ಬೆಂಗಳೂರು: ಇನ್ನೇನು ಹಾರಾಟ ನಡೆಸಬೇಕು ಎಂದಿದ್ದ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಸಂಸದ ತೇಜಸ್ವಿ ಸೂರ್ಯ ತೆರೆದಿದ್ದರಿಂದಾಗಿ ವಿಮಾನದ ಹಾರಾಟ ಎರಡು ಗಂಟೆಗೂ ಹೆಚ್ಚು ತಡೆವಾಗಿದ್ದರ ಜತೆಗೆ ಸುರಕ್ಷತಾ ಸೂಚನೆಗಳನ್ನೂ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡಿಸೆಂಬರ್ 10ರಂದು ಚೆನ್ನೈಯಿಂದ ತಿರುಚಿರಾಪಳ್ಳಿಗೆ ತೆರಳುತ್ತಿದ್ದ ಇಂಡಿಗೋ 6E ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕರೊಬ್ಬರು ತೆರೆದಿದ್ದರಿಂದಾಗಿ ಸಹ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ವಿಮಾನ ಟೇಕಾಫ್ ಆಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮತ್ತೊಂದು ಸುದ್ದಿ ಸಂಸ್ಥೆ ಈ ಕುರಿತು ವರದಿ ಮಾಡಿದ್ದು, ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಎಂದು ತಿಳಿಸಿದೆ. ಈ ದ್ವಾರವನ್ನು ತೆರೆದಿದ್ದರಿಂದಾಗಿ ವಿಮಾನ ಹಾರಾಟ 142 ನಿಮಿಷ ತಡವಾಯಿತು. ಆದರೆ ಈ ಘಟನೆಯನ್ನು ಒಪ್ಪಲು ಅಥವಾ ನಿರಾಕರಿಸಲು ತೇಜಸ್ವಿ ಸೂರ್ಯ ನಿರಾಕರಿಸಿದ್ದಾರೆ. ಈ ಬಗ್ಗೆ ಡಿಜಿಸಿಎ ವರದಿ ಕೇಳಿದರೆ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾಗಿ ವರದಿ ಮಾಡಿದೆ. ಆದರೆ ಈ ಘಟನೆ ಕುರಿತು ವಿಮಾನಯಾನ ಕಂಪನಿಯು ಡಿಜಿಸಿಎಗೆ ಯಾವುದೇ ದೂರನ್ನು ನೀಡಿಲ್ಲ ಎನ್ನಲಾಗಿದೆ.
ಅಣ್ಣಾಮಲೈ ಸಹ ಜತೆಗೆ?
ತುರ್ತು ನಿರ್ಗಮನ ದ್ವಾರವನ್ನು ತೇಜಸ್ವಿ ಸೂರ್ಯ ತೆರೆದಾಗ, ಪಕ್ಕದಲ್ಲಿ ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ಸಹ ಇದ್ದರು ಎನ್ನಲಾಗಿದೆ. ತಾವು ಈ ರೀತಿ ಮಾಡಿದ್ದಕ್ಕೆ ಪ್ರಯಾಣಿಕರಲ್ಲಿ ತೇಜಸ್ವಿ ಸೂರ್ಯ ಕ್ಷಮೆ ಯಾಚಿಸಿದ್ದಾರೆ. ನಂತರ ವಿಮಾನ ಸಂಸ್ಥೆಯ ಸಿಬ್ಬಂದಿಯೂ ಪ್ರಯಾಣಿಕರಲ್ಲಿ ಕ್ಷಮೆ ಕೋರಿದೆ. ಅಣ್ಣಾಮಲೈ ಅವರು ತಿಳಿ ಹೇಳಿದ ನಂತರ ಲಿಖಿತವಾಘಿ ಕ್ಷಮಾಪಣೆ ಪತ್ರವನ್ನು ತೇಜಸ್ವಿ ಸೂರ್ಯ ಬರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ವಾಗ್ದಾಳಿ
ಈ ಘಟನೆ ಕುರಿತು ಕೆಪಿಸಿಸಿ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ. “ಬಿಜೆಪಿಯ ವಿಐಪಿ ಕೂಸು. ವಿಮಾನಯಾನ ಸಂಸ್ಥೆ ಯಾವ ಧೈರ್ಯದ ಮೇಲೆ ದೂರು ನೀಡುತ್ತದೆ? ಅಧಿಕಾರದಲ್ಲಿರುವ ಬಿಜೆಪಿಯವರು ನಡೆದುಕೊಳ್ಳುವ ಸಾಮಾನ್ಯ ರೀತಿಯೇ ಇದಾಗಿದೆಯೇ? ಈ ಘಟನೆಯಿಂದಾಗಿ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟಾಗಿತ್ತೆ? ಓಹ, ಬಿಜೆಪಿಯ ವಿಐಪಿಗಳನ್ನು ನಾವು ಪ್ರಶ್ನೆ ಕೇಳುವಂತಿಲ್ಲವೇ?” ಎಂದು ಟೀಕಿಸಿದ್ದಾರೆ.