ಬೆಂಗಳೂರು: ಆರ್ಯವೈಶ್ಯ ಸಮಾಜ ರುಚಿಕರ ತಿಂಡಿ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಸಮುದಾಯದವರಿಗೆ ಆಹಾರ ಪದಾರ್ಥಗಳ ಮಾರಾಟಕ್ಕೆ ಅನುಕೂಲವಾಗಲು ಆರ್ಯ ವೈಶ್ಯ ಆಹಾರ ವಾಹಿನಿ ಕೊಡುತ್ತಿದ್ದೇವೆ. ಈ ಯೋಜನೆಯಲ್ಲಿ ಫಲಾನುಭವಿಗೆ 2 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮ ಒಂದರಲ್ಲಿ ಮಾತ್ರ ಸರ್ಕಾರ ಕೊಟ್ಟ ಹಣ ವಾಪಸ್ ಬರುತ್ತಿದೆ. ಬೇರೆ ನಿಗಮಗಳು ಇದೇ ರೀತಿಯಾದರೆ ಒಳ್ಳೆಯದು. ಎಲ್ಲ ಸೇವೆಗಳನ್ನು ಕಾಗದ ರಹಿತ, ಆನ್‌ಲೈನ್ ಮೂಲಕ ನೀಡುತ್ತಿದ್ದೇವೆ. ಸರ್ಕಾರದ ಯೋಜನೆಗಳ ಮೂಲಕ ವಿವಿಧ ನಿಗಮಗಳಿಗೆ ಸಹಾಯವಾಗುತ್ತಿದೆ. ಸದ್ಯ ಆರ್ಯ ವೈಶ್ಯ ನಿಗಮಕ್ಕೆ ಅಧ್ಯಕ್ಷರು ಇಲ್ಲದ ಕಾರಣ ನಾನೇ ಅಧ್ಯಕ್ಷನಾಗಿದ್ದೇನೆ. ಮುಂದೆ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.
ಸಾಗುವಳಿದಾರರಿಗೆ ಸಿಹಿ ಸುದ್ದಿ
ಸಾಗುವಳಿಗೆ ಸಂಬಂಧಪಟ್ಟಂತೆ ಸಿಹಿಸುದ್ದಿ ಕೊಡಲಿದ್ದೇವೆ. ಸೇಂದಿವನ ಉಳುಮೆ ಮಾಡುವವರಿಗೆ ಜಾಗ ನೀಡಿರಲಿಲ್ಲ. ಇದಕ್ಕೆ ಸಂಬಂಧಪಟ್ಟ ಕಾಯ್ದೆಯನ್ನು ತಿದ್ದುಪಡಿ ಮಾಡಲು ತೀರ್ಮಾನ ಮಾಡಿದ್ದೇವೆ. ಹಾಗೆಯೇ ಡ್ಯಾಂ ಕಟ್ಟುವ ವೇಳೆ ಎಚ್.ಡಿ.ಕೋಟೆಯಲ್ಲಿ ಅರಣ್ಯ ವಾಸಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇದರಿಂದ ನಿರಾಶ್ರಿತರಾಗಿದ್ದವರಿಗೆ 1300 ಎಕರೆ ಜಮೀನು ಕೊಡಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆ, ಜನರ ಮಧ್ಯೆ ಸಂಘರ್ಷ ಇದೆ. ಈ ಸಂಬಂಧ ಶುಕ್ರವಾರ (ಡಿ. ೯) ಸಭೆ ಮಾಡಲಾಗುತ್ತದೆ. ಇದರಿಂದ 200ಕ್ಕೂ ಹೆಚ್ಚು ಜನರಿಗೆ ಸಹಾಯವಾಗಲಿದೆ ಎಂದು ಅಶೋಕ್ ತಿಳಿಸಿದರು.
ಇದನ್ನೂ ಓದಿ | Border Dispute | ಬೆಳಗಾವಿ ನಮ್ಮದು, ಒಂದಿಂಚೂ ಬಿಟ್ಟು ಕೊಡಲ್ಲ; ಸರ್ಕಾರ ಒಳ್ಳೇ ವಕೀಲರ ನೇಮಿಸಲಿ: ಸಿದ್ದು