Site icon Vistara News

Actor Sudeepa: ಸುದೀಪ್‌ ಮನೆ ಮುಂದೆ ಹೈಡ್ರಾಮಾ; ಬಿಗ್‌ಬಾಸ್‌ ಅವಕಾಶ ಕೇಳಿದ ವ್ಯಕ್ತಿಗೆ ಏಟು?

manju

manju

ಬೆಂಗಳೂರು: ಬಿಗ್‌ಬಾಸ್‌ (Biggboss) ರಿಯಾಲಿಟಿ ಶೋದಲ್ಲಿ ಜನ ಸಾಮಾನ್ಯರಿಗೂ ಅವಕಾಶ ನೀಡಬೇಕೆಂದು ಜೆ.ಪಿ.ನಗರದಲ್ಲಿರುವ ನಟ ಕಿಚ್ಚ ಸುದೀಪ್‌ (Actor Sudeepa) ಮನೆ ಮುಂದೆ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ಸೆಕ್ಯುರಿಟಿ ಸಿಬ್ಬಂದಿ ಈ ಮೇಲೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ್ದಾರೆ.

ಏನಿದು ಘಟನೆ?

ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಸೆಲೆಬ್ರಿಟಿಗಳು, ಕಲಾವಿದರು ಮಾತ್ರವಲ್ಲ ಅನಕ್ಷರಸ್ಥರು, ರೈತರಿಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಲು ಟಿ.ನರಸಿಪುರದಿಂದ ಎತ್ತಿನ ಗಾಡಿ ಕಟ್ಟಿಕೊಂಡು ಆಗಮಿಸಿದ್ದೇನೆ ಎಂದು ಮಂಜು ಎನ್ನುವ ವ್ಯಕ್ತಿ ಹೇಳಿದ್ದಾರೆ. ಭಾನುವಾರ ಸಂಜೆ ಸುಮಾರು 6 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಮಂಜು ಸುದೀಪ್ ಮನೆ ಮುಂದೆ ತನ್ನ ಎತ್ತಿನಗಾಡಿಯೊಂದಿಗೆ ಕಾದು ನಿಂತಿದ್ದರು. ನಂತರ ʼʼಸುದೀಪ್‌ ಮನೆಯಲ್ಲಿಲ್ಲ. ಚೆನ್ನೈ ಹೋಗಿದ್ದಾರೆʼʼ ಎಂದು ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳುಹಿಸಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಸುದೀಪ್‌ ಮನೆಯೊಳಗಿನಿಂದ ಬಂದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಮೇಲೆ ಕೈ ಮಾಡಿದ್ದಾರೆ ಎಂದು ಮಂಜು ಆರೋಪಿಸಿದ್ದಾರೆ.

ಮಂಜು ಹೇಳಿದ್ದೇನು?

ʼʼಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ರೈತರು, ಅನಕ್ಷರಸ್ಥರಿಗೆ ಅವಕಾಶ ಒದಗಿಸಬೇಕು ಎಂದು ಮನವಿ ಸಲ್ಲಿಸಲು ಟಿ.ನರಸಿಪುರದಿಂದ ಎತ್ತಿನ ಗಾಡಿ ಕಟ್ಟಿಕೊಂಡು ಬಂದಿದ್ದೇನೆ. ಸುದೀಪ್‌ ಅವರಿಗೆ ಮನವಿ ಸಲ್ಲಿಸಲು ಜೆ.ಪಿ.ನಗರದಲ್ಲಿರುವ ಅವರ ಮನೆ ಮುಂದೆ ಗಾಡಿಯೊಂದಿಗೆ ನಿಂತಿದ್ದೆ. ಸುಮಾರು ರಾತ್ರಿ 11 ಗಂಟೆಗೆ ಸೆಕ್ಯುಟಿರಿ ಬಳಿ ಬಂದು, ಇಲ್ಲಿ ಇರಬಾರದು, ಹೊರಟು ಹೋಗು. ಸುದೀಪ್‌ ಚೆನ್ನೈಗೆ ಹೋಗಿದ್ದಾರೆ ಎಂದು ಹೇಳಿದರು. ಬಳಿಕ ಮನೆಯೊಳಗಿನಿಂದ ಮೂವರು ಬಂದರು. ನಿನ್ನ ಮೇಲೆ 1 ಕೋಟಿ ರೂ. ಮಾನನಷ್ಟ ಕೇಸ್‌ ಹಾಕುತ್ತೇವೆ. ನಿನ್ನ ಗಾಡಿ ಬೆಂಗಳೂರಿನಲ್ಲಿ ಎಲ್ಲೂ ಕಾಣಿಸಬಾರದು. ಕಂಡರೆ ಗಾಡಿಯನ್ನು ಸುಟ್ಟು ಹಾಕುತ್ತೇವೆ. ಕೂಡಲೇ ಹೊರಟು ಹೋಗು ಎಂದು ಧಮಕಿ ಹಾಕಿದರು. ಅಲ್ಲದೇ ನನ್ನ ಕೆನ್ನೆಗೆ ಹೊಡೆದರು. ಅಲ್ಲಿಗೆ ಆಗಮಿಸಿದ ಆಟೋ ಚಾಲಕನಿಗೂ ಹೊಡೆದರುʼʼ ಎಂದು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಮಂಜು ದೂರಿದ್ದಾರೆ.

ಇದನ್ನೂ ಓದಿ: ICC World Cup 2023: ಭಾರತ ತಂಡ ಸೋತ ಹಿನ್ನೆಲೆ ಸರ್ಕಾರದ ಎಲ್‌ಇಡಿ ಪರದೆಗೆ ಕಲ್ಲೆಸೆತ

ʼʼನಾನು ಬಂದಿದ್ದು ಬಿಗ್‌ಬಾಸ್‌ನಲ್ಲಿ ಅವಕಾಶ ಒದಗಿಸಿ ಎಂದು ಮನವಿ ಮಾಡಲಷ್ಟೇ. ಅದರ ಹೊರತು ಬೇರೇನೂ ಉದ್ದೇಶವಿಲ್ಲ. ಮುಂದಿನ ಸೀಸನ್‌ನಲ್ಲಾದರೂ ನಮ್ಮಂತಹ ಅನಕ್ಷರಸ್ಥರಿಗೆ ಚಾನ್ಸ್‌ ಒದಗಿಸಬೇಕು. ಈಗ ಧಾರಾವಾಹಿ ಕಲಾವಿದರಿಗೆ ಮಾತ್ರ ಅವಕಾಶ ಸಿಗುತ್ತಿದೆ. ಇದು ಬದಲಾಗಬೇಕು ಎನ್ನುವುದಷ್ಟೇ ನನ್ನ ಮನವಿʼʼ ಎಂದು ಮಂಜು ಹೇಳಿದ್ದಾರೆ. ʼʼಮನೆಯವರಿಗೆ ಗಾಬರಿಯಾಗುತ್ತದೆ ಎನ್ನುವ ಕಾರಣಕ್ಕೆ ಇಲ್ಲಿಗೆ ಬರುತ್ತಿರುವ ವಿಷಯ ಯಾರಲ್ಲೂ ಹೇಳಿರಲಿಲ್ಲ. ಸುದೀಪ್‌ ಮನೆ ಗೊತ್ತಿರಲಿಲ್ಲ. ಅವರಿವರ ಬಳಿ ಕೇಳಿಕೊಂಡು ಇಲ್ಲಿಗೆ ತಲುಪಿದೆ. ಗುಂಗುರು ಕೂದಲಿನ, ದಪ್ಪ ಇದ್ದವರು ಹೊಡೆದರು. ಅವರ ಹೆಸರು ಗೊತ್ತಿಲ್ಲʼʼ ಎಂದು ಮಂಜು ಹೇಳಿದ್ದಾರೆ.

ಮಂಜು ಶುಕ್ರವಾರ (ನವೆಂಬರ್‌ 17ರಂದು) ತಮ್ಮ ಊರಿನಿಂದ ಹೊರಟಿದ್ದರಂತೆ. ಬೇರೆ ವಾಹನ ಇಲ್ಲದ ಕಾರಣ ಎತ್ತಿನ ಗಾಡಿಯಲ್ಲೇ ಆಗಮಿಸಿದ್ದೇನೆ ಎಂದು ಅವರು ಉತ್ತರಿಸುತ್ತಾರೆ. ಸದ್ಯ ಅವರನ್ನು ಊರಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version