ಹಾಸನ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ವಕೀಲ ದೇವರಾಜೇಗೌಡ (Advocate G Devarajegowda) ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾ. ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಇಂದು ದೇವರಾಜೇಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೂನ್ 5ರಂದು ಹಾಸನ ಜಿಲ್ಲಾ ನ್ಯಾಯಾಲಯಕ್ಕೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದಾಗ ಕೋರ್ಟ್ ನಿರಾಕರಿಸಿತ್ತು. ಆದರೆ, ಹೈಕೋರ್ಟ್ ಜಾಮೀನು ನೀಡಿದ್ದರಿಂದ ಹಾಸನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದೇವರಾಜೇಗೌಡರನ್ನು ಬಿಡುಗಡೆ ಮಾಡಲಾಗಿದೆ.
2023ರ ಡಿ.29ರಂದು ರಂದು ಅತ್ಯಾಚಾರ ಮಾಡಿದ್ದಾರೆ ಎಂದು 2024ರ ಏ.1 ರಂದು ಸಂತ್ರಸ್ತೆ ದೂರು ನೀಡಿದ್ದರು. ಇದಕ್ಕೂ ಮೊದಲು ಹನಿಟ್ರ್ಯಾಪ್ ಎಂದು ದೇವರಾಜೇಗೌಡ ಮಾ.28 ರಂದು ದೂರು ನೀಡಿದ್ದರು. ಆದರೆ, ಮಾರ್ಚ್ 29 ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆ ಪತಿ ದೂರು ನೀಡಿದ್ದರು. ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ದೇವರಾಜೇಗೌಡ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಬಳಿಕ ವಕೀಲ ದೇವರಾಜೇಗೌಡಗೆ ನ್ಯಾ. ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿ ಆದೇಶಿಸಿತ್ತು.
ಇದನ್ನೂ ಓದಿ | Krishna River Tragedy: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲು, ಒಬ್ಬರ ಮೃತದೇಹ ಪತ್ತೆ
ವಕೀಲ ದೇವರಾಜೇಗೌಡ ಬಂಧನವಾಗಿದ್ದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು.