ಧಾರವಾಡ: ʻʻರೈತ ಶಕ್ತಿ ಯೋಜನೆಯಡಿ ಪ್ರತಿ ರೈತನಿಗೆ 10 ಲೀಟರ್ ಡೀಸೆಲ್ ನೀಡಲಾಗುತ್ತದೆ. ಇದಕ್ಕಾಗಿ ಇದೇ ತಿಂಗಳಲ್ಲಿ ರೈತರ ಖಾತೆಗೆ ಸಹಾಯಧನ ಜಮಾ ಮಾಡಲಿದ್ದು, ರೈತರ ಪರವಾಗಿ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ,ʼʼ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಈ ವರ್ಷದ ಭಾರಿ ಮಳೆ ಶಾಪವಾಗಿ ಪರಿಣಮಿಸಿದೆ. ನಾನು ಎಲ್ಲ ಭಾಗಗಳಲ್ಲಿ ಸಂಚರಿಸಿ ರೈತರ ಕಷ್ಟವನ್ನು ನೋಡಿದ್ದೇನೆ. ಏಪ್ರಿಲ್ 5ರಿಂದಲೇ ರಾಜ್ಯದ ಎಲ್ಲ ಭಾಗದಲ್ಲಿ ಸುತ್ತಾಡುತ್ತಿದ್ದೇನೆ. ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೋವಿಡ್ ಸಂದರ್ಭದಲ್ಲೂ ರೈತ ತನ್ನ ಕರ್ತವ್ಯ ಮರೆಯದೆ ಅಪಾರ ಪ್ರಮಾಣದ ಧಾನ್ಯ, ತರಕಾರಿ ಬೆಳೆದಿದ್ದಾರೆ. ಟಾಟಾ, ಬಿರ್ಲಾ, ಅಂಬಾನಿ, ಅದಾನಿ ದೇಶಕ್ಕೆ ಅನ್ನ ಕೊಡಲು ಸಾಧ್ಯವಿಲ್ಲ, ಆ ಕೆಲಸ ರೈತರಿಂದ ಮಾತ್ರ ಆಗುತ್ತದೆ ಎಂದರು.
ಇದನ್ನೂ ಓದಿ | Belagavi | 40 ವರ್ಷಗಳಿಂದ ಅಭಿವೃದ್ಧಿಯಾಗದ ರಸ್ತೆ; ಗ್ರಾಮಕ್ಕೆ ಬಂದ ಬಿಜೆಪಿ ಎಂಎಲ್‌ಎಗೆ ಮಹಿಳೆಯರಿಂದ ತರಾಟೆ
ವ್ಯವಸಾಯ ಮಾಡಲು ಬಿತ್ತನೆ ಬೀಜ, ರಸಗೊಬ್ಬರ ವ್ಯವಸ್ಥೆಯನ್ನು ಕೃಷಿ ಇಲಾಖೆ ಮಾಡುತ್ತದೆ. ಆತ್ಮ ನಿರ್ಭರ ಭಾರತ ಯೋಜನೆಯಡಿ ಕೃಷಿ ಕ್ಷೇತ್ರಕ್ಕಾಗಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ, ರೈತರು, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯವು ಕೃಷಿ ಕ್ಷೇತ್ರದಲ್ಲಿ ದೇಶದಲ್ಲಿ ಮೊದಲ ಸ್ಥಾನ ಗಳಿಸಿದೆ. ಆದರೆ ವೈಜ್ಞಾನಿಕ ವಿಧಾನಗಳನ್ನು ರೈತರು ಕೃಷಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧಾರವಾಡ ಸೇರಿ 13ಕ್ಕೂ ಹೆಚ್ಚು ಜಿಲ್ಲೆಗಳಿಂದ ಕೃಷಿ ಮೇಳಕ್ಕೆ ಸಾವಿರಾರು ರೈತರು ಆಗಮಿಸಿದ್ದರು. ಕೃಷಿ ಯಂತ್ರೋಪಕರಣ ಹಾಗೂ ವಿವಿಧ ತಳಿಯ ಬಿತ್ತನೆ ಬೀಜಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವೈಜ್ಞಾನಿಕ ಕೃಷಿ ಪದ್ಧತಿ ಬಗ್ಗೆ ಸಿಬ್ಬಂದಿ ರೈತರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ | Ballary VIMS | ವಿದ್ಯುತ್ ವ್ಯತ್ಯಯಕ್ಕೂ ಸಾವಿಗೂ ಸಂಬಂಧವಿಲ್ಲ: ಸಚಿವ ಸುಧಾಕರ್ ಪ್ರಾಥಮಿಕ ವರದಿ