ಬೆಂಗಳೂರು: ಅಗ್ರಿಗೇಟರ್ ಆ್ಯಪ್‌ಗಳಾದ (Aggregator App) ಓಲಾ, ಉಬರ್ ಹಾಗೂ ರ‍್ಯಾಪಿಡೋಗಳಿಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದರೂ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾರಿಗೆ ಪೊಲೀಸರ ರೇಡ್, ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಸುಮಾರು ೩೦ ಸಾವಿರ ಆಟೋ ಚಾಲಕರು ಈಗ ಈ ಆ್ಯಪ್‌ಗಳ ಸೇವೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಈ ಸಂಸ್ಥೆಗಳಿಗೆ ಒಂದು ಮಟ್ಟದ ಹೊಡೆತವನ್ನೇ ಕೊಟ್ಟಿದ್ದು, ಇಷ್ಟು ದಿನ ಈ ಆ್ಯಪ್ ಸೇವೆಗಳನ್ನು ಬಳಸುತ್ತಿದ್ದ ಗ್ರಾಹಕರು ಪರಿತಪಿಸುವಂತಾಗಿದೆ.
ಕಳೆದ ಎರಡು ವಾರಗಳಿಂದ ಅಗ್ರಿಗೇಟರ್ ಆ್ಯಪ್‌ಗಳ ಸೇವೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜನರೂ ಸಹ ಸಾಮಾನ್ಯ ಆಟೋಗಳ ಸೇವೆಗೆ ಮೊರೆ ಹೋಗುತ್ತಿದ್ದರು. ಅಲ್ಲದೆ, ಇಲ್ಲೂ ಸಹ ಮೀಟರ್ ಹಾಕದೇ ಚಲಾಯಿಸುವ ಪ್ರಕರಣಗಳು ವರದಿಯಾಗಿದ್ದರಿಂದ ಅಂತಹ ಆಟೋಗಳು ಕಂಡುಬಂದರೆ ದೂರು ನೀಡಲು ಪೊಲೀಸ್ ಇಲಾಖೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳೂ ದಾಖಲಾಗಿದ್ದವು. ಇನ್ನು ಓಲಾ, ಉಬರ್, ರ‍್ಯಾಪಿಡೋ ಸೇವೆಯನ್ನು ಅನಧಿಕೃತವಾಗಿ ಮಾಡುತ್ತಿದ್ದ ಆಟೋಗಳ ಮೇಲೂ ರೇಡ್ ಮಾಡಿದ ಪೊಲೀಸರು, ೫ ಸಾವಿರ ರೂಪಾಯಿವರೆಗೆ ದಂಡ ವಿಧಿಸಿದ್ದರು. ಇದರಿಂದ ಆಟೋ ಚಾಲಕರು ಸಹ ಸಾಕಷ್ಟು ನಷ್ಟವನ್ನು ಅನುಭವಿಸಿದರು.
ಇದನ್ನೂ ಓದಿ | Ola lay off | ಓಲಾದಲ್ಲಿ 200 ಉದ್ಯೋಗಿಗಳ ವಜಾ ಸಂಭವ
ಮೀಟರ್ ಆಟೋವೇ ಬೆಸ್ಟ್
ಪ್ರಯಾಣಿಕರಿಂದ ದೂರು, ಪೊಲೀಸರಿಂದ ದಂಡ ಸೇರಿದಂತೆ ಸಾಕಷ್ಟು ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಎಲ್ಲ ರಗಳೆಗಳಿಗೆ ಬೇಸತ್ತ ಸುಮಾರು ೩೦ ಸಾವಿರಕ್ಕೂ ಅಧಿಕ ಆಟೋ ಚಾಲಕರು ಈ ಅಗ್ರಿಗೇಟರ್ ಆ್ಯಪ್ ಸೇವೆಗಳಿಂದ ಹಿಂದೆ ಸರಿದಿದ್ದಾರೆ. ಮೂರೂ ಆ್ಯಪ್‌ಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಆಟೋಗಳು ಒಪ್ಪಂದ ಮಾಡಿಕೊಂಡು ಸೇವೆ ನೀಡುತ್ತಿದ್ದವು ಎನ್ನಲಾಗಿದ್ದು, ಈಗ ಇದ್ದಕ್ಕಿದ್ದಂತೆ ಈ ಮಟ್ಟದಲ್ಲಿ ಸೇವೆಯಿಂದ ಹಿಂದೆ ಸರಿದಿರುವುದರಿಂದ ಆ್ಯಪ್ ಸೇವೆಗೆ ಭಾರಿ ಹಿನ್ನಡೆಯಾಗಿದೆ.
ಹೀಗಾಗಿ ಈ ಮೊದಲಿನ ಮೀಟರ್ ಸೇವೆಗೆ ಮೊರೆಹೋಗುತ್ತಿರುವ ಆಟೋ ಚಾಲಕರು, ಗ್ರಾಹಕರ ಸೇವೆಗೆ ಮರಳುತ್ತಿದ್ದಾರೆ. ಇದರಿಂದಾಗಿ ಈಗ ಆ್ಯಪ್‌ಗಳಲ್ಲಿ ಆಟೋ ಬುಕ್ ಮಾಡಲು ಬಹಳ ಕಷ್ಟಪಡುವಂತಾಗಿದ್ದು, ೫ರಿಂದ ೧೦ ನಿಮಿಷಗಳ ವರೆಗೂ ಕೆಲವೊಮ್ಮೆ ಕಾಯಬೇಕಿದೆ.
ಏನಿದು ಅಗ್ರಿಗೇಟರ್ ಆ್ಯಪ್ ಮತ್ತು ವೃತ್ತಾಂತ!
ಆಟೋಗಾಗಿ ಕಾದು, ಹೋಗಬೇಕಿರುವ ಜಾಗಕ್ಕೆ ಬರುತ್ತೀರಾ ಎಂದು ಆಟೋಗಳನ್ನು ಕೇಳಿ ಕೇಳಿ ಬಸವಳಿದಿದ್ದ ಜನತೆಗೆ ಈ ಅಗ್ರಿಗೇಟರ್ ಆ್ಯಪ್‌ಗಳು ಸಂಜೀವಿನಿಯಂತೆ ಕೆಲಸ ಮಾಡಿದ್ದವು. ಕುಳಿತಲ್ಲೇ ಆಟೋಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಿದವು. ಗ್ರಾಹಕರು ಮತ್ತು ಆಟೋಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ಈ ಆ್ಯಪ್‌ಗಳು ಎರಡೂ ಕಡೆಯಿಂದ ಕಮಿಷನ್ ಇಟ್ಟುಕೊಳ್ಳುತ್ತಿದ್ದವು. ಮೊದಲಿಗೆ ದರದಲ್ಲೂ ಸಾಕಷ್ಟು ರಿಯಾಯಿತಿ ಇತ್ತು. ಬರಬರುತ್ತಾ ಬಳಕೆದಾರರು ಹೆಚ್ಚಿದರು. ಹಾಗೇ ದರದಲ್ಲೂ ಏರಿಕೆಯಾಯಿತು. ಇದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಯಿತು. ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾದವು. ಸರ್ಕಾರ ಮಧ್ಯಪ್ರವೇಶ ಮಾಡಿತು. ಆಟೋ ಸೇವೆಗೆ ನಿರ್ಬಂಧ ಹೇರಿತು. ಆದರೆ, ಕೋರ್ಟ್ ಮೊರೆಹೋದ ಅಗ್ರಿಗೇಟರ್ ಆ್ಯಪ್‌ಗಳು ಸರ್ಕಾರದ ಕ್ರಮಕ್ಕೆ ತಾತ್ಕಾಲಿಕ ತಡೆ ಪಡೆದುಕೊಂಡವು. ಶೇ. ೧೦ ಸೇವಾ ಶುಲ್ಕ ಹಾಗೂ ಶೇ. ೫ ಜಿಎಸ್‌ಟಿ ಹಾಕುವ ಸಂಬಂಧ ಒಪ್ಪಿಗೆ ನೀಡಿದ್ದ ಕೋರ್ಟ್ ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕಂಡು ೧೫ ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ ೭ಕ್ಕೆ ಮುಂದೂಡಿತ್ತು.
ಇದನ್ನೂ ಓದಿ | ಓಲಾ, ಉಬರ್, ರ‍್ಯಾಪಿಡೋಗೆ ತಾತ್ಕಾಲಿಕ ಜಯ; ಶೇ.10 ಮೀರದಂತೆ ದರ ವಿಧಿಸಿ, ಜಿಎಸ್‌ಟಿ ಪಡೆಯಬಹುದೆಂದ ಕೋರ್ಟ್