Site icon Vistara News

Aero India 2023: ಉದ್ಘಾಟನೆಗೆ ಬಂದ ಪ್ರಧಾನಿಗೆ ಲೋಹದ ಹಕ್ಕಿಗಳ ಸಾಹಸದ ಸ್ವಾಗತ, ಸಂಭ್ರಮದಿಂದ ಕೈಬೀಸಿದ ಮೋದಿ

Aero Show Modi

#image_title

ಬೆಂಗಳೂರು: ಯಲಹಂಕದ ಏರ್‌ಫೋರ್ಸ್‌ ಸ್ಟೇಶನ್‌ನಲ್ಲಿ ಭಾನುವಾರ ಮುಂಜಾನೆ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನ ಆರಂಭಗೊಂಡಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಉದ್ಘಾಟನೆಗೆ ಮುನ್ನವೇ ನಡೆದ ಅತ್ಯಂತ ಸಾಹಸಿಕ ಪ್ರದರ್ಶನಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಇದು ಪ್ರಧಾನಿ ಮೋದಿ ಅವರಿಗೆ ನೀಡಿದ ಸ್ವಾಗತವಾಗಿತ್ತು.

ಬೆಳಗ್ಗೆ 9.30ರಿಂದ 11.30ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 10.15ರಿಂದ 10.50ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ವಾಯುದಳದ ಮೂರು ಕಿರಣ್‌ ಎಂಕೆ-2 ಏರ್‌ಕ್ರಾಫ್ಟ್‌ಗಳು ಆಗಸದಲ್ಲಿ ಹಾರಾಡುತ್ತ ರಾಷ್ಟ್ರಧ್ವಜದ ತ್ರಿವರ್ಣ ರಂಗನ್ನು ರಚಿಸಲಿವೆ. ತ್ರಿವರ್ಣ ಧ್ವಜವನ್ನು ಹೊತ್ತ ಮೂರು ಮಿಗ್‌ 17 ವಿಮಾನಗಳು ಧ್ವಜ ರಚನೆಯನ್ನು ಪ್ರದರ್ಶಿಸಲಿವೆ.

ಐದು ಹೆಲಿಕಾಪ್ಟರ್‌ಗಳ ಮೂರು ತಂಡಗಳು (ಒಟ್ಟು 15 ಹೆಲಿಕಾಪ್ಟರ್‌ಗಳು) ವೀಕ್ಷಕರ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಹಾರಾಡಿ ವಿಶಿಷ್ಟ ರಚನೆಗಳನ್ನು ರೂಪಿಸಲಿವೆ. ಇದರಲ್ಲಿ ಭಾಗವಹಿಸುವ ಹೆಲಿಕಾಪ್ಟರ್‌ಗಳು ಭೀಮ್‌, ದಕ್ಷ್‌, ರುದ್ರ, ಪ್ರಚಂಡ ಹಾಗೂ ರುದ್ರ.

ಒಂದು LCA SPT ಏರ್‌ಕ್ರಾಫ್ಟ್‌, ಎರಡು ಹಿಂದೂಸ್ತಾನ್‌ ಟರ್ಬೋ ಟ್ರೇನರ್‌, ಎರಡು ಇಂಟರ್‌ಮೀಡಿಯೆಟ್‌ ಜೆಟ್‌ ಟ್ರೇನರ್‌, ಒಂದು HAWK ಹಾಗೂ ಒಂದು ಹಿಂದೂಸ್ತಾನ್‌- 228ಗಳು ಸೇರಿ ʼಗುರುಕುಲʼ ರಚನೆಯನ್ನು ಪ್ರದರ್ಶಿಸಲಿವೆ.

EMBRAER-145 ಏರ್‌ಕ್ರಾಫ್ಟ್‌, ಎರಡು ಸುಖೋಯ್‌-30 ಹಾಗೂ ಎರಡು ಮಿಗ್‌-29ಗಳು ಸೇರಿ ʻನೇತ್ರʼ ರಚನೆಯನ್ನು ಪ್ರದರ್ಶಿಸಲಿವೆ.

ಒಂದು ಮಿಗ್‌, ಎರಡು ಜಾಗುವಾರ್, ಎರಡು ಮಿರಾಜ್‌, ಎರಡು ರಫೇಲ್‌ ವಿಮಾನಗಳು ಸೇರಿ ʼಅರ್ಜುನʼ ರಚನೆಯನ್ನು ತೋರಿಸಲಿವೆ.

ಭಾರತೀಯ ತಂತ್ರಜ್ಞಾನದ ಹಗುರ ಯುದ್ಧ ವಿಮಾನ ತೇಜಸ್‌ನ 9 ಏರ್‌ಕ್ರಾಫ್ಟ್‌ಗಳು ʼತೇಜಸ್‌ʼ ಸಂರಚನೆಯನ್ನು ಪ್ರದರ್ಶಿಸಲಿವೆ.

ಭಾರತೀಯ ವೈಮಾನಿಕ ನೌಕಾದಳದ ವಿಮಾನ P8i- ಪೋಸಿಡಾನ್‌ ಹಾಗೂ ಎರಡು ಹಗುರ ಯುದ್ಧ ವಿಮಾನಗಳು ʼವರುಣʼ ರಚನೆಯನ್ನು ಕಾಣಿಸಲಿವೆ.

ಮೂರು ಸುಖೋಯ್‌-30 ವಿಮಾನಗಳು ʼತ್ರಿಶೂಲʼ ರಚನೆಯನ್ನು ತೋರಿಸಲಿವೆ.

Exit mobile version