Site icon Vistara News

Kichcha Sudeep: ಡಿಕೆಶಿ ಭೇಟಿಯಾದ ನಟ ಸುದೀಪ್‌; ಡಾ.ವಿಷ್ಣು ಪುಣ್ಯಭೂಮಿ ಬಗ್ಗೆ ಚರ್ಚೆ

Actor Sudeep meets DK Shivakumar

ಬೆಂಗಳೂರು: ಡಾ. ವಿಷ್ಣುವರ್ಧನ್‌ ಪುಣ್ಯಭೂಮಿ ವಿಚಾರದಲ್ಲಿ ಅಭಿಮಾನಿಗಳನ್ನು ಬೆಂಬಲಿಸಿ ಪೋಸ್ಟ್‌ ಮಾಡಿದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭಾನುವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮೇರು ನಟ ಡಾ. ವಿಷ್ಣುವರ್ಧನ್‌ ಅವರ ಪುಣ್ಯಭೂಮಿಯನ್ನು (Vishnuvardhan Punyabhoomi) ಅಭಿಮಾನ್‌ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಭಾನುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ‌ದಿಂದ ಪ್ರತಿಭಟನೆ ನಡೆಸಲಾಗಿದೆ. ಹೀಗಾಗಿ ಪುಣ್ಯಭೂಮಿ ವಿಚಾರದಲ್ಲಿ ಅಭಿಮಾನಿಗಳನ್ನು ಬೆಂಬಲಿಸಿ ಕಿಚ್ಚ ಸುದೀಪ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು.

ವಿಷ್ಣು ಪುಣ್ಯಭೂಮಿ ವಿಚಾರದಲ್ಲಿ ಅಭಿಮಾನಿ ಸಂಘಕ್ಕೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವು ಮೈಸೂರಿನಲ್ಲಿ ಇದ್ದರೂ ಅವರ ಅಭಿಮಾನಿಗಳ ಕೋರಿಕೆಯಂತೆ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ (ಅಭಿಮಾನ್‌ ಸ್ಟುಡಿಯೋ) ಪುಣ್ಯಭೂಮಿ ನಿರ್ಮಿಸಬೇಕು ಎಂದು ಡಿಸಿಎಂಗೆ ನಟ ಸುದೀಪ್‌ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Rishab Shetty: ತಾವು ಓದಿದ ಸರ್ಕಾರಿ ಕನ್ನಡ ಶಾಲೆ ದತ್ತು ಪಡೆದ ರಿಷಬ್‌ ಶೆಟ್ಟಿ!

ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಎಕ್ಸ್‌ ಖಾತೆಯಲ್ಲಿ ಸುದೀಪ್‌ ತಿಳಿಸಿದ್ದರು.

ವಿಷ್ಣು ಪುಣ್ಯಭೂಮಿಗಾಗಿ ಹೋರಾಟ ಆರಂಭಿಸಿದ ಅಭಿಮಾನಿ ಸಂಘ

ಮೇರು ನಟ ಡಾ. ವಿಷ್ಣುವರ್ಧನ್‌ ಅವರ (Dr Vishnuvardhan) ಪುಣ್ಯಭೂಮಿಯನ್ನು ಕೆಂಗೇರಿ ಸಮೀಪದ ಅಭಿಮಾನ್‌ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ‌ ಹೋರಾಟ ಆರಂಭಿಸಿದೆ.

ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್‌ ಸ್ಟುಡಿಯೋ ಆಗಿದ್ದು, ಕನ್ನಡಿಗರು ಚಿತ್ರರಂಗದ ಕೆಲಸಗಳಿಗೆ ಮದ್ರಾಸ್‌ಗೆ ಹೋಗುವುದನ್ನು ತಪ್ಪಿಸಬೇಕು ಎಂದು ಕನಸು ಹೊತ್ತು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್‌ ಸ್ಟುಡಿಯೋ ನಿರ್ಮಿಸಿದ್ದರು. ಆದರೆ ಅವರ ಅಗಲಿಕೆಯ ನಂತರ 2004ರಲ್ಲಿ ಅವರ ಮಕ್ಕಳು ಅದರಲ್ಲಿ ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ, ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣದಿಂದ ಹಿಂದಿನ ಜಿಲ್ಲಾಧಿಕಾರಿ ಶಂಕರ್‌ ಅವರು ಅಭಿಮಾನ್‌ ಸ್ಟುಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು. ಆಗ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದ್ದರು ಎಂದು ವಿಷ್ಣುವರ್ಧನ ಅಭಿಮಾನಿ ಸಂಘಗಳ ಒಕ್ಕೂಟ ಹೇಳಿದೆ.

ಇದನ್ನೂ ಓದಿ | BBK Season 10: ಬಿಗ್ ಬಾಸ್ ಮನೆಯಿಂದ‌ ಮೂರೇ ವಾರಕ್ಕೆ ಹೊರ ಬಂದ ಪವಿ ಪೂವಪ್ಪ!

ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವು ಮೈಸೂರಿಗೆ ಸ್ಥಳಾಂತರಗೊಂಡಿತು. ಆದರೆ ಅಭಿಮಾನಿಗಳು ಸ್ಮಾರಕ ಎಲ್ಲೇ ಆದರೂ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಹಠವಿಡಿದು, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಅದ್ಧೂರಿಯಾಗಿ ಅಭಿಮಾನ್‌ ಸ್ಟುಡಿಯೋದ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ಆದರೆ, ಈಗ ಅಭಿಮಾನ್‌ ಸ್ಟುಡಿಯೋದ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜತೆಗೆ, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅಭಿಮಾನ್‌ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

Exit mobile version