Site icon Vistara News

Administrative Reforms : 20 ಅಂಕ ಪಡೆದರೂ SSLC ಪಾಸ್‌; 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ವರದಿ ಶಿಫಾರಸು

Administrative committee report

#image_title

ಬೆಂಗಳೂರು: ಶಾಲೆಯ ನಂತರ ಕಾಲೇಜಿಗೆ ತೆರಳುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಎಸ್‌ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಥಿಯರಿ ಪರೀಕ್ಷೆಯಲ್ಲಿ 20 ಅಂಕ ಪಡೆದರೂ ಪಾಸ್‌ ಮಾಡಬಹುದು, ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ ಮಾಡಬಹುದು ಎನ್ನುವುದೂ ಸೇರಿ ಅನೇಕ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ರಚಿಸಿದ್ದ ಎರಡನೇ ಆಡಳಿತ ಸುಧಾರಣಾ ಆಯೋಗ ಮಾಡಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಟಂ. ವಿಜಯಭಾಸ್ಕರ್‌ ಅಧ್ಯಕ್ಷತೆಯ ಸಮಿಯು ತನ್ನ 4 ಮತ್ತು 5 ನೇ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಕ್ರವಾರ ಸಲ್ಲಿಸಿತು. ಶಿಕ್ಷಣ, ಆರೋಗ್ಯ, ಕಾರ್ಮಿಕ, ಕಚೇರಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಒಟ್ಟು 1,609 ಶಿಫಾರಸುಗಳನ್ನು ಆಯೋಗ ಮಾಡಿದೆ.

ಪ್ರಮುಖ ಶಿಫಾರಸುಗಳು ಕೆಳಕಂಡಂತಿವೆ

  1. ಸರ್ಕಾರಿ ಶಾಲಾ ಕಟ್ಟಡದಿಂದ 300 ಮೀಟರ್ ಅಂತರದಲ್ಲಿರುವ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6,307 ಅಂಗನವಾಡಿ ಕೇಂದ್ರಗಳನ್ನು ಕೊಠಡಿ ಲಭ್ಯವಿದ್ದಲ್ಲಿ ಹತ್ತಿರದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು. ಇದರಿಂದ ಅಂಗನವಾಡಿ ಮಕ್ಕಳು ಸುಲಭವಾಗಿ ಶಾಲೆಯಲ್ಲಿ ಮುಂದುವರಿಯಬಹುದು.
  2. ಡ್ರಾಪ್‌ಔಟ್ ದರವನ್ನು ಕಡಿಮೆ ಮಾಡಲು, ಪರಸ್ಪರ 100 ಮೀಟರ್ ಅಂತರದಲ್ಲಿರುವ 3,457 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು 1,667 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸಬಹುದು.
  3. ಪರಸ್ಪರ 100 ಮೀಟರ್‌ಗಳ ಅಂತರದಲ್ಲಿರುವ 2,460 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳನ್ನು 1135 ಸಂಯುಕ್ತ/ಕ್ಲಸ್ಟರ್ ಪ್ರೌಢಶಾಲೆಗಳಾಗಿ ಅಥವಾ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ ವಿಲೀನಗೊಳಿಸಬಹುದು.
  4. 879 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ಗಳಾಗಿ ವಿಲೀನಗೊಳಿಸಬಹುದು. ಈ ಸೌಲಭ್ಯವನ್ನು ಖಾಸಗಿ ಆಡಳಿತ ಮಂಡಳಿಗಳ ಶಾಲೆಗಳಿಗೂ ಸಹ ಅನ್ವಯಿಸಬಹುದು.
  5. ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕ್ಲಸ್ಟರ್ ಶಾಲೆಗಳಲ್ಲಿ ಶಾಲೆಗಳಿದ್ದರೆ, 1ನೇ ತರಗತಿಯಿಂದ 12ನೇ ತರಗತಿಯವರೆಗೆ ಮಗುವಿಗೆ ಮೂರು ಬಾರಿ ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಳ್ಳುವ ಮತ್ತು ಪ್ರವೇಶ ಪಡೆಯಬೇಕಾದ ಅಗತ್ಯವನ್ನು ತೆಗೆದುಹಾಕುವ ಆದೇಶಗಳನ್ನು ಹೊರಡಿಸಬಹುದು.

ಉನ್ನತ ಪ್ರೌಢ ಮತ್ತು ಉನ್ನತ ಶಿಕ್ಷಣ ದಾಖಲಾತಿಯನ್ನು ಸುಧಾರಿಸುವುದು

SSLC ಪರೀಕ್ಷೆಯಲ್ಲಿ ಹೆಚ್ಚಿನ ಅನುತ್ತೀರ್ಣತೆಯ ಪ್ರಮಾಣದಿಂದ ಹೆಚ್ಚಾಗಿ ಎಸ್ಸಿ, ಎಸ್‌ಟಿ ವಿದ್ಯಾರ್ಥಿಗಳು ಬಾಧಿತರಾಗುತ್ತಾರೆ. ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾವಾರು ಉತ್ತೀರ್ಣತೆ ಕಡಿಮೆ. ರಾಜ್ಯದಲ್ಲಿ ಒಟ್ಟು ದಾಖಲಾತಿ ಪ್ರಮಾಣ (Gross Enrolment Ratio) ಸುಧಾರಿಸಲು ಶಿಫಾರಸುಗಳನ್ನು ನೀಡಲಾಗಿದೆ.

  1. ನೆರೆಯ ರಾಜ್ಯಗಳಂತೆ SSLC, PU ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೂ ಆಂತರಿಕ ಮೌಲ್ಯಮಾಪನ ಅಂಕಗಳೊಂದಿಗೆ ಅಳವಡಿಸುವುದು.
  2. SSLC, PU ಪರೀಕ್ಷೆಗಳಲ್ಲಿ ವಿಜ್ಞಾನ ವಿಷಯಗಳಲ್ಲಿ 15 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ಸೇರಿಸುವುದು.
  3. ಉತ್ತೀರ್ಣರಾಗಲು ಒಟ್ಟು ಸರಾಸರಿ ಶೇ.35 ಅಂಕಗಳ ಪೈಕಿ SSLC ಲಿಖಿತ (theory) ಪರೀಕ್ಷೆಯಲ್ಲಿ ಕನಿಷ್ಠ 28 ಅಂಕಗಳನ್ನು ಗಳಿಸಬೇಕಾಗಿದ್ದು ಇದನ್ನು 20 ಅಂಕಗಳಿಗೆ ಇಳಿಸಬಹುದು.
  4. 1ನೇ ಪಿಯುಸಿ ಮತ್ತು 2ನೇ ಪಿಯುಸಿ ತರಗತಿಗಳ ನಡುವಿನ ಡ್ರಾಪ್‌ಔಟ್ ದರವನ್ನು ಕಡಿಮೆಗೊಳಿಸುವುದು.

ಗ್ರಾಮೀಣ ಕೃಪಾಂಕ ಹೆಚ್ಚಳ

ಗ್ರಾಮೀಣ ಕೋಟಾವನ್ನು ಗ್ರಾಮೀಣ ಎಸ್‌ಎಸ್‌ಎಲ್‌ಸಿ ಬೋರ್ಡ್ ಸರ್ಕಾರಿ ಶಾಲಾ ಕೋಟಾವಾಗಿ ಮಾರ್ಪಡಿಸುವುದು.
ಶೇ.15 ಗ್ರಾಮೀಣ ಕೋಟಾದ ಎಂಬಿಬಿಎಸ್ ಸೀಟುಗಳಲ್ಲಿ ಶೇ.3.45 ಮಾತ್ರ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೋಗುತ್ತಿವೆ. 10ನೇ ತರಗತಿ ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.11 ರಷ್ಟಿರುವ ಸಿಬಿಎಸ್‌ಇ ಮತ್ತು ಐಸಿಎಎಸ್‌ಇ ವಿದ್ಯಾರ್ಥಿಗಳು ಶೇ.48 ಸರ್ಕಾರಿ ಕೋಟಾ MBBS ಸೀಟುಗಳನ್ನು ಪಡೆಯುತ್ತಾರೆ. ಗ್ರಾಮೀಣ ಭಾಗದಲ್ಲಿ 10 ನೇ ತರಗತಿ ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಕೇವಲ ಶೇ.5 ರಷ್ಟಿರುವ 10ನೇ ತರಗತಿ ಉತ್ತೀರ್ಣರಾದ CBSE / ICSE ವಿದ್ಯಾರ್ಥಿಗಳು ಶೇ.51 (ಅವರ ಪ್ರಮಾಣಾನುಗುಣ ಪಾಲಿನ ಹತ್ತು ಪಟ್ಟು ಹೆಚ್ಚು) ರಷ್ಟು ಗ್ರಾಮೀಣ ಸರ್ಕಾರಿ ಕೋಟಾ MBBS ಸೀಟುಗಳನ್ನು ಪಡೆಯುತ್ತಾರೆ. ಆದ್ದರಿಂದ, ಗ್ರಾಮೀಣ ಕೋಟಾವನ್ನು ಮಾರ್ಪಡಿಸುವುದು ಸೂಕ್ತ. ಆಯ್ಕೆಗಳು ಈ ಕೆಳಗಿನಂತಿವೆ;

ಆಯ್ಕೆ 1 – ಸಂಪೂರ್ಣ ಶೇ.15 “ಗ್ರಾಮೀಣ ಕೋಟಾ” ವನ್ನು “ಗ್ರಾಮೀಣ ರಾಜ್ಯ ಸರ್ಕಾರಿ ಶಾಲಾ ಕೋಟಾ” ವಾಗಿ ಪರಿವರ್ತಿಸಬಹುದು.

ಆಯ್ಕೆ 2– ಒಂದು ವೇಳೆ ಖಾಸಗಿ ಶಾಲಾ ಎಸ್‌ಎಸ್‌ಎಲ್‌ಸಿ ಬೋರ್ಡಿನ ವಿದ್ಯಾರ್ಥಿಗಳನ್ನು ಸಹ ಈ ಕೋಟಾದಡಿ ಪರಿಗಣಿಸುವುದಾದರೆ, ಅದನ್ನು “ಗ್ರಾಮೀಣ ಎಸ್‌ಎಸ್‌ಎಲ್‌ಸಿ ಬೋರ್ಡ್ ಸರ್ಕಾರಿ ಕೋಟಾ” ಎಂದು ಪರಿವರ್ತಿಸುವುದು.

ಆಯ್ಕೆ 3- ಶೇ.15 ಗ್ರಾಮೀಣ ಕೋಟಾದಲ್ಲಿ, ಶೇ.7.5 “ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ” ಗಳಿಗೆ ಮೀಸಲಿಡಬಹುದು. ಉಳಿದ ಶೇ.7.5 ಖಾಸಗಿ ಅನುದಾನಿತ, ಅನುದಾನರಹಿತ SSLC ಬೋರ್ಡ್ ಶಾಲೆ ಮತ್ತು CBSE, ICSE ಬೋರ್ಡ್ ಶಾಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿರಿಸಬಹುದು 7. ಲಭ್ಯವಿರುವ ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಉತ್ತಮ ಬಳಕೆ

ಇದನ್ನೂ ಓದಿ : Vishwadarshana School: ವಿಶ್ವದರ್ಶನ ಶಾಲೆಗೆ ಪುನರುಜ್ಜೀವನ ನೀಡಿರುವುದು ಉತ್ತಮ ಕಾರ್ಯ, ಬಿ.ಎಲ್‌. ಸಂತೋಷ್‌ ಮೆಚ್ಚುಗೆ

ಬಾಲಕರ ಮತ್ತು ಬಾಲಕಿಯರ, 65 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಲಯಗಳನ್ನು 193 ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಲಯಗಳನ್ನು ಮತ್ತು 33 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಲಯಗಳನ್ನು ಆಯಾ ಇಲಾಖೆಯಿಂದ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಾಗಿ ನಡೆಸಲು ಹಸ್ತಾಂತರಿಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ಲಭ್ಯವಾಗುತ್ತದೆ.

Exit mobile version