ಉಡುಪಿ: ಶಿವಮೊಗ್ಗ, ತುಮಕೂರು ಬಳಿಕ ಈಗ ಉಡುಪಿಯಲ್ಲಿ ವೀರ ಸಾವರ್ಕರ್ ಅವರ ಫೋಟೊ ಇರುವ ಬ್ಯಾನರ್ ವಿವಾದಕ್ಕೆ ಕಾರಣವಾಗಿದೆ. ಆದರೆ, ಇಲ್ಲಿ ಸಾವರ್ಕರ್‌ಗಿಂತಲೂ ಇದರಲ್ಲಿ ಬರೆದಿರುವ ʻಹಿಂದು ರಾಷ್ಟ್ರʼ ಎಂಬ ಒಕ್ಕಣೆ ಕೆಲವರನ್ನು ಕೆರಳಿಸಿದೆ. ಬ್ಯಾನರ್ ತೆರವಿಗೆ ಆಗ್ರಹ ಜೋರಾಗಿದೆ.
ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಲಾಗಿದ್ದ ಅಮೃತ ಮಹೋತ್ಸವಕ್ಕೆ ಶುಭಕೋರುವ ಬ್ಯಾನರ್ ಸದ್ಯ ವಿವಾದಕ್ಕೆ ಕಾರಣವಾಗುತ್ತಿದೆ. 75ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ವೀರ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಚಿತ್ರವಿರುವ ಬ್ಯಾನರ್ ಹಾಕಲಾಗಿತ್ತು.
ಬ್ಯಾನರ್ ಮೇಲ್ಭಾಗದಲ್ಲಿ ʻಜೈ ಹಿಂದೂ ರಾಷ್ಟ್ರʼ ತಲೆ ಬರಹವಿರುವುದನ್ನು ಗಮನಿಸಿದ ಪಿಎಪ್ ಐ ಬ್ಯಾನರ್ ತೆರವು ಮಾಡುವಂತೆ ಆಗ್ರಹಿಸಿದೆ. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಪ್ರಮೋದ್ ಉಚ್ಚಿಲ, ಯೋಗೀಶ್ ಕುತ್ಪಾಡಿ ಮತ್ತು ಶೈಲೇಶ್ ಬ್ಯಾನರ್ ಹಾಕಿದ್ದು, ಉಡುಪಿ ನಗರಸಭೆ ಬ್ಯಾನರ್ ಗೆ ಮೂರು ದಿನದ ಅನುಮತಿ ನೀಡಿದೆ.
ಸದ್ಯ ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಬ್ಯಾನರ್ ತೆರವಿನ ವಿಚಾರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದನ್ನು ಗಮನಿಸಿದ ಉಡುಪಿ ಪೊಲೀಸ್ ರು ಸೋಮವಾರ ರಾತ್ರಿಯಿಂದಲೇ ಬ್ರಹ್ಮಗಿರಿ ಸರ್ಕಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಬುಧವಾರಕ್ಕೆ ಬ್ಯಾನರ್ ಗಡುವ ಮುಗಿಯುವ ಹಿನ್ನಲೆಯಲ್ಲಿ ಸಂಜೆಯ ವೇಳೆಗೆ ಬ್ಯಾನರ್ ತೆರವು ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ| ತುಮಕೂರಿನಲ್ಲೂ ಫ್ಲೆಕ್ಸ್ ವಿವಾದ: ವೀರ ಸಾವರ್ಕರ್ ಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು