ಬೆಂಗಳೂರು: ಸರ್ಕಾರಿ ಜಾಹೀರಾತಿನಲ್ಲಿ ನೆಹರು ಫೋಟೊ ಕೈಬಿಟ್ಟ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ನ ದಾದಾಬಾಯಿ ನವರೋಜಿ, ಹರ್ಡೇಕರ್ ಮಂಜಪ್ಪ ಅವರನ್ನು ಸ್ಮರಿಸಿದ್ದೇವೆ. ನಾವೇನು ಭೇದ ಭಾವ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೆಹರು ಹೆಸರು ಕೈಬಿಟ್ಟಿದ್ದೇವೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕರಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ; ನೀವು ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಏಕೆ ಮರೆಸಿದ್ರಿ, ವಲ್ಲಭಾಯ್ ಪಟೇಲ್ ಅವರನ್ನು ಏಕೆ ಎಲ್ಲೂ ಇಲ್ಲದಹಾಗೆ ಮಾಡಿದ್ರಿ ಇದು ತಪ್ಪಲ್ಲವೇ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಅಜಾದ್ ಇವರೆಲ್ಲರೂ ನೆನಪಾಗುವುದೇ ಇಲ್ಲ ಎಂದು ಟೀಕಿಸಿದವರಿಗೆ ಪ್ರತ್ಯುತ್ತರ ನೀಡಿದ ಬಸವರಾಜ ಬೊಮ್ಮಾಯಿ, ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಅನ್ನೋ ಪರಿಕಲ್ಪನೆ ತಪ್ಪು. ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ. ಈ ಅಮೃತಮಹೋತ್ಸವದ ಸಂದರ್ಭದಲ್ಲಿ ಅನಾಮದೇಯ ಹೋರಾಟಗಾರರನ್ನು ಸ್ಮರಿಸುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳಿದರು.
ಏಕವನದಲ್ಲಿಯೇ ಹರಿಹಾಯ್ದ ಸಿಎಂ
ಮುಖ್ಯಮಂತ್ರಿ ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಸಿಟ್ಟಿಗೆದ್ದ ಮುಖ್ಯಮಂತ್ರಿ ಬೊಮ್ಮಾಯಿ ಏಕವಚನದಲ್ಲೇ ಅವರ ವಿರುದ್ಧ ಹರಿಹಾಯ್ದರು. ʼʼಸಿದ್ದರಾಮಯ್ಯ ಆ ಹುಡುಗ ರಾಹುಲ್ ಗಾಂಧಿ ಮುಂದೆ ಕೈಕಟ್ಟಿಕೊಂಡು ನಿಂತ ಮೇಲೆ ಅವನದೆಲ್ಲ ಸ್ವಾಭಿಮಾನ ಮುಗಿದುಹೋಯ್ತುʼʼ ಎಂದು ಕುಟುಕಿದರು.
ನೆಹರು ಅವರನ್ನು ಯಾರು ಮರೆತಿದ್ದಾರೆ. ಕಳೆದ ೭೫ ವರ್ಷಗಳಿಂದಲೂ ಅವರ ಹೆಸರು ಇಡುತ್ತಲೇ ಬಂದಿದ್ದೇವೆ. ಎಲ್ಲೇ ಹೋದರು ರಸ್ತೆಗೆ ನೆಹರು ಹೆಸರು ಇಟ್ಟಿದ್ದೇವೆ ಎಂದ ಸಿಎಂ ಬೊಮ್ಮಾಯಿ, ಜಾಹೀರಾತಿನ ಚಿತ್ರದಲ್ಲಿ ನೆಹರು ಇದ್ದಾರೆ. ಕಾಂಗ್ರೆಸ್ಸಿಗರು ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಕಿದರು.
ನಿಜವಾಗಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ನಾವು ನೆನಪಿಸಿಕೊಂಡಿದ್ದೇವೆ ಎಂದು ಸರ್ಕಾರವನ್ನು ಅಭಿನಂದಿಸಬೇಕು ಎಂದ ಬಸವರಾಜ ಬೊಮ್ಮಾಯಿ, ಹಿಂದೆಂದೂ ಸರ್ಕಾರ ಈ ರೀತಿ ದೇಶ ಪ್ರೇಮ ಮೂಡಿಸುವ ಕೆಲಸ ಮಾಡಿರಲಿಲ್ಲ ಎಂದರು.
ಇದನ್ನೂ ಓದಿ| ಸರ್ಕಾರಿ ಜಾಹೀರಾತಿನಲ್ಲಿ ನೆಹರು ನಾಪತ್ತೆ: ಕಾಂಗ್ರೆಸ್ ನಾಯಕರ ಆಕ್ರೋಶ; ಬಿಜೆಪಿ ಸಮರ್ಥನೆ