Site icon Vistara News

Moral Policing: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಬಿಜೆಪಿ ಠಕ್ಕರ್:‌ ಹೆಲ್ಪ್‌ಲೈನ್‌ಗೆ ಕಾಲ್‌ ಮಾಡಿದ್ರೆ ಬರ್ತಾರೆ 100 ಲಾಯರ್!

BJP and Congress Logo

#image_title

ಬೆಂಗಳೂರು: ರಾಜ್ಯದ ವಿವಿಧೆಡೆ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೆ ಹೇಳಿರುವ ಹಿನ್ನೆಲೆಯಲ್ಲಿ, ತನ್ನ ಕಾರ್ಯಕರ್ತರ ಸಹಾಯಕ್ಕೆ ಬಿಜೆಪಿ ಹೆಲ್ಪ್‌ಲೈನ್‌ ಆರಂಭಿಸಿದೆ.

ಜೂನ್‌ 6ರಂದು ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಗೃಹಸಚಿವ ಡಾ. ಜಿ. ಪರಮೇಶ್ವರ್‌, ಪೊಲೀಸ್ ಇಲಾಖೆಗೆ ಹಲವಾರು ಸವಾಲುಗಳಿವೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಎಂದು ನಂಬಿದ್ದೆವು. ಇಡೀ ದೇಶವೇ ಈ ಮಾತನ್ನು ನಂಬುತ್ತದೆ. ಆದರೆ ಅದರ ಜತೆಗೆ ಬೇರೆ ಮಾತುಗಳೂ ಬಂದಿವೆ. ದ.ಕ ಜಿಲ್ಲೆಯಲ್ಲಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತೂ ಇದೆ. ಹೀಗಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ಕೋಮು ಸೌಹಾರ್ದತೆಗೆ ಈ ಹಿಂದೆ ನಾನು ಪಾದಯಾತ್ರೆಯನ್ನೂ ಮಾಡಿದ್ದೆ. ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ. ನೈತಿಕ ಪೊಲೀಸ್‌ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗುವುದು ಎಂದು ಹೇಳಿದ್ದರು.

ಇದೀಗ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದಿಂದ ಹೆಲ್ಪ್‌ಲೈನ್‌ ಆರಂಭಿಸಲಾಗಿದೆ. ಈ ವ್ಯವಸ್ಥೆಯಲ್ಲಿ ರಾಜ್ಯದ ಮೂರು ಕಡೆಗಳಲ್ಲಿ ನೂರು ವಕೀಲರು ಇರುತ್ತಾರೆ. 18003091907 ಸಂಖ್ಯೆಗೆ ಕರೆ ಮಾಡಿದರೆ ಅವರಿಗೆ ಅಗತ್ಯ ಕಾನೂನು ನೆರವನ್ನು ನೀಡಲು ಸಿದ್ಧವಾಗಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಹಾಗೂ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವೀ ಸೂರ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವೀ ಸೂರ್ಯ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ, ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ರಾಜಕೀಯ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕೋಷ್ಠದ ಯೋಗೇಂದ್ರ ಮತ್ತು ಅವರ 100 ವಕೀಲರ ತಂಡವು ಸಹಾಯವಾಣಿ ಆರಂಭಿಸಿದೆ. ಸದನದ ಒಳಗೆ ಮತ್ತು ಹೊರಗೆ ಇಂಥ ದೌರ್ನಜ್ಯದ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಹೋರಾಟದ ಮೂಲಕವೇ ಬಿಜೆಪಿ ಬೆಳೆದುಬಂದಿದೆ. ಈ ಪಕ್ಷದ ದಮನ ಇವತ್ತಿನದಲ್ಲ. ಇಂಥ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ- ಧೈರ್ಯ ಕಳಕೊಳ್ಳಬಾರದು. ಪಕ್ಷವು ಅನ್ಯಾಯ, ಅವ್ಯವಸ್ಥೆ ವಿರುದ್ಧ ಹೋರಾಟ ಮಾಡೋಣ. ದೌರ್ಜನ್ಯ ನಡೆದರೆ, ಸುಳ್ಳು ಕೇಸು ಹಾಕಿದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದರು.

ಬಿಜೆಪಿ ಕಾರ್ಯಕರ್ತರ ಒಳಿತು ಮತ್ತು ಅವರ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಹೈಕೋರ್ಟ್ ಪೀಠವಿರುವ ಎಲ್ಲ ಜಾಗಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡದ ರಚನೆ ಆಗಿದೆ. ರಾಜ್ಯದ ನೂರಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯ ನಿರ್ವಹಣೆ ಮಾಡಲು ಸಹಕರಿಸುತ್ತಾರೆ ಎಂದು ತಿಳಿಸಿದರು.

ನಮ್ಮ ಕಾರ್ಯಕರ್ತರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಕೆಲಸ ಕಳಕೊಳ್ಳುವಂತೆ ಮಾಡುವ ಪ್ರಯತ್ನ ಹಿಂದೆ ಆಗಿತ್ತು. ಹಿಂದು ಸಂಘಟನೆಗಳ ಕಾರ್ಯಕರ್ತರ ಹತ್ಯೆ ಆದಾಗ ಎಫ್‍ಐಆರ್ ನೋಂದಣಿ ವೇಳೆ ವಿಳಂಬ ಮಾಡಲಾಗುತ್ತಿತ್ತು. ದೋಷಾರೋಪ ಪಟ್ಟಿ ಸಲ್ಲಿಸುವಾಗ ಅದನ್ನು ಸಮರ್ಪಕವಾಗಿ ಸಲ್ಲಿಸುತ್ತಿರಲಿಲ್ಲ. ಕಾಂಗ್ರೆಸ್ಸಿನ ಈ ಸರ್ಕಾರದಲ್ಲೂ ಪ್ರಮುಖ ಸಚಿವರು ಬ್ಯಾಕ್‍ಗ್ರೌಂಡ್ ಸೆಟ್ಟಿಂಗ್ ಮಾಡುವ ಹೇಳಿಕೆ ಕೊಡುತ್ತಿದ್ದಾರೆ. ನಾಳೆ ರಾಜಕೀಯ ದ್ವೇಷದಿಂದ ಮಾಡುವ ಬಂಧನಗಳಿಗೆ ಈಗಿನಿಂದ ವೇದಿಕೆ ಸಿದ್ಧಪಡಿಸುವ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಗೃಹಸಚಿವರು ಕರಾವಳಿ ಭಾಗದಲ್ಲಿ ಅತ್ಯಂತ ಪೂರ್ವಾಗ್ರಹದಿಂದ ಹೇಳಿಕೆ ಕೊಟ್ಟಿದ್ದಾರೆ. ಆ ಭಾಗದಲ್ಲಿ ಕೆಲಸ ಮಾಡುವ ಸಾಂಸ್ಕೃತಿಕ ಸಂಘಟನೆಗಳನ್ನು ಹತ್ತಿಕ್ಕಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸುವುದಾಗಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.

ಹಬ್ಬಗಳ ಮೆರವಣಿಗೆಗೂ ಅವಕಾಶ ಇಲ್ಲ
ಸಂವಿಧಾನದಲ್ಲಿ ರಾಜಕೀಯ ಪಕ್ಷಕ್ಕೆ ಕೊಟ್ಟ ಅವಕಾಶದಂತೆ ನಡೆದುಕೊಂಡರೂ ಸುಳ್ಳು ಕೇಸು ಹಾಕಿದ್ದರು. ಗಣಪತಿ ಹಬ್ಬ, ಯುಗಾದಿ, ರಾಮನವಮಿ, ಹನುಮ ಜಯಂತಿಯ ಸಂದರ್ಭದಲ್ಲೂ ಮೆರವಣಿಗೆಗೆ ಅವಕಾಶ ಕೊಟ್ಟಿರಲಿಲ್ಲ. ಆಗಲೂ ಕೋರ್ಟಿಗೆ ಹೋಗಿ ಅನುಮತಿ ಪಡೆದು ರ‍್ಯಾಲಿ, ಮೆರವಣಿಗೆ, ಶೋಭಾಯಾತ್ರೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು ಎಂದು ತೇಜಸ್ವಿ ಸೂರ್ಯ ಅವರು ಆರೋಪಿಸಿದರು.

ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದೆ. ಮಂತ್ರಿ ಸಹಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸಹಾಯವಾಣಿ ಉದ್ಘಾಟಿಸಲಾಗುತ್ತಿದೆ. ಸಂಸದ ತೇಜಸ್ವಿ ಸೂರ್ಯರವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ವಿಶಿಷ್ಟ ಹೆಲ್ಪ್‌ಲೈನನ್ನು ಬಿಜೆಪಿ ಇವತ್ತು ಆರಂಭಿಸಲಿದೆ. ಇದರ ಮೂಲಕ ಬಿಜೆಪಿ ಕಾರ್ಯಕರ್ತರ ಸುರಕ್ಷತೆಗೆ ಮತ್ತು ಅನೇಕ ಸಂಕಷ್ಟದ ಪರಿಸ್ಥಿತಿಗೆ ನೆರವು ಲಭಿಸಲಿದೆ. ಅನೇಕ ದೌರ್ಜನ್ಯಗಳು ಈಚೆಗೆ ನಡೆದಿದ್ದು, ಇದಕ್ಕೆ ನ್ಯಾಯಕೋರಿ ಪೊಲೀಸರ ಬಳಿ ತೆರಳಿದಾಗ ಅವರ ಸ್ಪಂದನೆಯೂ ಕಡಿಮೆ ಆಗಿದೆ ಎಂದು ಆಕ್ಷೇಪಿಸಿದರು. ಪೊಲೀಸ್ ವ್ಯವಸ್ಥೆ ಮತ್ತು ಕಾನೂನು- ಸುವ್ಯವಸ್ಥೆ ಚುರುಕುಗೊಳಿಸಲು ಈ ಹೆಲ್ಪ್ ಲೈನ್ ಪ್ರಯೋಜನಕಾರಿ ಎಂದು ನುಡಿದರು. ಇದು 24ó-7 ಕೆಲಸ ಮಾಡಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: Moral policing: ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್: ಡಾ. ಜಿ. ಪರಮೇಶ್ವರ್

Exit mobile version