ಬೆಂಗಳೂರು: ನಿನ್ನೆ ಮೃತಪಟ್ಟ ನಟಿ ಲೀಲಾವತಿ (Actress Leelavathi) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಇಂದು ಮುಂಜಾನೆ 5 ಗಂಟೆಯಿಂದ ನೆಲಮಂಗಲದಲ್ಲಿ ಆರಂಭವಾಗಿದ್ದು, ಸಾವಿರಾರು ಜನ ಸೇರಿ ದರ್ಶನ ಪಡೆದರು.
ಮುಂಜಾನೆ 6ರಿಂದ 10 ಗಂಟೆಯವರೆಗೆ ನೆಲಮಂಗಲದ ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನ ನಡೆಯುತ್ತಿದೆ. 10 ಗಂಟೆಗೆ ಅಲ್ಲಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ.
2 ಗಂಟೆಯ ನಂತರ ಸೋಲದೇವನಹಳ್ಳಿಯ ತೋಟದ ಮನೆಗೆ ಲೀಲಾವತಿಯವರ ಪಾರ್ಥಿವ ಶರೀರವನ್ನು ಕೊಂಡೊಯ್ದು, ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಲಿದ್ದಾರೆ. ಚೆನ್ನೈನಿಂದ ಆಗಮಿಸಿರುವ ವಿನೋದ್ ರಾಜ್ ಪತ್ನಿ ಹಾಗು ಪುತ್ರ ಯುವರಾಜ್, ಆಸ್ಪತ್ರೆಯಲ್ಲಿಯೇ ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ.
ಮುಖ್ಯಮಂತ್ರಿ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದ್ದು, ರವೀಂದ್ರ ಕಲಾಕ್ಷೇತ್ರಕ್ಕೆ ಅಂತಿಮ ದರ್ಶನಕ್ಕೆ ಬರುವುದಾಗಿ ತಿಳಿಸಿದ್ದಾರೆ. ಎಲ್ಲಾ ಸರ್ಕಾರಿ ಗೌರವಗಳ ಮೂಲಕ ಅಂತಿಮ ವಿಧಿವಿಧಾನಗಳನ್ನು ಪೂರೈಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ. ಹಿಂದೂ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ನಡೆಯಲಿದೆ.
ನೆಲಮಂಗಲದ ಅತೀ ದೊಡ್ಡ ಕ್ರೀಡಾಂಗಣವಾದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಪತ್ನಿ ಹಾಗೂ ಪುತ್ರನ ಜೊತೆಗಿದ್ದು ವಿನೋದ್ ರಾಜ್ ಸಾರ್ವಜನಿಕರಿಗೆ ಜೊತೆಯಾದರು. ವಿನೋದ್ ರಾಜ್ ತಾಯಿಯ ಪಾದಕ್ಕೆ ಪೂಜೆ ಮಾಡಿದ ನಂತರ ದೀಪ ಹಚ್ಚಿ ಅಂತಿಮ ದರ್ಶನಕ್ಕೆ ಕುಟುಂಬಸ್ಥರು ವ್ಯವಸ್ಥೆ ಮಾಡಿದರು.
ಕಾರ್ಯಕ್ರಮ ಮುಂದೂಡಿಕೆ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಏರ್ಪಡಿಸಲಾಗಿದ್ದ ʼಕರ್ನಾಟಕ ಸಂಭ್ರಮ-50 ಜಾನಪದ ಜಾತ್ರೆʼಯನ್ನು ಲೀಲಾವತಿ ಅಂತಿಮ ದರ್ಶನದ ಹಿನ್ನೆಲೆಯಲ್ಲಿ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: Raja Marga Column : ಎಷ್ಟೊಂದು ಕಷ್ಟ ಆ ಜೀವಕ್ಕೆ; ಲೀಲಮ್ಮನಿಗೆ ಸ್ವರ್ಗದಲ್ಲಾದರೂ ಸುಖ ಸಿಗಲಿ!