ಬೆಂಗಳೂರು: ರಾಜ್ಯದ ಕೊಡಗು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಗೆ ಹೊಸದೊಂದು ಟೆನ್ಷನ್ ಶುರುವಾಗಿದೆ.
ಕೊಡಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಈ ಜ್ವರ ಕಂಡುಬಂದಿದೆ. ಇದು ಸಾಮಾನ್ಯ ಜ್ವರದಂತೆಯೇ ಇರುತ್ತದೆ. ಆದರೆ ಸಾಮಾನ್ಯ ಹಂದಿ ಜ್ವರಕ್ಕಿಂತಲೂ ಇದರ ತೀವ್ರತೆ ಹೆಚ್ಚಿರುತ್ತದೆ. ಇದು ಒಂದು ಹಂದಿಯಿಂದ ಇನ್ನೊಂದು ಹಂದಿಗೆ ತೀವ್ರಗತಿಯಲ್ಲಿ ಹರಡುವ ಗುಣ ಹೊಂದಿದ್ದು, ಜ್ವರಪೀಡಿತ ಹಂದಿಗಳನ್ನು ಐಸೋಲೇಟ್ ಮಾಡುವುದೇ ಇದಕ್ಕೆ ಪರಿಹಾರವಾಗಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಆರೋಗ್ಯ ಇಲಾಖೆ ಎಲ್ಲಾ ಕಡೆ ನಿಗಾ ವಹಿಸುತ್ತಿದೆ. ಹಂದಿ ಸಾಗಾಣಿಕೆ ಕಡೆಗಳಲ್ಲಿ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ರೋಗ ಕಂಡು ಬಂದ ಕಡೆಯಲ್ಲಿ ಜಾಗದ 1 ಕಿ.ಮೀ. ವ್ಯಾಪ್ತಿಯಲ್ಲಿ ರೋಗಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಣೆ ಮಾಡಬೇಕು. ಆಫ್ರಿಕನ್ ಹಂದಿ ಜ್ವರ ಹಂದಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ಆಫ್ರಿಕನ್ ಹಂದಿ ಜ್ವರದ ಲಕ್ಷಣಗಳೇನು?
ಜ್ವರ, ನೆಗಡಿ ಬರುವುದು, ಮೈ- ಕೈ ನೋವು, ಅಶಕ್ತಿ, ನಿಲ್ಲಲಾಗದಿರುವಿಕೆ, ಮೈಬಣ್ಣ ಕೆಂಪಾಗುವುದು ಅಥವಾ ಕಪ್ಪಾಗುವುದು, ವಾಂತಿ- ಭೇದಿ, ಕಣ್ಣುರೆಪ್ಪೆಗಳು ಮುಚ್ಚಿಕೊಂಡಂತಿರುವುದು, ಉಸಿರಾಟಕ್ಕೆ ಕಷ್ಟ- ಇವೆಲ್ಲವೂ ಲಕ್ಷಣಗಳು. ಇಂಥ ಲಕ್ಷಣ ಕಂಡುಬಂದಲ್ಲಿ ಅಂಥ ಹಂದಿಗಳನ್ನು ಐಸೋಲೇಟ್ ಮಾಡಬೇಕು ಹಾಗೂ ಪಶುವೈದ್ಯರಿಗೆ ಮಾಹಿತಿ ನೀಡಬೇಕು.