ಬೆಂಗಳೂರು: ಯಲಹಂಕದ ಏರ್‌ಫೋರ್ಸ್ ಸ್ಟೇಶನ್‌ನಲ್ಲಿ ಭಾನುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನದಲ್ಲಿ ಸುಖೋಯ್ ೩೫, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ, ಸೂರ್ಯಕಿರಣ್, ತೇಜಸ್, ಲಘು ಬಹೂಪಯೋಗಿ ಎಲ್‌ಯುಎಚ್‌ಗಳು ಆಗಸದಲ್ಲಿ ಆಕರ್ಷಕ ಕಸರತ್ತು ನಡೆಸಿ ರಂಜಿಸಿದವು.
ಪ್ರಧಾನಿ ಮೋದಿ ಅವರು ಸಾಹಸಿಕ ಪ್ರದರ್ಶನಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ಏನೇನು ಸ್ಪೆಷಲ್ ಪ್ರದರ್ಶನ?
ವಾಯುದಳದ ಮೂರು ಕಿರಣ್ ಎಂಕೆ-2 ಏರ್‌ಕ್ರಾಫ್ಟ್‌ಗಳು ಆಗಸದಲ್ಲಿ ಹಾರಾಡುತ್ತ ರಾಷ್ಟ್ರಧ್ವಜದ ತ್ರಿವರ್ಣ ರಂಗನ್ನು ರಚಿಸಲಿವೆ. ತ್ರಿವರ್ಣ ಧ್ವಜವನ್ನು ಹೊತ್ತ ಮೂರು ಮಿಗ್ 17 ವಿಮಾನಗಳು ಧ್ವಜ ರಚನೆಯನ್ನು ಪ್ರದರ್ಶಿಸಿದವು.
ಐದು ಹೆಲಿಕಾಪ್ಟರ್‌ಗಳ ಮೂರು ತಂಡಗಳು (ಒಟ್ಟು 15 ಹೆಲಿಕಾಪ್ಟರ್‌ಗಳು) ವೀಕ್ಷಕರ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಹಾರಾಡಿ ವಿಶಿಷ್ಟ ರಚನೆಗಳನ್ನು ರೂಪಿಸಿದವು. ಇದರಲ್ಲಿ ಭಾಗವಹಿಸುವ ಹೆಲಿಕಾಪ್ಟರ್‌ಗಳು ಭೀಮ್, ದಕ್ಷ್, ರುದ್ರ, ಪ್ರಚಂಡ ಹಾಗೂ ರುದ್ರ.
ಒಂದು LCA SPT ಏರ್‌ಕ್ರಾಫ್ಟ್, ಎರಡು ಹಿಂದೂಸ್ತಾನ್ ಟರ್ಬೋ ಟ್ರೇನರ್, ಎರಡು ಇಂಟರ್‌ಮೀಡಿಯೆಟ್ ಜೆಟ್ ಟ್ರೇನರ್, ಒಂದು HAWK ಹಾಗೂ ಒಂದು ಹಿಂದೂಸ್ತಾನ್- 228ಗಳು ಸೇರಿ ʼಗುರುಕುಲʼ ರಚನೆಯನ್ನು ಪ್ರದರ್ಶಿಸಿದವು.
EMBRAER-145 ಏರ್‌ಕ್ರಾಫ್ಟ್, ಎರಡು ಸುಖೋಯ್-30 ಹಾಗೂ ಎರಡು ಮಿಗ್-29ಗಳು ಸೇರಿ ʻನೇತ್ರʼ ರಚನೆಯನ್ನು ಪ್ರದರ್ಶಿಸಿದವು. ಒಂದು ಮಿಗ್, ಎರಡು ಜಾಗುವಾರ್, ಎರಡು ಮಿರಾಜ್, ಎರಡು ರಫೇಲ್ ವಿಮಾನಗಳು ಸೇರಿ ʼಅರ್ಜುನʼ ರಚನೆಯನ್ನು ತೋರಿಸಿದವು.
ಭಾರತೀಯ ತಂತ್ರಜ್ಞಾನದ ಹಗುರ ಯುದ್ಧ ವಿಮಾನ ತೇಜಸ್‌ನ 9 ಏರ್‌ಕ್ರಾಫ್ಟ್‌ಗಳು ʼತೇಜಸ್ʼ ಸಂರಚನೆಯನ್ನು ತೋರಿಸಿದವು. ಭಾರತೀಯ ವೈಮಾನಿಕ ನೌಕಾದಳದ ವಿಮಾನ P8i- ಪೋಸಿಡಾನ್ ಹಾಗೂ ಎರಡು ಹಗುರ ಯುದ್ಧ ವಿಮಾನಗಳು ʼವರುಣʼ ರಚನೆಯನ್ನು ಕಾಣಿಸಿದವು. ಮೂರು ಸುಖೋಯ್-30 ವಿಮಾನಗಳು ʼತ್ರಿಶೂಲʼ ರಚನೆಯನ್ನು ತೋರಿಸಿದವು.
ಇದನ್ನೂ ಓದಿ : Aero India 2023: ಭಾರತದ ರಕ್ಷಣಾ ರಫ್ತು 2024ರಲ್ಲಿ 500 ಕೋಟಿ ಡಾಲರ್ ಗುರಿ: ಹೂಡಿಕೆದಾರರಿಗೆ ಸುವರ್ಣಾವಕಾಶ ಎಂದ ಪ್ರಧಾನಿ ಮೋದಿ