ಬೆಂಗಳೂರು: ದಲಿತ ಸಮುದಾಯವನ್ನು ಅಪಮಾನಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಖ್ಯಾತ ಚಿತ್ರ ನಟ, ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ (Actor Upendra) ಅವರ ಸುತ್ತ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಮಂಡ್ಯ ಸೇರಿದಂತೆ ಹಲವು ಕಡೆ ಈಗಾಗಲೇ ದೂರುಗಳು ದಾಖಲಾಗುತ್ತಿವೆ. ಈ ನಡುವೆ, ಉಪೇಂದ್ರ ಅವರ ಹೇಳಿಕೆಯನ್ನು ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ. ಮಹದೇವಪ್ಪ (Dr. HC Mahadevapp) ಅವರೂ ಖಂಡಿಸಿದ್ದಾರೆ. ಇದೆಲ್ಲದರ ನಡುವೆ ಉಪೇಂದ್ರ ಅವರು ತಮ್ಮ ಮನೆಯಲ್ಲಿಲ್ಲ.
ಏನಿದು ಉಪೇಂದ್ರ ದಲಿತ ನಿಂದನೆ ಪ್ರಕರಣ?
ಆಗಸ್ಟ್ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷವಾದ ಪ್ರಯುಕ್ತ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಸಿಡಿದೆದ್ದವು. ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ತಮ್ಮ ಲೈವ್‌ನ್ನು ಡಿಲೀಟ್ ಮಾಡಿದ್ದಲ್ಲದೆ, ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಆಕ್ರೋಶ ಕಡಿಮೆ ಆಗಿಲ್ಲ. ಎರಡು ಕಡೆ ಪ್ರಕರಣಗಳು ದಾಖಲಾಗಿವೆ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ಮೊದಲ ದೂರನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ಮತ್ತು ಕರ್ನಾಟಕ ರಣಧೀರ ಪಡೆ ಭೈರಪ್ಪ ಹರೀಶ್ ಎರಡನೇ ದೂರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದರು. ಇದೀಗ ವಿವಿ ಪುರಂ ಎಸಿಪಿ ನಾಗರಾಜ್ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯ ಪೊಲೀಸರು ಉಪೇಂದ್ರ ಅವರಿಗೆ ಠಾಣೆಗೆ ಬಂದು ಹೇಳಿಕೆ ನೀಡುವಂತೆ ನೋಟಿಸ್ ನೀಡಿದ್ದರೂ. ನಿಗದಿಯಾದ ಸಮಯಕ್ಕೆ ಅವರು ಠಾಣೆಗೆ ಬಂದಿಲ್ಲ. ಹೀಗಾಗಿ ಅವರು ಎಸ್ಕೇಪ್ ಆಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದರ ನಡುವೆ, ಎಸಿಪಿ ನಾಗರಾಜ್ ಮತ್ತು ಪೊಲೀಸರು ಉಪೇಂದ್ರ ಅವರ ಮನೆಯಲ್ಲಿ ವಿಡಿಯೊ ಮಾಡಲಾದ ಜಾಗಕ್ಕೆ ತೆರಳಿದರು. ಆದರೆ, ಪ್ರಧಾನ ದ್ವಾರವನ್ನೇ ಮುಚ್ಚಲಾಗಿತ್ತು.
ಹಾಗಿದ್ದರೆ ಉಪೇಂದ್ರ ಅವರ ಮೇಲೆ ಯಾವ್ಯಾವ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಾಗಿದೆ. ಇದರ ಪರಿಣಾಮಗಳು ಏನಾಗಬಹುದು ಎಂಬುದನ್ನು ಗಮನಿಸೋಣ.
ಉಪೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 1980 ಅಂಡರ್ ಸೆಕ್ಷನ್ 505(1)(c) 153a, 295a ಮತ್ತು ಅಟ್ರಾಸಿಟಿ ಕಾಯಿದೆ ಸೆಕ್ಷನ್ 3(1)(r)(s) ಅಡಿಯಲ್ಲಿ ಕೇಸ್ ದಾಖಲಾಗಿದೆ.
505(1)(ಸಿ) ಸೆಕ್ಷನ್ ಏನು ಹೇಳುತ್ತದೆ? ತಪ್ಪಿಗೆ ಶಿಕ್ಷೆ ಏನು?
ಯಾವುದೇ ಇತರ ವರ್ಗ ಅಥವಾ ಸಮುದಾಯದ ವಿರುದ್ಧ ಯಾವುದೇ ಅಪರಾಧವನ್ನು ಮಾಡಲು ಯಾವುದೇ ವರ್ಗ ಅಥವಾ ವ್ಯಕ್ತಿಗಳ ಸಮುದಾಯವನ್ನು ಪ್ರಚೋದಿಸುವ ಅಥವಾ ಪ್ರಚೋದಿಸುವ ಉದ್ದೇಶದಿಂದ, (2) ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದುಷ್ಪರಿಣಾಮವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು.-ಸೃಷ್ಟಿಸುವ ಅಥವಾ ಉತ್ತೇಜಿಸುವ ಉದ್ದೇಶದಿಂದ ವದಂತಿ ಅಥವಾ ಆತಂಕಕಾರಿ ಸುದ್ದಿಗಳನ್ನು ಒಳಗೊಂಡಿರುವ ಯಾವುದೇ ಹೇಳಿಕೆ ಅಥವಾ ವರದಿಯನ್ನು ಯಾರು ಮಾಡುತ್ತಾರೆ, ಪ್ರಕಟಿಸುತ್ತಾರೆ ಅಥವಾ ಪ್ರಸಾರ ಮಾಡುತ್ತಾರೆ ಅಥವಾ ರಚಿಸುವ ಅಥವಾ ಪ್ರಚಾರ ಮಾಡುವ ಸಾಧ್ಯತೆಯಿದೆ , ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಜಾತಿ ಅಥವಾ ಸಮುದಾಯ ಅಥವಾ ಯಾವುದೇ ಇತರ ನೆಲದ ಆಧಾರದ ಮೇಲೆ, ವಿವಿಧ ಧಾರ್ಮಿಕ, ಜನಾಂಗೀಯ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ನಡುವಿನ ದ್ವೇಷ, ದ್ವೇಷ ಅಥವಾ ದ್ವೇಷದ ಭಾವನೆಗಳು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಇದಕ್ಕೇನು ಶಿಕ್ಷೆ: 3 ವರ್ಷದ ತನಕ ಜೈಲು ಶಿಕ್ಷೆ
ಸೆಕ್ಷನ್ 153A ಏನು ಹೇಳುತ್ತದೆ? ಏನು ಶಿಕ್ಷೆ
ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು ತಪ್ಪು ಎಂದು ಸೆಕ್ಷನ್ 153A ಹೇಳುತ್ತದೆ. ಇದರ ಉಲ್ಲಂಘನೆಗಾಗಿ 5 ವರ್ಷದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಸೆಕ್ಷನ್ 295A ಏನು ಹೇಳುತ್ತದೆ? ಏನು ಶಿಕ್ಷೆ ವಿಧಿಸಬಹುದು?
ಸೆಕ್ಷನ್ 295A ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಶಿಕ್ಷೆಯನ್ನು ನೀಡುತ್ತದೆ, ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶ ಹೊಂದಿದ್ದನ್ನು ಉಲ್ಲೇಖಿಸುತ್ತದೆ. ಇದಕ್ಕೆ 3 ವರ್ಷದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಅಟ್ರಾಸಿಟಿ ಕಾಯಿದೆ ಸೆಕ್ಷನ್ 3(1)(r)(s) ಏನು ಹೇಳುತ್ತದೆ?
ಇದು ಅತ್ಯಂತ ಪ್ರಮುಖ ಸೆಕ್ಷನ್ ಆಗಿದ್ದು, ದಲಿತನಲ್ಲದ ವ್ಯಕ್ತಿಯಿಂದ ದಲಿತರಿಗೆ ನಿಂದನೆ ಆರೋಪ ಎದುರಾದಾಗ ಏನು ಮಾಡಬೇಕು ಎಂದು ಹೇಳುತ್ತದೆ. ಇದರಲ್ಲಿರುವ 3(1)(r)- ಉದ್ದೇಶ ಪೂರ್ವಕವಾಗಿ ಸಾರ್ವಜನಿಕವಾಗಿ ನಿಂದನೆ ಮತ್ತು 3(1)(r)(s) ಸಾರ್ವಜನಿಕರಿಗೆ ತಿಳಿಯುವ ಉದ್ದೇಶದಿಂದ ನಿಂದನೆ ಮಾಡಿದರೆ ಕ್ರಮ ಕೈಗೊಳ್ಳಲು ಬಳಕೆಯಾಗುತ್ತದೆ. ಇದಕ್ಕೆ 6 ತಿಂಗಳಿನಿಂದ 5 ವರ್ಷದ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಉಪೇಂದ್ರ ಅವರ ಬಂಧನ ಆಗಬಹುದೇ?
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಕಾಯಿದೆಯ ಸೆಕ್ಷನ್ ಸೆ. 3(1)(r)(s) ಅಡಿಯಲ್ಲಿ ದಾಖಲಾಗಿರುವ ಪ್ರಕರಣ ನಾನ್ ಕಾಗ್ನಿಸೇಬಲ್ ಆಗಿದ್ದು, ಅವರನ್ನು ಬಂಧಿಸಬಹುದಾಗಿದೆ.
ಇನ್ನೊಂದು ದಿಕ್ಕಿನಲ್ಲಿ ನೋಡಿದರೆ ಉಪೇಂದ್ರ ಅವರನ್ನು ತಕ್ಷಣಕ್ಕೆ ಬಂಧಿಸುವ ಸಾಧ್ಯತೆಗಳು ಇಲ್ಲ. ಮೊದಲಿಗೆ ನಟ ಉಪೇಂದ್ರ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹೇಳಿಕೆ ಯಾವ ಉದ್ದೇಶದಿಂದ ನೀಡಲಾಗಿದೆ?ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ? ಉದ್ದೇಶಪೂರ್ವಕವಾಗಿ ಹೇಳಿಕೆ ಕೊಡಲಾಗಿದ್ಯಾ? ಹೀಗೆ ಎಲ್ಲವನ್ನೂ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಉಪೇಂದ್ರ ಅವರ ಹೇಳಿಕೆಯ ಹಿಂದೆ ದುರುದ್ದೇಶವಿರಲಿಲ್ಲ, ಒಂದು ಬೀಸು ಮಾತು ಎನ್ನುವುದು ಖಚಿತವಾದರೆ ಬಂಧಿಸದೆಯೂ ಇರಬಹುದು.
ಸಮಾಜ ಕಲ್ಯಾಣ ಸಚಿವರಿಂದಲೇ ಆಕ್ರೋಶ
ಈ ನಡುವೆ ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರೇ ಉಪೇಂದ್ರ ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಪ್ರಭಾವಿ ನಟನಾಗಿ, ಅವರು ಮಾತನಾಡಿದ್ದು ಸರಿಯಲ್ಲ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Actor Upendra: ಜಾತಿನಿಂದನೆ ಕೇಸ್; ವಿಚಾರಣೆಗೆ ಹಾಜರಾಗದೆ ನಟ ಉಪೇಂದ್ರ ಎಸ್ಕೇಪ್, ಫೋನ್ ಸ್ವಿಚ್ಡ್ ಆಫ್!
ಹಾಗಿದ್ದರೆ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದೇನು?
- ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆ ಅಗತ್ಯವಾಗಿ ಇದೆ ಅಂದುಕೊಂಡಿದ್ದೆ.
- ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ.
- ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಹೊಲಗೇರಿ ಎಂಬ ಪದವನ್ನು ಬಳಸಿರುವುದೇ ಅಪ್ರಸ್ತುತ. ಜೊತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯು ಉಪೇಂದ್ರ ಅವರಿಗೆ ಸಹಜವಾಗಿ ತಿಳಿದಿಲ್ಲ ಎಂದು ಕಾಣುತ್ತದೆ.
- ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿದೆ?
- ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಮುಂದೆ ಶೋಷಿತ ಸಮುದಾಯಗಳನ್ನು Taken for granted ಆಗಿ ಉಲ್ಲೇಖಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಸಮಾನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು.