಾಡಿದ್ದ ದೇವಗನ್, ಹಾಗಾದರೆ ಹಿಂದಿ ಭಾಷೆಯಲ್ಲಿ ಏಕೆ ಡಬ್ ಮಾಡುತ್ತೀರಿ ಎಂದು ಹಿಂದಿಯಲ್ಲೇ ಸಂಪೂರ್ಣ ಟ್ವೀಟ್ ಬರೆದು ಪೋಸ್ಟ್ ಮಾಡಿದ್ದರು. ಇದಕ್ಕೆ ಸುದೀಪ್ ವಿನಯದಿಂದಲೇ ಖಡಕ್ ಉತ್ತರ ನೀಡಿದ್ದರು. ಈ ವಿಚಾರ ವ್ಯಾಪಕ ಚರ್ಚೆಗೀಡಾಗಿ ನಂತರ ವಿಚಾರ ತಣ್ಣಗೆ ಆಗಿದೆ.
ಇದನ್ನೂ ಓದಿ | ಇನ್ನೊಮ್ಮೆ ಕಿಚ್ಚ ಸುದೀಪ್ V/S ಅಜಯ್ ದೇವಗನ್: ಜುಲೈನಲ್ಲಿ ʼವಿಕ್ರಾಂತ್ ರೋಣಾʼ, ʼಥ್ಯಾಂಕ್ ಗಾಡ್ʼ ಸ್ಟಾರ್ ವಾರ್..!