ಮಂಗಳೂರು: ರಂಬುಟಾನ್, ಮ್ಯಾಂಗೋಸ್ಟಿನ್ ಮೊದಲಾದ ವಿಶಿಷ್ಟ ಹಣ್ಣುಗಳನ್ನು ಕರಾವಳಿಗೆ ಪರಿಚಯಿಸಿದ, ಬಿದಿರ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದ ಮೂಡುಬಿದಿರೆಯ ಕೃಷಿ ಋಷಿ(Agriculture saint) ಡಾ.ಎಲ್.ಸಿ. ಸೋನ್ಸ್ ಇನ್ನಿಲ್ಲ. ನಾಲ್ಕೈದು ದಶಕಗಳ ಹಿಂದೆಯೇ ನನಗೆ ಬೇಕಾದ ಗಿಡಗಳನ್ನು ವಿದೇಶದಿಂದ ತರಿಸಿಕೊಳ್ಳುವಷ್ಟು ಸಂಪರ್ಕ ಹೊಂದಿದ್ದ ಈ ಸಂತ ಬುಧವಾರ ತಮ್ಮ 90ನೇ ವಯಸ್ಸಿನಲ್ಲಿ ಇಹಲೋಕದ ಸಂಪರ್ಕವನ್ನು ಕಳೆದುಕೊಂಡರು.
ಮೂಡುಬಿದಿರೆಯ ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ ಎಂಬ ಕೃಷಿ ಲೋಕವನ್ನು ಮುನ್ನಡೆಸುತ್ತಿದ್ದ ಪ್ರಗತಿಪರ ಕೃಷಿಕ, ಕೃಷಿ ಲೋಕದ ಅನನ್ಯ ಸಾಧಕ ಡಾ. ಲಿವಿಂಗ್‌ಸ್ಟನ್ ಚಂದ್ರಮೋಹನ್ ಸೋನ್ಸ್ ಅವರು ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಅವರೊಂದಿಗೇ ಕೃಷಿಯಲ್ಲಿ ತೊಡಗಿಸಿಕೊಂಡ ಸಹೋದರ ಐ.ವಿ.ಸೋನ್ಸ್ ಅವರನ್ನು ಅಗಲಿದ್ದಾರೆ. ಅವರು ಹುಟ್ಟಿದ್ದು 1934ರ ಏಪ್ರಿಲ್ 4ರಂದು. ಅಂದರೆ ಸರಿಯಾಗಿ 90 ವರ್ಷದ ತುಂಬು ಬದುಕು ಬಾಳಿದ್ದಾರೆ.
ಭಾರತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಪದವಿಗಳನ್ನು ಪಡೆದು ಅಮೆರಿಕದ ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಸೋನ್ಸ್‌ರು ಕರ್ನಾಟಕದ ಕೃಷಿ ಚರಿತ್ರೆಯಲ್ಲಿ ದಾಖಲಾರ್ಹ ಹೆಸರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ..
ಸೋನ್ಸ್ ಪ್ರಪಂಚದ ಕೃಷಿಯನ್ನು ನೋಡಿದವರು. ಅದೇ ಉದ್ದೇಶದಿಂದ ದೇಶ ಸುತ್ತಿದವರು. ಕೋಶ ಓದಿದವರು, ಬೀಜ, ಹವಾಮಾನ, ಪೋಷಣೆ, ಮಾರುಕಟ್ಟೆ ಇತ್ಯಾದಿಗಳನ್ನು ಅಧ್ಯಯನ ಮಾಡಿದವರು, ನಾಲೈದು ದಶಕಗಳ ಹಿಂದೆಯೇ ತಮಗೆ ಬೇಕಾದ ಗಿಡಗಳನ್ನು ವಿದೇಶಗಳಿಂದ ವಿಮಾನದಲ್ಲಿ ತರಿಸಿದವರು. ಅಂಥ ಗಿಡಮೂಲಗಳಿಂದಲೇ ಕಸಿ ಕಟ್ಟುವಿಕೆ, ನರ್ಸರಿ ಮೂಲಕ ಗಿಡ ವೃದ್ಧಿಸಿ ಹಂಚಿದವರು. ರಂಬುಟಾನ್, ಮ್ಯಾಂಗೋಸ್ಟಿನ್, ಅನಾನಸು, ತೆಂಗು, ಬಿದಿರು ಕೃಷಿಗೆ ಸೋನ್ಸ್ ಈಗಲೂ ಐಕಾನ್.
ಇಂತಹ ಸೋನ್ಸರ ಬಗ್ಗೆ ‘ಸೋನ್ಸ್ ಬಿತ್ತಿದ ಫಲ ಪ್ರಪಂಚ -ಸೋನ್ಸ ಫಾರ್ಮ್’ ಎಂಬ ಪುಸ್ತಕ ಒಂದನ್ನು ಬರೆದು ಇದೇ ಏಪ್ರಿಲ್ 16ರಂದು ಬಿಡುಗಡೆಗೊಳಿಸಲು ನಿಗದಿಯಾಗಿತ್ತು. ಮೂಡುಬಿದ್ರೆಯ ಅವರ ಅಭಿಮಾನಿಗಳೆಲ್ಲ ಈ ಕಾರ್ಯಕ್ರಮವನ್ನು ‘ಕನ್ನಡಭವನ’ದಲ್ಲಿ ಆಯೋಜಿಸಿದ್ದರು. ಅದರ ನಡುವೆಯೇ ಸೋನ್ಸ್ ಅವರು ನಿರ್ಗಮಿಸಿದ್ದಾರೆ.
ಮಾದರಿ ಕೃಷಿಕರಾಗಿದ್ದರ ಜತೆಗೆ ಜಲ ತಜ್ಞರಾಗಿಯೂ ವಿಶೇಷ ಪರಿಣಿತಿಯನ್ನು ಪಡೆದಿದ್ದರು. ಅವರ ಫಾರ್ಮ್ ನಿಜಾರ್ಥದಲ್ಲಿ ಒಂದು ಪ್ರವಾಸಿ ತಾಣ. ಕೃಷಿಕರು, ವಿದ್ಯಾರ್ಥಿಗಳು ಎನ್ನದೆ ನೂರಾರು ಮಂದಿ ಇಲ್ಲಿನ ಕೃಷಿಯನ್ನು ನೋಡಲು ಬರುತ್ತಿದ್ದರು. ಫೋಟೊ ತೆಗೆಸಿಕೊಳ್ಳುವವರ ಮೆಚ್ಚಿನ ತಾಣವಾಗಿಯೂ ಇದು ಪ್ರಸಿದ್ಧ.
ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದ ಸಲಹೆಗಾರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶ್ರೀಮಹಾವೀರ ವಿಧ್ಯಾವರ್ಧಕ ಸಂಘ, ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕೃಷಿ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆಲ್ಫ್ರೆಡ್ ಸೋನ್ಸ್ ಫೌಂಡೇಶನ್ ಸ್ಥಾಪಿಸಿದ್ದರು.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಿಂದ ಉತ್ತಮ ತೋಟಗಾರಿಕಾ ಸಾಧಕ ಪ್ರಶಸ್ತಿ, ಅಮೆರಿಕ ಮೊಟಾನಾ ವಿಶ್ವ ವಿದ್ಯಾಲಯದಿಂದ ವಿಶೇಷ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಮೇರಿಕದ ಹಳೇ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಅನ್ಯ ದೇಶದಿಂದ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.