Site icon Vistara News

Urigowda Nanjegowda : ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀಗಳ ವಿರುದ್ಧ ಸಿಡಿದ ಅಡ್ಡಂಡ

Nirmalanandanatha swameeji addanda Cariappa

#image_title

ಮೈಸೂರು: ಉರಿ ಗೌಡ, ನಂಜೇಗೌಡ (Urigowda Nanjegowda) ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ವಿರುದ್ಧ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ʻʻಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತುʼʼ ಎಂದು ಹೇಳಿರುವ ʻಟಿಪ್ಪು ಕಂಡ ನಿಜ ಕನಸುಗಳುʼ ಕೃತಿಯ ಲೇಖಕ ಅಡ್ಡಂಡ ಕಾರ್ಯಪ್ಪ, ಶ್ರೀಗಳು ಕುಮಾರಸ್ವಾಮಿ ಪರವಾಗಿ ನಿಂತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ʻʻಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ. ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲʼʼ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ʻʻಸ್ವಾಮೀಜಿಗಳು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು. ಆಗಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಎಂದು ಹೇಳಿದ್ದರುʼʼ ಎಂದು ಗಂಭೀರ ಆರೋಪ ಮಾಡಿರುವ ಅವರು, ಅವರಿಗೆ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು. ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದಿದ್ದಾರೆ.

ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿವಾದದ ಬಗ್ಗೆ ಚರ್ಚೆ ಮಾಡಬಾರದು ಹೇಳಿದ ಬಳಿಕವೂ ಸಿ.ಟಿ. ರವಿ ಮೊದಲಾದ ನಾಯಕರು ಮಾತನಾಡುತ್ತಲೇ ಇದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಅಡ್ಡಂಡ ಕಾರ್ಯಪ್ಪ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ಮಲಾನಂದ ನಾಥ ಸ್ವಾಮೀಜಿ ಏನು ಹೇಳಿದ್ದರು?

ಇತ್ತೀಚೆಗೆ ವಿವಾದ ತೀವ್ರ ಸ್ವರೂಪ ಪಡೆದಾಗ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯಾರೂ ಕೂಡಾ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಬಾರದು ಎಂದು ಹೇಳಿದ್ದರು.

ಅವರ ಹೇಳಿಕೆಯ ಪೂರ್ಣಪಾಠ ಇಲ್ಲಿದೆ

ಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ.

ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದು.

ಇನ್ನು ಮುಂದುವರಿದು, ಯಾವ ವಿಚಾರ ಪ್ರಸ್ತಾಪ ಆಗುತ್ತಿದೆಯೋ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉರಿಗೌಡರು ಮತ್ತು ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ, ನಮೂದು ಆಗಿರುವಂಥ ಅಥವಾ ಶಾಸನಗಳು ಸಿಕ್ಕದ್ದೇ ಆದರೆ ಶ್ರೀಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ ಸರಿಯಾದ ರೀತಿಯಲ್ಲಿ ತಂದೊಪ್ಪಿಸಿದ್ದೇ ಆದಲ್ಲಿ ಎಲ್ಲವನ್ನೂ ಕೂಡಾ ಕ್ರೋಡೀಕರಿಸಿ, ಯಾಕೆಂದರೆ ಶಾಸನ ತಜ್ಞರು ಇರುತ್ತಾರೆ, ಕಾರ್ಬನ್‌ ಡೇಟಿಂಗ್‌ ಟೆಕ್ನಾಲಜಿ ನಮ್ಮಲ್ಲಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ಐತಿಹಾಸಿಕ ಶ್ರೇಷ್ಠ ವಿಮರ್ಶಕರು ಇದ್ದಾರೆ, ಇವರೆಲ್ಲರನ್ನೂ ಇಟ್ಟುಕೊಂಡು ತಂದುಕೊಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒರೆಗೆ ಹಚ್ಚಿ ನಂತರದಲ್ಲಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ.

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಒಂದು ಗೊಂದಲಕ್ಕೆ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಕೂಡಾ ನಮ್ಮ ಆಗ್ರಹ.

ಇದನ್ನೂ ಓದಿ : Tippu sultan : ಉರಿ ಗೌಡ, ನಂಜೇಗೌಡರ ದಾಖಲೆ ಸಂಗ್ರಹಿಸಿ ಸ್ವಾಮೀಜಿಗಳ ಜತೆ ಮಾತಾಡ್ತೇನೆ ಎಂದ ಸಿ.ಟಿ ರವಿ

Exit mobile version