Site icon Vistara News

Actress Ramya : ನಾನು ಮಂಡ್ಯದ ಗೌಡ್ತಿ, ನೀವೇ ನಂಗೊಬ್ಬ ಒಳ್ಳೆ ಗೌಡ್ರ ಹುಡುಗನ್ನ ಹುಡುಕಿ ಕೊಡಿ ಪ್ಲೀಸ್‌ ಅಂದ್ರು ರಮ್ಯಾ

actress-ramya asks Mandya people to find a boy for her marriage

actress-ramya asks Mandya people to find a boy for her marriage

ಮಂಡ್ಯ: ಚುನಾವಣಾ ಪ್ರಚಾರದ (Karnataka Election 2023) ನೆಪದಲ್ಲಿ ಮಂಡ್ಯಕ್ಕೆ ಕಾಲಿಟ್ಟ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ (Actress Ramya) ಮಂಗಳವಾರ ಹವಾ ಸೃಷ್ಟಿಸಿದರು. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಚುನಾವಣಾ ಪ್ರಚಾರ ಮಾಡಿದ್ದಕ್ಕಿಂತಲೂ ಹೆಚ್ಚಾಗಿ ಖುಷಿಖುಷಿಯಾಗಿ ಜನರೊಂದಿಗೆ ಬೆರೆತು ಮನಗೆದ್ದರು. ಮಾತಿನ ನಡುವೆ ಮದುವೆ ಪ್ರಸ್ತಾಪ ಬಂದಾಗಲಂತೂ ನಾಚಿಕೊಂಡ ಅವರು, ನಂಗೆ ನೀವೇ ಒಬ್ಬ ಗೌಡ್ರ ಹುಡುಗನನ್ನು ಹುಡುಕಿಕೊಡಿ ಎಂದು ಕೊರಳು ಕೊಂಕಿಸಿದರು.

ಮಂಡ್ಯದ ಪ್ರಚಾರ ಸಭೆಯಲ್ಲಿ ರಮ್ಯಾ

ನಾನು ಮಂಡ್ಯಕ್ಕೆ ಬರ್ತಾ ಇರ್ತೀನಿ.. ಇದು ನಂದೇ ಊರಲ್ವಾ?

ಬಹಳ ದಿನಗಳಿಂದ ಮಂಡ್ಯಕ್ಕೆ ಬಂದೇ ಇಲ್ವಲ್ಲ ಯಾಕೆ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನು ಆಗಾಗ ಮಂಡ್ಯಗೆ ಬರ್ತಾ ಹೋಗ್ತಾ ಇರ್ತೀನಿ. ಮೊನ್ನೇನೂ ನಾನು ನಿಮಿಷಾಂಬ ದೇವಾಲಯಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನಮ್ಮ ಸಂಬಂಧಿಕರಿದ್ದಾರೆ. ಅವರ ಮನೆಗೆ ಬರ್ತಾ ಇರ್ತೀನಿ. ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರಲಿಲ್ಲ ಅಷ್ಟೆʼʼ ಎಂದು ಹೇಳಿದರು.

ನಾನು ಮಂಡ್ಯದವ್ಳೇ.. ಆಗಾಗ ಬಂದು ಹೋಗ್ತಾ ಇರ್ತೀನಿ

ʻʻಇಲ್ಲಿ ನಮ್ಮ ತಾತನದ್ದೇ ಒಂದು ತೊಟ್ಟಿ ಮನೆ ಇದೆ. ಆದರೆ, ನಂಗೇ ಆದ ಒಂದು ಮನೆ ಮಾಡಬೇಕೆಂಬ ಆಸೆ ಇದೆ. ನಾನು ಯಾವಾಗಲೂ ಮಂಡ್ಯದವಳೇ. ನಾನು ಗೌಡ್ತಿನೇ. ಅದನ್ನು ಯಾರೂ ಕಿತ್ತುಕೊಳ್ಳೋಕೆ ಆಗೊಲ್ಲ. ಅದನ್ನ ಬದಲಾಯಿಸೋಕಾಗಲ್ಲ. ತಾಯಿ ಊರು ಇದೇನೇ. ತಂದೆ ಸತ್ತಿದ್ದು ಇಲ್ಲೇನೆ. ಮಂಡ್ಯಕ್ಕೂ ನನಗೂ ಕುಟುಂಬದ ಸಂಬಂಧ ಇದೆ. ಮಂಡ್ಯ ಜನರ ಮೇಲಿನ ಪ್ರೀತಿ ಗೌರವ ಯಾವತ್ತಿಗೂ ಕಡಿಮೆಯಾಗಲ್ಲ. ಇದು ರಾಜಕೀಯವನ್ನೆಲ್ಲ ಮೀರಿದ್ದುʼʼ ಎಂದು ಹೇಳಿದರು ರಮ್ಯಾ.

ಅಂಬರೀಶ್‌ ತೀರಿಕೊಂಡಾಗ ಯಾಕೆ ಬಂದಿರಲಿಲ್ಲ ಅಂದ್ರೆ…

ಅಂಬರೀಶ್ ಅವರು ಮರಣ ಹೊಂದಿದಾಗ ಮಂಡ್ಯಕ್ಕೆ ಬಾರದಿರುವ ವಿಚಾರ ಕೇಳಿದಾಗ ರಮ್ಯಾ ಸ್ಪಷ್ಟನೆ ನೀಡಿದರು. ʻʻನನಗೆ ಆಗ ಟ್ಯೂಮರ್ ಆಗಿತ್ತು. ನಾನಾಗ ಸರ್ಜರಿ ಮಾಡಿಸಿಕೊಂಡಿದ್ದೆ. ನಾನು ಕೆಲವೊಂದು ವಿಚಾರಗಳನ್ನ ಹೇಳಿಕೊಳ್ಳಲ್ಲ. ನನ್ನ ನೇಚರ್ ಅದಲ್ಲ. ಚಿಕ್ಕವಳಿದ್ದಾಗಿನಿಂದಲೂ ನಾನು ನನ್ನ ಪರ್ಸನಲ್ ವಿಚಾರಗಳನ್ನು ಮಾತಾನಾಡಲ್ಲ. ಹಾಗಾಗಿ ನಾನು ಇದನ್ನೆಲ್ಲ ಹೇಳಿರಲಿಲ್ಲ. ಎಲ್ಲರೂ ಒಂದೊಂದು ರೀತಿ ಅಪಪ್ರಚಾರ ಮಾಡ್ತಾರೆ. ಆದ್ರೆ ನಾನ್ಯಾರು ಅನ್ನೋದು ನನಗೆ ಗೊತ್ತುʼʼ ಎಂದು ಹೇಳಿದರು.

ನಾನೀಗ ಸ್ಟಾರ್‌ ಕ್ಯಾಂಪೇನರ್‌ ಆಗಿ ಬಂದಿದ್ದೇನೆ

ನಾನು ಇವತ್ತು ಕೇವಲ ಕಾಂಗ್ರೆಸ್‌ನ ಸ್ಟಾರ್‌ ಕ್ಯಾಂಪೇನರ್‌ ಆಗಿ ಬಂದಿದ್ದೇನೆ. ನಮ್ಮ‌ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದೀನಿ ಎಂದು ಹೇಳಿದ ರಮ್ಯಾ, ತಾನಿನ್ನೂ ರಾಜಕೀಯ ಮರು ಪ್ರವೇಶದ ಬಗ್ಗೆ ತೀರ್ಮಾನ ಮಾಡಿಲ್ಲ ಎಂದರು. ನೀವೇ ಎಂಎಲ್‌ಎಗೆ ನಿಂತ್ಕೊತಾರೆ, ಎಂಪಿಗೆ ನಿಂತ್ಕೊತಾರೆ ಅಂತ ನೀವೇ ಸುದ್ದಿ ಮಾಡ್ತೀರಿ.. ನಾನು ತೀರ್ಮಾನಾನೇ ಮಾಡಿಲ್ಲ ಎಂದರು.

ಮಂಡ್ಯ ಅಲ್ಲದೆ ಮೈಸೂರು, ವರುಣಾ, ನಂಜನಗೂಡು, ಹುಬ್ಬಳ್ಳಿ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಪ್ರಚಾರ ಮಾಡ್ತೀನಿ. ಇವತ್ತೇ ಮೊದಲ ದಿನ. ಎಲ್ಲಾ ಕಡೆ ಓಡಾಡೋಕೆ ಇರುವುದರಿಂದ ಮಂಡ್ಯಕ್ಕೆ ಮತ್ತೆ ಬರಲು ಟೈಮ್‌ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದರು ಮಾಜಿ ಸಂಸದೆ ರಮ್ಯಾ.

ʻʻಮಂಡ್ಯದ ಜನರು ತುಂಬಾ ಬುದ್ಧಿವಂತರು. ನನಗಿಂತಲೂ ಮೊದಲು ಅವರು ರಾಜಕೀಯ ನೋಡ್ಕೊಂಡು ಬಂದಿದ್ದಾರೆ. ಯಾರು ಮೋಸ ಮಾಡ್ತಾರೆ, ಯಾರು ಕೆಲಸ ಮಾಡುತ್ತಾರೆ ಅಂತ ಅವರಿಗೆ ಗೊತ್ತಿದೆʼʼ ಎಂದು ಹೇಳಿದ ರಮ್ಯಾ, ʻʻನಾನು ಸೋತೆ ಎಂದು ಮನೆಯಲ್ಲಿ ಕೂತಿಲ್ಲ. ಸೋತ ಮೇಲೂ ನಾನೂ ಮಂಡ್ಯಕ್ಕೆ ಬಂದಿದ್ದೆ. ರೈತರ ಆತ್ಮಹತ್ಯೆ ನಡೆದಾಗ ರಾಹುಲ್ ಗಾಂಧಿ ಬಂದಿದ್ದಾಗ ಜತೆಗೆ ನಾನೂ ಇದ್ದೆʼʼ ಎಂದರು. ಮಂಡ್ಯ ರಾಜಕೀಯದಲ್ಲಿ ಕೆಎಸ್ ಪುಟ್ಟಣ್ಣಯ್ಯ ಅವರನ್ನು ಮಿಸ್ ಮಾಡ್ಕೋತೀನಿ ಎಂದರು.

ನಂಗೊಬ್ಬ ಗೌಡ್ರ ಹುಡುಗನ್ನ ಹುಡುಕಿಕೊಡಿ!

ರಮ್ಯಾಗೆ ಹೋದಲ್ಲೆಲ್ಲ ಎದುರಾಗುವ ಮೊದಲ ಪ್ರಶ್ನೆ ಮದುವೆ ಯಾವಾಗ ಎನ್ನುವುದು. ಮಂಡ್ಯದಲ್ಲೂ ಪತ್ರಕರ್ತರು ಈ ಪ್ರಶ್ನೆ ಕೇಳದೆ ಬಿಡಲಿಲ್ಲ. ಈ ಪ್ರಶ್ನೆ ಕೇಳಿದ ಕೂಡಲೇ, ʻʻದಯವಿಟ್ಟು ನಂಗೊಬ್ಬ ಹುಡುಗನ್ನ ಹುಡುಕಿಕೊಡಿ ಪ್ಲೀಸ್‌ʼʼ ಎಂದರು.

ʻʻನಾನು ಗೌಡ್ರು ತಾನೇ.. ನಂಗೊಬ್ಬ ಒಳ್ಳೆಯ ಗೌಡ್ರ ಹುಡುಗನ್ನ ಹುಡುಕಿ ಪ್ಲೀಸ್‌. ನನಗೂ ನೋಡಿ ನೋಡಿ ಸಾಕಾಗಿದೆ ಹುಡುಕಿ ನೀವೆʼʼ ಎಂದರು ರಮ್ಯಾ!

ಎರಡೇ ನಿಮಿಷದಲ್ಲಿ ಭಾಷಣ ಮುಗಿಸಿದ ರಮ್ಯಾ

ಮಂಡ್ಯದಲ್ಲಿ ನಡೆದ ಪ್ರಚಾರದ ಸಭೆಯಲ್ಲಿ ರಮ್ಯಾ ಎರಡೇ ನಿಮಿಷದಲ್ಲಿ ಭಾಷಣ ಮುಗಿಸಿದರು. ಪ್ರಿಯಾಂಕ ಗಾಂಧಿ ವೇದಿಕೆಗೆ ಬರುತ್ತಿದ್ದಂತೆಯೇ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಉದ್ಘಾಟನೆ ನೆರವೇರಿಸಿದ ಕೂಡಲೇ ಮಾತನಾಡಿದ ರಮ್ಯಾ ಅವರು, ಪ್ರಿಯಾಂಕಾ ಗಾಂಧಿ ಅವರು ನಮ್ಮೂರಿಗೆ ಮೊದಲ ಬಾರಿಗೆ ಆಗಮಿಸಿದ್ದಾರೆ, ಅವರಿಗೆ ಸ್ವಾಗತ. ಉಳಿದಂತೆ ನೀವು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿ ಮಾತು ಮುಗಿಸಿದರು ರಮ್ಯಾ. ರಮ್ಯಾ ಬಂದಾಗ ಹೊರಟಾಗ ಫೋಟೊ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

ಇದನ್ನೂ ಓದಿ : Karnataka Election: ಗೆದ್ದ ಕಡೆ ಅಭಿವೃದ್ಧಿ ಮಾಡದೇ ಇದ್ದಿದ್ದಕ್ಕೆ ಸಿದ್ದರಾಮಯ್ಯರಿಂದ ಕ್ಷೇತ್ರ ಬದಲಾವಣೆ: ಅಮಿತ್‌ ಶಾ

Exit mobile version