ಚಿಕ್ಕಮಗಳೂರು: ಚಿಕ್ಕಬಳ್ಳಾಪುರದಲ್ಲಿ ಹಿಂದು ಯುವಕ ಮತ್ತು ಮುಸ್ಲಿಂ ಯುವತಿ ಜತೆಯಾಗಿ ಚಾಟ್ಸ್ ತಿನ್ನಲು ಹೋದರೆಂಬ ಕಾರಣ ನೀಡಿ ನೈತಿಕ ಪೊಲೀಸ್ ಗಿರಿ (Moral policing) ನಡೆಸಿ, ಇಬ್ಬರಿಗೂ ಹಲ್ಲೆ ನಡೆಸಿದ ಘಟನೆಯ ಬೆನ್ನಿಗೇ ಇದೀಗ ಚಿಕ್ಕಮಗಳೂರಿನಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ. ಹಿಂದು ಯುವಕನೊಬ್ಬ ಮುಸ್ಲಿಂ ಯುವತಿ ಜತೆ ಸ್ನೇಹದಿಂದಿದ್ದಾನೆ ಎಂಬ ಕಾರಣಕ್ಕಾಗಿ ಆತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ (Chikkamagaluru district) ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ (Banakal town) ಅಜಿತ್ ಎಂಬ ಹಿಂದು ಯುವಕನ ಮೇಲೆ ಮುಸ್ಲಿಂ ಯುವಕರ ತಂಡವೊಂದು ಈ ರೀತಿಯಾಗಿ ಹಲ್ಲೆ ಮಾಡಿದೆ. ಅಜಿತ್ ಅವರು ಮುಸ್ಲಿಂ ಯುವತಿಯ ಜೊತೆ ಸ್ನೇಹ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಅಜಿತ್ ಅವರು ಶುಕ್ರವಾರ ಮುಂಜಾನೆ ಉದ್ಯೋಗಕ್ಕೆಂದು ಹೋಗುತ್ತಿದ್ದಾಗ ಬಣಕಲ್ ಪಟ್ಟಣದಲ್ಲಿ ಅಡ್ಡಗಟ್ಟಿದ ಮುಸ್ಲಿಂ ಯುವಕ ತಂಡ ಅವರಿಗೆ ಮುಖ, ಎದೆ ಮತ್ತು ಕಾಲಿನ ಭಾಗಕ್ಕೆ ಹಲ್ಲೆ ಮಾಡಿದೆ. ಈ ವೇಳೆ ಬೀಟ್ ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಅವರನ್ನು ಬಿಡಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ವೈಯಕ್ತಿಕ ದ್ವೇಷದಿಂದ ನನ್ನ ಮೇಲೆ ಅನ್ಯ ಕೋಮಿನ ಯುವಕರ ತಂಡ ಹಲ್ಲೆ ಮಾಡಿದೆ ಎಂದು ಅಜಿತ್ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ. ಆದರೆ, ಯಾವ ವಿಚಾರಕ್ಕೆ ಎನ್ನುವುದನ್ನು ಅವರು ಸ್ಪಷ್ಟವಾಗಿ ತಿಳಿಸಿಲ್ಲ.
ಸ್ಥಳೀಯ ಮಾಹಿತಿಯ ಪ್ರಕಾರ, ಅಜಿತ್ ಅವರು ಮುಸ್ಲಿಂ ಯುವತಿಯೊಬ್ಬರ ಜತೆ ವಿಶ್ವಾಸ, ಸ್ನೇಹಾಚಾರದಿಂದ ಮಾತನಾಡಿದ್ದನ್ನೇ ಗುರಿಯಾಗಿಟ್ಟುಕೊಂಡು ಈ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ಯುವಕರು ಅಲ್ಲಿಂದ ಪರಾರಿಯಾಗಿದ್ದು, ಬಣಕಲ್ ಪೊಲೀಸರು ಅವರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲೂ ನಡೆದಿತ್ತು ನೈತಿಕ ಪೊಲೀಸ್‌ಗಿರಿ, ನಡೆದಿದೆ ಬಂಧನ
ಚಿಕ್ಕಬಳ್ಳಾಪುರ ನಗರದ (Chikkaballapura news) ಗೋಪಿಕಾ ಚಾಟ್ಸ್‌ಗೆ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಜತೆಯಾಗಿ ಬಂದಿದ್ದರು ಎಂಬ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್ (20) ಹಾಗೂ ಸದ್ದಾಂ (21) ಬಂಧಿತ ಆರೋಪಿಗಳು. ಇವರ ಜತೆಗಿದ್ದ ಇನ್ನೊಬ್ಬ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಎರಡು ದಿನಗಳ ಹಿಂದೆ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಅಲ್ಲಿನ ಹೋಟೆಲ್ ಒಂದಕ್ಕೆ ಬಂದಿದ್ದರು. ಆಕೆ ಬುರ್ಕಾ ಮತ್ತು ಹಿಜಾಬ್ ಧರಿಸಿಯೇ ಅಲ್ಲಿಗೆ ಆಗಮಿಸಿದ್ದಳು. ಇದನ್ನು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ನೋಡಿದ್ದಾರೆ. ಮುಸ್ಲಿಂ ಯುವತಿಯ ಜತೆ ಬಂದಿರುವ ಹುಡುಗ ಹಿಂದೂನಾ ಮುಸ್ಲಿಮನಾ ಎಂದು ಅಲ್ಲಿದ್ದವರಿಗೆ ಕುತೂಹಲ ಮೂಡಿದೆ. ಅವರಿಬ್ಬರೂ ಒಳಗೆ ಹೋಗುತ್ತಿದ್ದಂತೆಯೇ ಮುಸ್ಲಿಂ ಯುವಕರು ಅಲ್ಲೇ ಅವರ ಆಸುಪಾಸಿನಲ್ಲಿ ಠಳಾಯಿಸಿದ್ದಾರೆ. ಅವರಿಬ್ಬರೂ ಒಂದು ಟೇಬಲ್‌ಗೆ ಹೋಗಿ ಕುಳಿತಾಗ ಇಬ್ಬರು ಹುಡುಗರು ಬಂದು ಹುಡುಗಿಯ ಜತೆಗೆ ಇರುವವನು ಯಾವ ಧರ್ಮ ಎಂದು ದೃಢಪಡಿಸಿಕೊಂಡು ಬಂದು ಇಬ್ಬರ ಮೇಲೂ ಹಲ್ಲೆ ನಡೆಸಲಾಗಿತ್ತು. ಆ ಕ್ಷಣದಲ್ಲಿ ಕ್ಷಮೆ ಯಾಚಿಸಿದ ಯುವತಿ ಬಳಿಕ ಮನೆಯವರ ನೆರವಿನಿಂದ ಪೊಲೀಸರಿಗೆ ದೂರು ನೀಡಿದ್ದಳು.
ಇದನ್ನೂ ಓದಿ: Moral policing: ಹಿಂದು ಯುವಕನ ಜತೆ ಹೋಟೆಲ್‌ಗೆ ಹೋದ ಮುಸ್ಲಿಂ ಯುವತಿ; ಇಬ್ಬರ ಮೇಲೂ ಹಲ್ಲೆ