ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ (Addanda C Cariappa) ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
‘ಟಿಪ್ಪು ನಿಜಕನಸುಗಳುʼ ನಾಟಕದ ಮೂಲಕ ಅಡ್ಡಂಡ ಸಿ. ಕಾರ್ಯಪ್ಪ ವಿವಾದ ಸೃಷ್ಟಿಸಿದ್ದರು. ಟಿಪ್ಪು ಸುಲ್ತಾನ್, ಕೊಡವರು ಹಾಗೂ ಮೇಲುಕೋಟೆ ಅಯ್ಯಂಗಾರರ ಮಾರಣಹೋಮ ಮಾಡಿ, ಹಿಂದು ದೇವಾಲಯಗಳನ್ನು ಧ್ವಂಸ ಮಾಡಿದ್ದ. ಕಾಂಗ್ರೆಸ್‌ನವರು ವೋಟುಗಳಿಗಾಗಿ ಟಿಪ್ಪು ಜಯಂತಿ, ಟಿಪ್ಪು ಹೆಸರಿನ ಮೂಲಕ ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಎಂದು ಸದಾ ಆರೋಪಿಸುತ್ತಿದ್ದರು. ನಂತರ ʼಸಿದ್ದು ನಿಜ ಕನಸುಗಳುʼ ಎಂಬ ಪುಸ್ತಕ ಬಿಡುಗಡೆ ಮಾಡಿದ್ದರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.
ಚುನಾವಣೆಗೂ ಮುನ್ನ ಅಡ್ಡಂಡ ಕಾರ್ಯಪ್ಪ ಅವರು, ಟಿಪ್ಪುವನ್ನು ಕಾಲ್ಪನಿಕ ಪಾತ್ರಗಳಾದ ಉರಿಗೌಡ ಮತ್ತು ನಂಜೇಗೌಡ ಕೊಂದಿದ್ದರು ಎಂಬ ಹೇಳಿಕೆ ನೀಡಿದ್ದರಿಂದ ಒಕ್ಕಲಿಗ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ದಾಖಲೆಗಳಿಲ್ಲದೆ ಯಾವ ವಿಷಯದ ಬಗ್ಗೆಯೂ ಮತನಾಡಬಾರದು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಮೇಲೆ ಅಡ್ಡಂಡ ಕಾರ್ಯಪ್ಪ ಸ್ವಾಮೀಜಿಗಳ ಕ್ಷಮೆ ಕೋರಿದ್ದರು.
ಇದನ್ನೂ ಓದಿ | Prabhuling Navadgi : ಸರ್ಕಾರ ಬದಲಾದರೆ ಅಡ್ವೊಕೇಟ್ ಜನರಲ್ ಸ್ಥಾನ ತ್ಯಜಿಸಬೇಕಿಲ್ಲ ಎಂದಿದ್ದ ಪ್ರಭುಲಿಂಗ ನಾವದಗಿ ರಾಜೀನಾಮೆ!
ನನ್ನನ್ನು ರಂಗಾಯಣ ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ, ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ನಾನು ಗೌರವಿಸುತ್ತೇನೆ. ಹೀಗಾಗಿ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಡ್ಡಂಡ ಕಾರ್ಯಪ್ಪ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.