ಧಾರವಾಡ: ಪ್ರಿಯಾಂಕ್ ಖರ್ಗೆ ಅವರಿಗೆ ಜೊಲ್ಲು ಸುರಿಸುವುದು ಗೊತ್ತಿದೆ, ಜೊಲ್ಲು ಸುರಿಸುವುದರಲ್ಲಿ ಅವರು ನಿಸ್ಸೀಮರು. ವಾಸ್ತವಾಂಶದ ಅರಿವಿಲ್ಲದ ಅವರೆಲ್ಲ ಹೈಲೈಫ್‌ನಲ್ಲಿ ಬೆಳೆದವರು. ರೈತರ ಬಗ್ಗೆ ಕಾಳಜಿ ಇಲ್ಲ, ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಈ ಹಿಂದೆ ಅವರು ಮಾತನಾಡಿದ್ದಾರೆ, ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದ್ದಾರೆ.
ʻʻಸಿಎಂ ಬೊಮ್ಮಾಯಿ 5000 ಕೋಟಿ ರೂಪಾಯಿ ಘೋಷಣೆಯಿಂದ ಕಮಿಷನ್‌ಗಾಗಿ ಬಿಜೆಪಿ ಶಾಸಕರಿಗೆ ಜೊಲ್ಲು ಸುರಿಯಲು ಆರಂಭವಾಗಿದೆʼʼ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಅವರದ್ದು ಉದ್ರಿ ಭಾಷಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ʻʻಸಿಎಂ ಬೊಮ್ಮಾಯಿ ದಡ್ಡರಿಲ್ಲ, ಅತ್ಯಂತ ಚಾಣಾಕ್ಷರಿದ್ದಾರೆ. ಭಾಷಣ ಮಾಡುವುದು ಅವರಿಗೆ ಗೊತ್ತಿದೆ, ಯಾವುದೇ ಕಾರ್ಯಕ್ರಮ ನಿಭಾಯಿಸುವುದು, ಆಡಳಿತ ನಡೆಸುವುದು ಅವರಿಗೆ ಗೊತ್ತು. ಯಾವುದೇ ವಿಷಯ ತೆಗೆದುಕೊಂಡರೂ ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ, ಅದನ್ನು ಪ್ರಿಯಾಂಕ ಖರ್ಗೆ ಅವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲʼʼ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ | ದೇಶ ಉಳಿಯಲಿ ಎಂದು ಸೋನಿಯಾ, ರಾಹುಲ್ ಪ್ರಧಾನಿ ಹುದ್ದೆ ತ್ಯಜಿಸಿದರು: ಮೈಸೂರಿನಲ್ಲಿ ಡಿಕೆಶಿ ಮಾತು
ಅಪ್ಪ-ಮಗನ ಆಡಳಿತದಿಂದ ಹಿಂದುಳಿದ ಕರ್ನಾಟಕ ಎಂಬ ಹಣೆಪಟ್ಟಿ: ಸಚಿವ ಸಿ.ಸಿ. ಪಾಟೀಲ್
ಗದಗ: ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಅಪ್ಪ ಆಡಳಿತ ನಡೆಸಿದರೂ ಹೈದರಾಬಾದ್ ಕರ್ನಾಟಕ ಭಾಗ ಹಿಂದುಳಿದ ಕರ್ನಾಟಕ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಘನತೆ ಹೆಚ್ಚಿಸಿದೆ. ಬಾಯಿ ಚಪಲಕ್ಕೆ ಮಾತನಾಡಬಾರದು ಎಂದು ಪ್ರಿಯಾಂಕ್ ಖರ್ಗೆಗೆ ಸಚಿವ ಸಿ.ಸಿ. ಪಾಟೀಲ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಅನುದಾನ ವಿಚಾರ ಕೇಳಿ ಬಿಜೆಪಿ ಶಾಸಕರು ಜೊಲ್ಲು ಸುರಿಸುತ್ತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಜೊಲ್ಲು ಸುರಿಸುವ ರೂಢಿ ಇದ್ದುದರಿಂದಲೇ ಜೊಲ್ಲು ಸುರಿಸುವ ಬಗ್ಗೆ ಮಾತನಾಡ್ತಾರೆ. ಮಾತಿನ ಮೇಲೆ ಹಿಡಿತ ಇರಬೇಕು ಎಂದು ಕಿಡಿಕಾರಿದರು.
ಇದನ್ನೂ ಓದಿ | ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹5 ಸಾವಿರ ಕೋಟಿ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ